Index   ವಚನ - 98    Search  
 
ಬಂಧಿಸಿ ಘಟವ ಬಿಟ್ಟಿಹೆನೆಂದಡೆ ಅಭಿಸಂಧಿಯಲ್ಲಿ ನೋವುದು ಜೀವ. ಕಂದದೆ ಕುಂದದೆ ನಿಜದಲ್ಲಿ ಹೊಂದಿಹೆನೆಂದಡೆ ಸರ್ವೇಂದ್ರಿಯ ಬಂಧುವಿನೊಳಗಿದೆ ಜೀವ. ಒಂದ ಮರೆದು ಒಂದನರಿದು ಮುಂದಣ ಅಡಿಯ ಮೆಟ್ಟಿಹೆನೆಂದಡೆ ಸಂದೇಹದ ಸಂದಣಿಗೊಳಗಿದೆ ಜೀವ. ಗುರುವಿಂದ ಕಂಡೆಹೆನೆಂದಡೆಅದು ಧರ್ಮಬೀಜ, ನಾನು ಕರ್ಮಬೀಜ. ಲಿಂಗದಿಂದ ಕಂಡೆಹೆನೆಂದಡೆ ಚತುರ್ವಿಧಫಲ ಭವಬೀಜ. ಜ್ಞಾನದಿಂದ ಕಂಡೆಹೆನೆಂದಡೆ ನಾನು ಸಾವಯ, ಅದು ನಿರವಯ. ಎನಗಿನ್ನೇತರಿಂದ ಕೂಟ? ಈ ಭಕ್ತಿಜಗದಾಟದ ಕಾಟ. ನಿನ್ನ ಕೂಟವ ಕೂಡಿಹೆನೆಂಬ ಕೋಟಲೆಯ ಬಿಡಿಸಿ ಎನ್ನಲ್ಲಿ ನೀನು ಅಲೇಖನಾಗು. ಭಿನ್ನಭಾವವಿಲ್ಲದಂತೆ, ಅನ್ಯ ಅನನ್ಯವೆಂಬುದ ನಿನ್ನ ಭಾವದಲ್ಲಿಯೆ ಮರೆಸಿ ನಾನುಗೂಡಿ ನೀನು ಬಟ್ಟಬಯಲು, ಸದ್ಯೋಜಾತಲಿಂಗವೆ