Index   ವಚನ - 60    Search  
 
ತ್ರಿಗುಣಾತ್ಮನೆಂದು, ಪಂಚಭೂತಿಕಾತ್ಮನೆಂದು, ಅಷ್ಟತನುಮೂರ್ತಿಯಾತ್ಮನೆಂದು ಇಂತಿವರೊಳಗಾದ ಮರ್ಕಟ ವಿಹಂಗ ಪಿಪೀಲಿಕ ಜ್ಞಾನಂಗಳೆಂದು, ತ್ರಿಶಕ್ತಿಯೊಳಗಾದ ನಾನಾ ಶಕ್ತಿಭೇದಂಗಳೆಂದು, ಇಂದ್ರಿಯ ಐದರಲ್ಲಿ ಒದಗಿದ ನಾನಾ ಇಂದ್ರಿಯಂಗಳೆಂದು, ಷಡುವರ್ಣದೊಳಗಾದ ನಾನಾ ವರ್ಣಂಗಳೆಂದು, ಸಪ್ತಧಾತುವಿನೊಳಗಾದ ನಾನಾ ಧಾತುಗಳೆಂದು, ಅಷ್ಟಮದಂಗಳೊಳಗಾದ ನಾನಾ ಮದಂಗಳೆಂದು, ಇಂತೀ ನಾನಾ ವರ್ತನಂಗಳನರಿವ ಚಿತ್ತದ ಗೊತ್ತದಾವುದು? ಒಂದು ಗಿಡುವಿನಲ್ಲಿ ಹುಟ್ಟಿದ ಮುಳ್ಳ ಒಂದೊಂದ ಮುರಿದು ಸುಡಲೇತಕ್ಕೆ? ಬುಡವ ಕಡಿದು ಒಡಗೂಡಿ ಸುಡಲಿಕ್ಕೆ ವಿಶ್ವಮಯ ಮೊನೆ ನಷ್ಟ. ಇದು ಪಿಂಡಜ್ಞಾನ, ಶುದ್ಧಜ್ಞಾನೋದಯಭೇದ, ಸದ್ಯೋಜಾತಲಿಂಗವ ಕೂಡುವ ಕೂಟ.