Index   ವಚನ - 15    Search  
 
ಷಟ್‍ಸ್ಥಲ ಮುಂತಾದ ಪಂಚವಿಂಶತಿತತ್ವ, ಏಕೋತ್ತರಶತಸ್ಥಲ ಮುಂತಾದ ಕ್ರಿಯಾಧರ್ಮಂಗಳಲ್ಲಿ ಆಚರಿಸುವುದು ಪೂರ್ವಕಕ್ಷೆಯ ಭೇದ. ಉತ್ತರಕಕ್ಷೆಯಲ್ಲಿ ಲಕ್ಷಿಸಿ ನೋಡಿಹೆನೆಂದಡೆ, ದ್ವೈತಾದ್ವೈತಂಗಳ ತಿಳಿದು, ಸಕಲ ನಿಃಕಲವ ವಿಚಾರಿಸಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳ ಕಂಡು, ಇಷ್ಟಕಾಮ್ಯಮೋಕ್ಷಂಗಳ ಗೊತ್ತಗೆಟ್ಟು ತೂರ್ಯಾತುರೀಯವೆಂಬವ ಪರಿಹರಿಸಿ, ತೀತ ಅತೀತವಪ್ಪುದನು ಕುರುಹಿಟ್ಟು, ಸುರಾಳ ನಿರಾಳ ನಿರವಯಸ್ಥಾನವ ಭೇದಿಸಿ ವೇದಿಸಿ, ಘೃತಪಾನವ ಸ್ವೀಕರಿಸಿದ ನಾಲಗೆಯಂತೆ ಬಂಧವಿಲ್ಲದೆ ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ ಜಲವ ಹೊಯಿದಡೆ ಆ ಜಲಕ್ಕೆ ಆಯುಧದ ಕಲೆದೋರದಂತೆ ನಿಂದ ನಿಜದೊಳಗು ಉತ್ತರಕಕ್ಷೆಯ ಭೇದ. ಇಂತೀ ಉಭಯಕಕ್ಷೆಯಲ್ಲಿ ರಾಗವಿರಾಗವನರಿದು, ನಿಶ್ಶಬ್ದ ನಿರ್ಲೇಪವಾಗಿ ಸದ್ಯೋಜಾತಲಿಂಗವ ಕೊಡಬೇಕು.