Index   ವಚನ - 80    Search  
 
ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ, ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ. ಬೀಜ ಒಳಗು, ಹಿಪ್ಪೆ ಹೊರಗು, ರಸ ಮಧ್ಯದಲ್ಲಿಪ್ಪ ಭೇದವ ನೋಡಾ. ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು, ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು, ಉಭಯದ ಬಲಿಕೆಯಿಂದ ಮಧುರರಸ ನಿಂದುದ ಕಂಡು ಹಿಪ್ಪೆ ಬೀಜ ಹೊರಗಾದುದನರಿತು, ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ, ಕ್ರೀಯಿಂದ ಒದಗಿದ ಜ್ಞಾನ. ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ ಮಾತು ಸಾಕಂತಿರಲಿ. ಕ್ರೀಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ, ದಿವ್ಯಜ್ಞಾನದಲ್ಲಿ ಕೂಟ. ಇದು ಸದ್ಯೋಜಾತಲಿಂಗದ ಷಟ್‍ಸ್ಥಲ ಲೇಪದಾಟ.