Index   ವಚನ - 46    Search  
 
ಆವ ವಾಯು ಎತ್ತಿದಲ್ಲಿ ಆ ದಳಗೂಡಿ ಆತ್ಮ ಆಡುತಿಪ್ಪುದೆಂಬರು. ಶರೀರದಲ್ಲಿ ಎಂಟುಕೋಟಿ ರೋಮ, ಮುನ್ನೂರರುವತ್ತು ನಾಡಿ, ಒಂದು ನಾಡಿಗೆ ಮೂರು ಭೇದ, ಮೂರು ಭೇದಕ್ಕೆ ಐದು ಗುಣ. ಇಂತಿವನರಿದು ಇರಬೇಕೆಂಬಲ್ಲಿ ಇಂತೀ ಶರೀರಕ್ಕೆ ಕರಣ ನಾಲ್ಕರಿಂದ, ಮದವೆಂಟರಿಂದ, ವ್ಯಸನವೇಳರಿಂದ, ಅರಿವರ್ಗದಿಂದ, ಐದು ಇಂದ್ರಿಯದಿಂದ, ಹದಿನಾರು ಕಳೆಯಿಂದ, ಮೂರು ವಿಷಯದಿಂದ, ತ್ರಿವಿಧ ಆತ್ಮಗಳಿಂದ, ತ್ರಿಶಕ್ತಿಭೇದದಿಂದ. ಇಂತೀ ವಿವರಂಗಳೆಲ್ಲವ ತಿಳಿದು ಏಕಮುಖವ ಮಾಡಿ ವರ್ಣಕ ವಸ್ತುಕ ಉಭಯವನೊಡಗೂಡಿ ವಸ್ತುವ ಕೂಡಬೇಕೆಂಬನ್ನಕ್ಕ ಈ ದೇಹ ಸಂಜೀ[ವಿನಿ]ಯೆ? ಶಿಲೆಯ ಸುರೇಖೆಯೆ? ತ್ರಿವಿಧಕ್ಕೆ ಅಳಿವಿಲ್ಲದ ಘಟವೆ? ಇಂತಿವೆಲ್ಲವು ಕಥೆ ಕಾವ್ಯದ ವಿಶ್ವಮಯವಪ್ಪ ಕೀಲಿಗೆ ಕೀಲಿನ ಭಿತ್ತಿ. ಇವ ಮರೆದು ಅರಿದವನ ಯುಕ್ತಿ, ತರುವಿನ ಬೂರದ ಹೊರೆಯಲ್ಲಿ ಹೊತ್ತಿದ ಪಾವಕ ಮುಟ್ಟುವುದಕ್ಕೆ ಮುನ್ನವೆ ಗ್ರಹಿಸುವಂತೆ, ಹೇರುಂಡದ ಘಟ ಫಲವ ಗ್ರಹಿಸಿ ಫಲ ಪಕ್ವಕ್ಕೆ ಬಂದಲ್ಲಿ ಭಿನ್ನವಾಗುತಲೆ ಬಿಣ್ಣುವ ತೆರೆದಂತೆ. ಇಂತೀ ಶರೀರ ಘಟಂಗಳಲ್ಲಿ ಅನುಭವಿಸುವ ಆತ್ಮ ಜಡವೆಂದರಿದು ಒಡೆದಲ್ಲಿಯೇ ನಿಜಾತ್ಮವಸ್ತುವನೊಡಗೂಡಬೇಕು ಸದ್ಯೋಜಾತಲಿಂಗದಲ್ಲಿ.