•  
  •  
  •  
  •  
Index   ವಚನ - 44    Search  
 
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು, ಕಾಮ ನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು, ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು, ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು, ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು. ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು. ಆ ಅಕ್ಷರವ ರೂಪಮಾಡಿ, ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು. ಆ ಕಳೆಯ ಮೂರು ತೆರನ ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚತತ್ವವೆ ಪಂಚವದನವಾಗಿ, ಆ ಪಂಚವದನವೇ ಪಂಚೀಕೃತವನೆಯ್ದಿ, ಜಗದಾದಿ ಸೃಷ್ಟಿಯನನು ಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು. ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು. ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ ಕೈಗೊಳಿಸಿದಾತ ನಮ್ಮ ಬಸವಯ್ಯನು. ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು, ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು. ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ- ಪ್ರಮಥಗಣಂಗಳ, ರುದ್ರಗಣಂಗಳ, ಅಮರಗಣಂಗಳ, ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ, ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಆಚಾರಾದಿ ಮಹಾಲಿಂಗಸಂಪನ್ನರಂ, ಷಟ್‍ಸ್ಥಲಪ್ರಸಾದಪ್ರಸನ್ನರೂಪರಂ, ಆದಿಮುಕ್ತರಂ, ಅನಾದಿಮುಕ್ತರಂ, ಅಜಾತರಂ, ಅಪ್ರಮಾಣರಂ, ಅನಿಮಿಷಲಿಂಗ ನಿರೀಕ್ಷಣರಂ, ತ್ರಿವಿಧ ವಿದೂರರಂ, ತ್ರಿವಿಧ ಲಿಂಗಾಂಗಮೂರ್ತಿಗಳಂ, ಅರ್ಪಿತ ಸಂಯೋಗರಂ, ಆಗಮವಿದರಂ, ಅನಾದಿ ಪರಶಿವಮೂರ್ತಿಗಳಂ, ಏಕಲಿಂಗನಿಷ್ಠಾಪರರುಮಪ್ಪ ಮಹಾಪ್ರಮಥಗಣಂಗಳಂ ತಂದು ನೆರಹಿದಾತ ನಮ್ಮ ಬಸವಯ್ಯನು. ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ ಮಾಡಿದಾತ ನಮ್ಮ ಬಸವಯ್ಯನು. ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು, ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು, ಅಜಾತನ ಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು. ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ ಭಾವಕ್ಕೆ ತಂದಾತ ನಮ್ಮ ಬಸವಯ್ಯನು. ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು, ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಇಚ್ಫೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು. ಅಂಗಸಂಗಿಗಳನಂತರಿಗೆ ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು. ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ, ಅರ್ಪಿತ ಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು. ಹನ್ನೆರಡುಸಾವಿರ ರಾಣಿಯರ ಅಂಗವನರ್ಪಿತ ಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು. ಎಂಬತ್ತೆಂಟುಪವಾಡಮಂ ಗೆದ್ದು ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೆರೆದು ಪರಸಮಯವನಳಿದಾತ ನಮ್ಮ ಬಸವಯ್ಯನು. ಇಪ್ಪತ್ತೈದುಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ, ಅಪ್ರತಿಮ ಶಿವಗಣಂಗಳ ಮಹಾತ್ಮೆಯಂ ಮೆರೆದಾತ ನಮ್ಮ ಬಸವಯ್ಯನು. ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯ ಬೆಳೆಯ ಬೆಳೆದು, ಪರಮಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು. ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು, ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ, ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
