Index   ವಚನ - 41    Search  
 
ಅರಿದೆಹೆನೆಂಬುದು, ಅರುಹಿಸಿಕೊಂಬುದಕ್ಕೆ ಕುರುಹಾವುದು? ಜ್ಞಾತೃವೆ ಅರಿವುದು, ಜ್ಞೇಯವೇ ಅರುಹಿಸಿಕೊಂಬುದು. ಇಂತೀ ಉಭಯದ ಭೇದದ ಮಾತು ತತ್ವಜ್ಞರ ಗೊತ್ತು. ಅಕ್ಷಿಯಿಂದ ನಿರೀಕ್ಷಿಸಿ ನೋಡುವಲ್ಲಿ, ಪ್ರತಿದೃಷ್ಟವ ನೆಟ್ಟು ನೋಡೆ ಕಾಬುದು ಅಕ್ಷಿಯ ಭೇದವೊರಿ ಇದಿರಿಟ್ಟ ದೃಷ್ಟವ ಭೇದವೊ? ಅಲ್ಲ, ಆ ಘಟದ ವಯಸ್ಸಿನ ಭೇದವೋ? ಇಂತೀ ದೃಷ್ಟಕ್ಕೆ ಏನನಹುದೆಂಬೆ? ಏನನಲ್ಲೆಂಬೆ? ಪ್ರತಿದೃಷ್ಟವಿಲ್ಲಾಯೆಂದಡೆ ದೃಷ್ಟಿಗೆ ಲಕ್ಷಣದಿಂದ ಲಕ್ಷಿಸುತ್ತಿಹುದು. ಇಂತೀ ಉಭಯದಲ್ಲಿ ನಿಂದು ನೋಡುವ ಆತ್ಮನು ಅರಿವುಳ್ಳುದೆಂದಡೆ ಪೂರ್ವಾಂಗವ ಘಟಿಸಿದಲ್ಲಿ ಯೌವನವಾಗಿ, ಉತ್ತರಾಂಗ ಘಟಿಸಿದಲ್ಲಿ ಶಿಥಿಲವಾಗಿ ಘಟದ ಮರೆಯಿದ್ದು ಪಲ್ಲಟಿಸುವ ಆತ್ಮನ ಹುಸಿಯೆಂದಡೆ ದೃಷ್ಟನಿಗ್ರಹ, ದಿಟವೆಂದಡೆ ಕಪಟ ಸ್ವರೂಪ. ಇಂತೀ ದ್ವಯದ ಭೇದಂಗಳ ತಿಳಿದು, ಇಷ್ಟತನುವಿನ ಅಭೀಷ್ಟವನರಿತು, ಆ ಅಭೀಷ್ಟದಲ್ಲಿ ದೃಷ್ಟವಾದ ವಸ್ತುವ ಕಂಡು, ಇಪ್ಪೆಡೆಯ ಲಕ್ಷಿಸಿಕೊಂಡು ಶ್ರುತಕ್ಕೆ ಶ್ರುತದಿಂದ, ದೃಷ್ಟಕ್ಕೆ ದೃಷ್ಟದಿಂದ, ಅನುಮಾನಕ್ಕೆ ಅನುಮಾನದಿಂದ- ಇಂತೀ ಗುಣಂಗಳ ವಿವರಂಗಳ ವೇಧಿಸಿ ಭೇದಿಸಿ ಇಷ್ಟವಸ್ತುವಿನಲ್ಲಿ ಲೇಪವಾದುದ ಕಂಡು, ವಸ್ತು ಇಷ್ಟವ ಕಬಳೀಕರಿಸಿ ವೃಕ್ಷದೊಳಗಣ ಬೀಜ ಬೀಜದೊಳಗಣ ವೃಕ್ಷ ಇಂತೀ ಉಭಯದ ಸಾಕಾರಕ್ಕೂ ಅಂಕುರ ನಷ್ಟವಾದಲ್ಲಿ ಇಂದಿಗಾಹ ವೃಕ್ಷ ಮುಂದಣಕ್ಕೆ ಬೀಜ. ಉಭಯವಡಗಿದಲ್ಲಿ ಅಂಡದ ಪಿಂಡ, ಪಿಂಡದ ಜ್ಞಾನ, ಇಂತಿವು ಉಳಿದ ಉಳುಮೆಯನರಿದು ಸದ್ಯೋಜಾತಲಿಂಗವ ಕೂಡಬೇಕು.