ತನ್ನನರಿದು ಇದಿರನರಿಯಬೇಕೆಂಬುದು ಪ್ರಮಾಣು.
ಇದಿರ ಗುಣವನರಿತು ತನ್ನ ಗುಣವನರಿದು
ಸಂಪಾದಿಸುವುದು ಅಪ್ರಮಾಣು.
ತನ್ನ ಗುಣವನರಿದು ನಡೆವವರೆಲ್ಲರನು ಕಾಣಬಹುದು.
ಇದಿರ ಗುಣವನರಿತು ತನ್ನ ಗುಣವ ಸಂಬಂಧಿಸಿ
ನಡೆವರೆಲ್ಲರನೂ ಕಾಣಬಾರದು.
ಅದು ನುಡಿದು ನುಡಿಯಿಸಿಕೊಂಬ ಪ್ರತಿಶಬ್ದದಂತೆ.
ತನ್ನ ಗುಣವೇ ತನಗೆ ತಥ್ಯ, ತನ್ನ ಗುಣವೇ ತನಗೆ ಮಿಥ್ಯ.
ಇದಿರ ಗುಣವ ತಾನರಿದು ನಿಲಬಲ್ಲಡೆ
ತನಗೆ ತಥ್ಯವೂ ಇಲ್ಲ ಮಿಥ್ಯವೂ ಇಲ್ಲ.
ಇದು ದ್ವೈತಾದ್ವೈತದ ಭೇದ,
ಸದ್ಯೋಜಾತಲಿಂಗಕ್ಕೆ ಉಭಯಸ್ಥಲ ನಾಶವಿನಾಶ.