Index   ವಚನ - 1031    Search  
 
ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ ಹೊರಗಿನ ರವದಿಯ ಸವಿದು ಸಂತಸಬಡುವ ಮೇಷದಂತೆ, ಅಂತರಂಗದ ಆತ್ಮತೀರ್ಥವನುಳಿದು ಹೊರಗಿನ ಜಡಭೌತಿಕತೀರ್ಥವ ಬೆದಕಿ ಬೆಂಡಾಗಿ ಹಲವೆಡೆಗೆ ಹರಿವ ನರಗುರಿಗಳು ಕೈಸೇರಿದ ರತ್ನವನೊಗೆದು ಕಾಜಿನ ಗುಂಡನು ಕೊಂಡ ಮರುಳನಂತಾಗಿಪ್ಪರು ನೋಡಾ! "ಆತ್ಮತೀರ್ಥಂ ಸಮುತ್ಸೈಜ್ಯ ಬಹಿಸ್ತೀರ್ಥಾನಿ ಯೋ ವ್ರಜೇತ್‌| ಕರಸ್ಥಂ ಸುಮಹಾರತ್ನಂ ತ್ಯಕ್ತ್ವಾ ಕಾಚಂ ವಿಮಾರ್ಗತೇ"|| ಎಂದುದಾಗಿ, ಕೂಡಲಚೆನ್ನಸಂಗಮದೇವಾ, ನಿಮ್ಮ ನಿಲವಿನ ಗುರುಲಿಂಗಜಂಗಮವೆ ಎನ್ನ ಸ್ವರೂಪವೆಂದರಿದೆನಾಗಿ ಆ ಗುರುಲಿಂಗಜಂಗಮದ ಪಾದೋದಕವೆ ಆತ್ಮತೀರ್ಥವಾಗಿಪ್ಪುದು ಕಾಣಾ. ಅಂತಪ್ಪ ಆತ್ಮತೀರ್ಥವ ಪಡೆದು ಪರಮಪವಿತ್ರನಾಗಿಪ್ಪೆನು.