ಪೃಥ್ವಿಯಲ್ಲಿ ಅಪ್ಪು ಕೂಡಲಿಕ್ಕೆ ಅಗ್ನಿ ಕೂಡಿ ನಾಲ್ಕು ಭೇದವಾಗಿಪ್ಪುದು.
ಆ ಅಗ್ನಿಯಲ್ಲಿ ವಾಯು ಕೂಡಿ ಏಳು ಭೇದವಾಗಿಪ್ಪುದು.
ಆ ವಾಯುವಿನಲ್ಲಿ ಆಕಾಶ ಕೂಡಿ ಹದಿನಾರು ಭೇದವಾಗಿಪ್ಪುದು.
ಇಂತೀ ಪೃಥ್ವಿಯ ಭೇದ, ಅಪ್ಪುವಿನ ಸರ್ವಸಾರ, ಅಗ್ನಿಗೆ ತನ್ಮಯ ಜಿಹ್ವೆ,
ವಾಯುವಿಗೆ ಸರ್ವಗಂಧ, ಆಕಾಶಕ್ಕೆ ಆವರಣ ಅಲಕ್ಷ,
ಇಂತೀ ಪಂಚೀಕರಣಂಗಳ ವಿಭಾಗಿಸಿ ಸೂತ್ರವಿಟ್ಟು
ಒಂದರಿಂದ ಹಲವು ಲೆಕ್ಕವ ಸಂದಣಿಸುವಂತೆ,
ಲೆಕ್ಕವ ಹಲವ ಕಂಡು ಒಂದರಿಂದ ವಿಭಾಗಿಸಿದರೆಂಬುದನರಿದು
ತಾಯ ಗರ್ಭದ ಶಿಶು ಭಿನ್ನವಾದಂತೆ ಸುಖದುಃಖವ ವಿಚಾರಿಸಬೇಕು.
ಸದ್ಯೋಜಾತಲಿಂಗವೆಂದರಿವನ್ನಕ್ಕ ಉಭಯವ ವಿಚಾರಿಸಬೇಕು.