ಕೈಲಾಸವೆಂಬುದು ಕ್ರಮಕೂಟ,
ಮೋಕ್ಷವೆಂಬುದು ಭವದಾಗರ,
ಕಾಯಸಮಾಧಿಯೆಂಬುದು ಪ್ರಪಂಚಿನ ಪುತ್ಥಳಿ.
ಕಾಯ ಜೀವ ಕೂಡಿ ಬಯಲಾಗಿ
ಇನ್ನಾವ ಠಾವಿನಲ್ಲಿ ಪೋಗಿ ನಿಲುವುದು?
ತನುವಿನ ಗಂಭೀರವೆಂಬುದ ಮರಸಿದೆ,
ಸದ್ಗುರುವ ತೋರಿ.
ಸದ್ಗುರುವೆಂಬುದ ಮರೆಸಿದೆ
ನಿಜವಸ್ತು ಶಿಲೆಯ ಮರೆಯಲ್ಲಿದ್ದು.
ಲಿಂಗವೆಂಬುದ ಕುರುಹಿಟ್ಟು ಲಿಂಗವೆಂಬುದ ಮರೆಸಿದೆ,
ತ್ರಿವಿಧ ಬಟ್ಟೆ ಕೆಡುವುದಕ್ಕೆ.
ಜಂಗಮವೆಂಬುದ ತೋರಿ,
ಜಂಗಮವೆಂಬುದ ಮರಸಿ
ನೀನು ಎಲ್ಲಿ ಅಡಗಿದೆ? ಎಲ್ಲಿ ಉಡುಗಿದೆ?
ಎಲ್ಲಿ ಬೆಂದೆ? ಎಲ್ಲಿ ಬೇಕರಿಗೊಂಡೆ?
ನೀನು ಎಲ್ಲಿ ಹೋದೆ?
ಹುಲ್ಲು ಹುಟ್ಟದ ಠಾವಿನಲ್ಲಿ ನೀನೆಲ್ಲಿ ಹೋದೆ?
ಅಲ್ಲಿ ನಿನ್ನವರೆಲ್ಲರ ಕಾಣದೆ,
ಕಲ್ಲು, ಮಣ್ಣು ನೀರಿನಲ್ಲಿ ನೆರೆದಂತೆ ಬದುಕು,
ನನಗಿಲ್ಲಿಯೇ ಸಾಕು. ನೀ ಕೊಟ್ಟ ಕುರುಹಿನಲ್ಲಿಯೆ ಬಯಲು
ಸದ್ಯೋಜಾತಲಿಂಗವೆಂಬುದು ನಿರಾಲಂಬವಾಯಿತ್ತು.