Index   ವಚನ - 78    Search  
 
ಭಕ್ತಂಗೆ ಗುರುಲಿಂಗಜಂಗಮದಲ್ಲಿ ಗುಣದೋಷಂಗಳನರಸದಿಪ್ಪುದು. ಮಹೇಶ್ವರಂಗೆ ಆಚಾರಕ್ಕೆ ಅಣುಮಾತ್ರದಲ್ಲಿ ತಪ್ಪದೆ ಕ್ಷಣಮಾತ್ರದಲ್ಲಿ ಸೈರಿಸದಿಪ್ಪುದು. ಪ್ರಸಾದಿಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಸಾದವನರಿದಿಪ್ಪುದು. ಪ್ರಾಣಲಿಂಗಿಗೆ ಅರ್ಪಿತ ಅವಧಾನಂಗಳಲ್ಲಿ, ಸುಗುಣ ದುರ್ಗಣ ಗಂಧಂಗಳಲ್ಲಿ ಮಧುರ ಖಾರ ಲವಣ ಕಹಿ ಮೃದು ಕಠಿಣಂಗಳಲ್ಲಿ ನಿರೀಕ್ಷಣೆಯಿಂದ ಸೋಂಕುವಲ್ಲಿಯ ಸ್ಪರ್ಶನದಲ್ಲಿಯೆ ಅರಿದರ್ಪಿತ ಮುಂತಾಗಿ ಸ್ವಾದಿಸಬೇಕು. ಶರಣನಾದಡೆ ಭೇದಭಾವವಿಲ್ಲದೆ ವಂದನೆ ನಿಂದನೆ ಉಭಯವೆನ್ನದೆ ಸುಖದುಃಖಂಗಳ ಸರಿಗಂಡು ರಾಗವಿರಾಗನಾಗಿಪ್ಪುದು. ಐಕ್ಯನಾದಡೆ ಚಿನ್ನದೊಳಗಡಗಿದ ಬಣ್ಣದಂತೆ, ಸರ್ವವಾದ್ಯದಲ್ಲಿ ಅಡಗಿದ ನಾದದಂತೆ, ಮಂಜಿನ ರಂಜನೆ ಬಿಸಿಲ ಅಂಗದಲ್ಲಿ ಅಡಗಿದಂತೆ. ಇದು ಷಡುಸ್ಥಲದ ಒಪ್ಪ ಸದ್ಯೋಜಾತಲಿಂಗವು ಕ್ರೀಯಲ್ಲಿಪ್ಪ ಭೇದ.