ಸಹಜವುಳ್ಳ ಭಕ್ತರಿಗೆ ಕಾಮುಕರಾಗಿ
ಕೆಡಬೇಡೆಂದು ಅಜ್ಞಾನಕ್ಕೆ ಗುರಿಯಾದಿರಿ.
ಮುಂದೆ ಜ್ಞಾನವೆಂಬುದೆಲ್ಲವಾಗಿ ಗುರುಪಾದವ ಹಿಡಿದು
ಜ್ಞಾನಮುಕ್ತನಾಗಿ ಮೋಕ್ಷಾರ್ಥವ ಹಾರೈಸಿಕೊಂಡು
ತನುವ ಗುರುವಿಗೆ ಅರ್ಪಿಸಬೇಕು,
ಮನವ ಲಿಂಗಕ್ಕೆ ಅರ್ಪಿಸಬೇಕು,
ಧನವ ಜಂಗಮಕ್ಕೆ ಅರ್ಪಿಸಬೇಕು.
ತಮ್ಮ ಭಾವದಿಂದ ಬೋಧಿಸಿ ನುಡಿಯಲ್ಕೆ
ಶಿಷ್ಯ ಸುಬುದ್ಧಿಯಿಂದ 'ಗುರುವೇ ನೀನು ಅಧಿಕಾರನು
ನಿನ್ನ ಪಾದ ಸೋಂಕಿತೆಂದು' ನುಡಿಯಲಾಗಿ,
ಆ ಶಿಷ್ಯಂಗೆ ಮನಮುಖ್ಯವಾದ ಬೋಧೆಯ ಬೋಧಿಸಿ
ಆತಂಗೆ ಕಟ್ಟಳೆಯ ಮಾಡಿ
ಹೆಣ್ಣು ಹೊನ್ನು ಮಣ್ಣು ಮೂರು
ಗುರುವಿಗೆ ಅರ್ಪಿತ ಮಾಡಬೇಕೆಂದು ನುಡಿಯಲಾಗಿ,
ಅವನು ವಿಕಾರಿಯಾಗಿ
'ಸ್ವಾಮಿ, ಹೆಣ್ಣು ಹೊನ್ನು ಮಣ್ಣು ಸರ್ವವೂ ನಿಮಗೆ
ಸಮರ್ಪಣವೆಂದು' ನುಡಿಯಲಾಗಿ,
ಬೋಧಿಸುವ ಆ ಗುರುವಿಂಗೆ
ಒಂದು ವಿಕಾರ ಹೋಗಿ ಐದು ವಿಕಾರಗಳಾಗಿ
ಪಂಚಭೂತ ಮದಂಗಳೇರಿ ತನುವಿಕಾರಿಯಾಗಿ
ಮನವಿಕಾರಿಯಾಗಿ ಆಚಾರ ವಿಚಾರ ಬಿಟ್ಟು
ಅನಾಚಾರಿಯಾಗಿ ಕಚ್ಚಡಕನಾಗಿ
ಕೊಳ್ಳದ ಆಹಾರಂಗಳ ಕೊಂಡು ಕೆಟ್ಟ
ವೇಷಡಂಭಕರ ತೋರದಿರಯ್ಯಾ.
ಇಂಥ ತೊಟ್ಟೆ ಕುಡಿಯುವ ಮೆಚ್ಚು ಮಾರಿಗೆ
ಎತ್ತಣ ಸ್ವಯಂಭು ಎತ್ತಣ ನಿಜವು.
ತೊತ್ತು ದೊರೆಯಾಗುವುದೇನಯ್ಯಾ?
ನಿತ್ಯವನರಿಯದ ಮೃತ್ಯುಮಾರಿಗಳಿಗೆ ಎತ್ತಣ ಬ್ರಹ್ಮವು?
ಬ್ರಹ್ಮವೆತ್ತ, ತಾನೆತ್ತ, ಹೋಗತ್ತ.
ಇಂಥ ಭ್ರಾಂತುಯೋಗಿಗಳು
ಕೆಟ್ಟ ಕೇಡಿಂಗೆ ಕಡೆಯಿಲ್ಲ. ವಿದೇಹಿ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
Transliteration Sahajavuḷḷa bhaktarige kāmukarāgi
keḍabēḍendu ajñānakke guriyādiri.
Munde jñānavembudellavāgi gurupādava hiḍidu
jñānamuktanāgi mōkṣārthava hāraisikoṇḍu
tanuva guruvige arpisabēku,
manava liṅgakke arpisabēku,
dhanava jaṅgamakke arpisabēku.
Tam'ma bhāvadinda bōdhisi nuḍiyalke
śiṣya subud'dhiyinda'guruvē nīnu adhikāranu
ninna pāda sōṅkitendu' nuḍiyalāgi, Ā śiṣyaṅge manamukhyavāda bōdheya bōdhisi
ātaṅge kaṭṭaḷeya māḍi
heṇṇu honnu maṇṇu mūru
guruvige arpita māḍabēkendu nuḍiyalāgi,
avanu vikāriyāgi
'svāmi, heṇṇu honnu maṇṇu sarvavū nimage
samarpaṇavendu' nuḍiyalāgi,
bōdhisuva ā guruviṅge
ondu vikāra hōgi aidu vikāragaḷāgi
pan̄cabhūta madaṅgaḷēri tanuvikāriyāgi
manavikāriyāgi ācāra vicāra biṭṭu
anācāriyāgi kaccaḍakanāgi
Koḷḷada āhāraṅgaḷa koṇḍu keṭṭa
vēṣaḍambhakara tōradirayyā.
Intha toṭṭe kuḍiyuva meccu mārige
ettaṇa svayambhu ettaṇa nijavu.
Tottu doreyāguvudēnayyā?
Nityavanariyada mr̥tyumārigaḷige ettaṇa brahmavu?
Brahmavetta, tānetta, hōgatta.
Intha bhrāntuyōgigaḷu
keṭṭa kēḍiṅge kaḍeyilla. Vidēhi tānāda
varanāgana guruvīrane paran̄jyōti mahāvirakti.