Index   ವಚನ - 32    Search  
 
ಆತ್ಮಕ್ಕೂ ಘಟಕ್ಕೂ ಶರಸಂಧಾನದಿಂದ ಆತ್ಮ ಬ್ರಹ್ಮರಂಧ್ರಕ್ಕೆ ಎಯ್ದುವುದಕ್ಕೆ ಮುನ್ನವೆ ಶಿರಚ್ಛೇದನವಾಗಲಿಕ್ಕೆ ಆ ಹಾಹೆ ಆತ್ಮ ಬಯಲ ಕೂಡುವುದನ್ನಕ್ಕ ಅದುವೆ ಭೇದ. ಇಂತೀ ಭೇದ. ಜೀವದ ಆಗುಚೇಗೆಯನರಿದು ಷಡಾಧಾರ ಮುಂತಾದ ದಶವಾಯುವ ಕಂಡು, ನವದ್ವಾರವ ಭೇದಿಸಿ, ಷೋಡಶ ಕಳೆಯಲ್ಲಿ ಮಗ್ನನಾಗಿ ನಿಂದಲ್ಲಿ, ತ್ರಿವಿಧಾತ್ಮದೊಳಗಾದ, ಪಂಚಭೂತಿಕದೊಳಗಾದ, ಪಂಚವಿಂಶತಿತತ್ವದೊಳಗಾದ, ಕ್ರೀ ನಿಃಕ್ರೀ ಧರ್ಮಂಗಳಲ್ಲಿ ಅರಿದೆ ಮರದೆನೆಂಬುದ ಸಾಧನೆಗೊಂಡು, ಪಿಂಡದಲ್ಲಿ ಅರಿದುನಿಂದುದು ಪಿಂಡಜ್ಞಾನ. ಆ ಜ್ಞಾನದಲ್ಲಿ ಸೂಕ್ಷ್ಮಾಂಗನಾಗಿ ಕಾರಣವ ಕೂಡಿಕೊಂಡು, ಆ ಕಾರಣವಾದುದು ಜ್ಞಾನಪಿಂಡದ ಭೇದ. ಇಂತೀ ಪಿಂಡಜ್ಞಾನ ಜ್ಞಾನಪಿಂಡದ ಕೂಟ ಸದ್ಯೋಜಾತಲಿಂಗದ ನಿರುತದಾಟ.