ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ
ತನ್ನಯ ಉಭಯದ ಗುರುವ ತಿಂದು ತೇಗಬೇಕು.
ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು
ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು.
ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು,
ಆ ಶಿಷ್ಯ, ಆ ಲಿಂಗ, ಆ ಭಕ್ತನ,
ಈ ಜಂಗಮ, ಈ ವಿರಕ್ತನ ಕೊಂದು ತಿಂದು
ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ.
ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ.
ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ
ವಿನಾಶವಾದ ನಿರ್ಲೇಪ.