Index   ವಚನ - 91    Search  
 
ಕುಂಭದ ಅಪ್ಪುವಿನ ಸಂಗದಲ್ಲಿ ತಂಡುಲವ ಹಾಕಿ ಅಗ್ನಿಘಟದಿಂದ ಬೇಯಿಸಲಿಕ್ಕಾಗಿ, ಒಂದೊಂದು ತಂಡುಲ ಹಿಂಗಿ ಬೆಂದಿತ್ತೆ? ಆ ಅಪ್ಪು ಬೇರೆ ಬೇರೆ ಸಂಗವ ಮಾಡಿತ್ತೆ? ಆ ಅಗ್ನಿ ತಂಡುಲಕ್ಕೊಂದೊಂದು ಬಾರಿ ಉರಿಯಿತ್ತೆ? ಇಂತೀ ವಿವರಂಗಳ ಭೇದವನರಿತು ಅಂಗದಲ್ಲಿ ಆರು ಸ್ಥಲವನಂಗೀಕರಿಸಿದಲ್ಲಿ ಬೇರೊಂದೊಂದರಲ್ಲಿ ಹಿಂಗಿ ನೋಡಿಹೆನೆಂದಡೆ ಮೂರಕ್ಕಾರು, ಆರಕ್ಕೆ, ಮೂವತ್ತಾರು ಮತ್ತಿವರೊಳಗಾದ ಗುಣ ನಾಮಾತೀತಕ್ಕೆ ಅತೀತವಾಗಿಪ್ಪುದು. ಇಂತೀ ಸ್ಥಲಂಗಳನಹುದೆಂದೊಪ್ಪದೆ, ಅಲ್ಲಾ ಎಂದು ಬಿಡದೆ, ಅಲ್ಲಿಯ ಸ್ಥಲವಲ್ಲಿಯೆ ಏಕೀಕರಿಸಿ, ಅಲ್ಲಿಯ ಭಾವವ ತೋರಿದಲ್ಲಿಯೆ ಲೇಪಮಾಡಿ, ಹಿಡಿದಡೆ ಹಿಡಿತೆಗೆ ಬಾರದೆ, ಬಿಟ್ಟಡೆ ಹರವರಿಯಲ್ಲಿ ಹರಿಯದೆ, ವಸ್ತುಕದಲ್ಲಿ ವರ್ಣಕ ತೋರಿ ಆ ವರ್ಣಕಕ್ಕೆ ವಸ್ತುಕ ಅಧೀನವಾಗಿಪ್ಪ ಉಭಯಸ್ಥಲವನರಿದಲ್ಲಿ ವಿಶ್ವಸ್ಥಲ ನಾಶವಾಗಿ ಸದ್ಯೋಜಾತಲಿಂಗ ವಿನಾಶನವಾಗಬೇಕು.