Index   ವಚನ - 56    Search  
 
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು. ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ ನವಪಾಷಾಣದೊಳಗಾದ ರತಿಸಂಭವ ಮುಂತಾದ ಷಟ್ಕರ್ಮ ಆಚರಣೆ ಮುಂತಾದ ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು. ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು. ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪ. ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪ. ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ. ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ. ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ. ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ ಅಗ್ನಿಗೆ ಆಕಾಶದ ಉದ್ದ ಕಾಷ್ಠವನೊಟ್ಟಿದಡೂ ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ. ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ, ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ, ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ, ಅರಿವಿಗೆ ತುದಿ ಮೊದಲಿಲ್ಲ. ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ, ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷ್ಠಿಕವಂತನಾಗಿ, ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ, ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ ಬಿಂದು [ ಸಾ]ರಕ್ಕೆ ಮುನ್ನವೆ ಬಿದ್ದಂತೆ ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು.