Index   ವಚನ - 4    Search  
 
ಭಕ್ತಸ್ಥಲ ಪೃಥ್ವಿರೂಪೆಂದಲ್ಲಿ ಸರ್ವಮಯ ಅಧೀನನಾಗಿರಬೇಕು. ಮಾಹೇಶ್ವರಸ್ಥಲ ಅಪ್ಪುರೂಪೆಂದಲ್ಲಿ ಚರಸ್ಥಾವರಾದಿಕಂಗಳಲ್ಲಿ ಸರ್ವಸಾರಮಯನಾಗಿರಬೇಕು ಪ್ರಸಾದಿಸ್ಥಲ ಅಗ್ನಿರೂಪಾದಲ್ಲಿ ತಾನೆನ್ನದೆ ಸೋಂಕಿದುದೆಲ್ಲ ದಗ್ಧಸ್ವರೂಪವಾಗಿರಬೇಕು. ಪ್ರಾಣಲಿಂಗಿಸ್ಥಲ ವಾಯುವಂತಾಗಬೇಕೆಂಬಲ್ಲಿ ಸುಗುಣ ದುರ್ಗುಣ ರೋಚಕ ಅರೋಚಕವಿಲ್ಲದೆ ಆವಾವ ರೂಪಿನಲ್ಲಿಯೂ ಸಂಚರಿಸಲಿಕ್ಕೆ ಪರಿಪೂರ್ಣವಾಗಿಪ್ಪ ತೆರದಂತೆ. ಶರಣಸ್ಥಲ ಆಕಾಶದಂತೆ ಆಗಬೇಕೆಂದಲ್ಲಿ ಕುಶಬ್ದ ಸುಶಬ್ದಂಗಳೆಂಬಲ್ಲಿ ಭಿನ್ನಭಾವವಿಲ್ಲದೆ ಉಭಯ ಧೂಮ್ನಂಗಳ ಕವಳೀಕರಿಸಿಕೊಂಡು ಭಾವರಹಿತವಾಗಿಪ್ಪುದು. ಐಕ್ಯಸ್ಥಲ ಮಹದಾಕಾಶದಂತೆ ಆಗಬೇಕೆಂಬಲ್ಲಿ ಬೆಳಗಿನ ಕಳೆ ಆವರಣದಲ್ಲಿ ಅಳಿದಂತೆ ಕುಂಭದ ವೆಜ್ಜದಲ್ಲಿ ನೀರು ಇಂಗಲಿಕ್ಕೆ ತನ್ನ ಬಿಂಬ ಅಲ್ಲಿಯೆ ಹಿಂಗಿದಂತೆ ಸ್ವಪ್ನದಲ್ಲಿ ದೃಷ್ಟವ ಕಂಡು ಎಚ್ಚತ್ತಲ್ಲಿ ಅದೃಶ್ಯವಾದಂತೆ ವಾಯು ಬೆಳಗಕೊಂಡು ಎಯ್ದೆ ವಾಯುವಿನ ಅಂಗದಲ್ಲಿಯೆ ನಿಶ್ಚಯವಾದಂತೆ, ಇದು ಷಟ್‍ಸ್ಥಲನಿರ್ವಾಹ, ಸದ್ಯೋಜಾತ ಲಿಂಗಕ್ಕೆ ಏಕೀಕರಕೂಟ.