ಎಲ್ಲಾ ಧರೆಯಲ್ಲಿಯೂ ಹೇಮ ಹರಿದ ಮತ್ತೆ
ಅರಿದೊರೆಗಳು ಇರಿದಾಡಲೇತಕ್ಕೆ?
ಎಲ್ಲವೂ ಸತ್ಯಮಯವಾದಲ್ಲಿ
ಅವ ಕೆಟ್ಟನಿವ ಕೆಟ್ಟನೆಂದು ಹೋರಿಯಾಡಲೇತಕ್ಕೆ?
ರತ್ನ ರಜತ ಮೌಕ್ತಿಕ ಹೇಮ ಇವು ಮುಂತಾದ
ಸ್ಥಾವರ ಫಲ ಸಸಿ ವೃಕ್ಷಂಗಳು ಮೊದಲಾದುವೆಲ್ಲವೂ
ತಮ್ಮ ತಮ್ಮ ಸ್ವಸ್ಥಭೂಮಿಗಳಲ್ಲಿ ಅಲ್ಲದೆ ಹುಟ್ಟವಾಗಿ,
ಕುಲವಿಪ್ಪೆಡೆಯಲ್ಲಿ ಆಚಾರ, ಆಚಾರವಿಪ್ಪೆಡೆಯಲ್ಲಿ ನಿಷ್ಠ,
ನಿಷ್ಠೆ ಇಪ್ಪಡೆಯಲ್ಲಿ ನಿಜಲಿಂಗವಸ್ತು,
ವಸ್ತು ನಿಶ್ಚಯವಾದ ಎಡೆಯಲ್ಲಿ ಭಕ್ತಿಯ ಬೆಳೆಸು,
ಕೊಯ್ದು, ಒಕ್ಕಿ, ತೂರಿ, ಅಳತೆ ಸಂದಿತ್ತು
ಸದ್ಯೋಜಾತಲಿಂಗವೆಂಬ ಕಣಜಘಟದಲ್ಲಿ.