Transliteration Ādiyādhāravilladandu, kaḷemoḷedōradandu, kāma niḥkāmavilladandu, vīravitaraṇavilladandu, yugajugavilladandu, piṇḍāṇḍa brahmāṇḍavilladandu, ēnū ēnū illadandu, ellā mūrtigaḷu nelegoḷḷadandu, andu ēnendu ariyadirpa nam'ma basavayyanu. Ondu guṇavanondu akṣarakke tandāta nam'ma basavayyanu. Ā akṣarava rūpamāḍi, trayākṣaradalli kaḷeya sambandhisidāta nam'ma basavayyanu. Ā kaḷeya mūru terana māḍi, Pr̥thvi appu tēja vāyu ākāśa emba pan̄catatvave pan̄cavadanavāgi, ā pan̄cavadanavē pan̄cīkr̥tavaneydi, jagadādi sr̥ṣṭiyananu māḍuvudakke kartanāda nam'ma basavayyanu. Ā sr̥ṣṭiya mukhava kaṇḍu sr̥jisalu puṭṭidaru pan̄caśaktiyaru. Ā pan̄caśaktiyarige pan̄camūrtiyara kaigoḷisidāta nam'ma basavayyanu. Ā pan̄camūrtigaḷindutpatyavāda lōkava nōḍalendu, kailāsavane kalyāṇava māḍidāta nam'ma basavayyanu. Ā kailāsavē kalyāṇavāgalā kalyāṇakke- pramathagaṇaṅgaḷa, rudragaṇaṅgaḷa, amaragaṇaṅgaḷa, purātanagaṇaṅgaḷa, puṇyagaṇaṅgaḷa, mahāgaṇaṅgaḷa, mukhyagaṇaṅgaḷa, mahāliṅgaikyasampannaraṁ, bhakta māhēśvara prasādi prāṇaliṅgi śaraṇa aikyaremba ācārādi mahāliṅgasampannaraṁ, ṣaṭsthalaprasādaprasannarūparaṁ, ādimuktaraṁ, anādimuktaraṁ, ajātaraṁ, apramāṇaraṁ, animiṣaliṅga nirīkṣaṇaraṁ, trividha vidūraraṁ, trividha liṅgāṅgamūrtigaḷaṁ, arpita sanyōgaraṁ, āgamavidaraṁ, anādi paraśivamūrtigaḷaṁ, ēkaliṅganiṣṭhāpararumappa mahāpramathagaṇaṅgaḷaṁ Tandu nerahidāta nam'ma basavayyanu. Martyalōkavane mahāpramathara biḍārava māḍidāta nam'ma basavayyanu. Ādiyasr̥ṣṭiyananādiyasr̥ṣṭige tandu, anādisr̥ṣṭiyanādisr̥ṣṭige tandu, ajātana bīḍanaṅgadalli nerahidāta nam'ma basavayyanu. Bhāvavillada bhrameya bhramegoḷisi bhāvakke tandāta nam'ma basavayyanu. Bayalanondu rūpamāḍi baṇṇakke tandu, ā baṇṇava nijadalli nilisidāta nam'ma basavayyanu. Lakṣada mēle tombattārusāvira jaṅgamakke icpheyanaridu arpitava māḍidāta nam'ma basavayyanu. Aṅgasaṅgigaḷanantarige aṅganeyara anubhavava naḍasidāta Nam'ma basavayyanu. Mūvattārusāvira māhēśvararige mukhamūrtiyāgi, arpita prasādavananubhavisidāta nam'ma basavayyanu. Hanneraḍusāvira rāṇiyara aṅgavanarpita prasādigaḷa māḍidāta nam'ma basavayyanu. Embatteṇṭupavāḍamaṁ geddu munnūraruvattu satta prāṇavanetti meredu parasamayavanaḷidāta nam'ma basavayyanu. Ippattaidusāvira cārvākaraṁ neggilotti, apratima śivagaṇaṅgaḷa mahātmeyaṁ meredāta nam'ma basavayyanu. Praṇavada bījava bitti, pan̄cākṣariya beḷeya beḷedu, paramaprasādavanondu rūpamāḍi meredu, bhaktiphalavanuṇḍāta nam'ma basavayyanu. Cennabasavanemba prasādiya paḍedu, anubhavamaṇṭapavananumāḍi, anubhavamūrtiyāda nam'ma basavayyanu. Ariva sampādisi ācāravanaṅgaṅgoḷisi, ēḷunūreppattu amaragaṇaṅgaḷa Anubhavamūrtigaḷa māḍidāta nam'ma basavayyanu. Ā anubhavadalli aikyaprasādavanaṅgaṅgoṇḍu, mantra nirmantravādāta nam'ma basavayyanu. Bhaktisthalavanaḷidu bhāvavaḍagi baṭṭabayala kūḍi, saṅgayyanalli svayaliṅgiyāda nam'ma basavayyanu.