ವಿಷಯ: ದೇವರ ನಿಲವು
ದೇವರ ಸ್ವರೂಪವನ್ನು ಬಹು ಸುಂದರವಾಗಿ ಬಸವಣ್ಣನವರು ವಿವರಿಸುತ್ತಾರೆ. ಅದಕ್ಕೆ ಅವರು ಬಳಸಿಕೊಂಡಿರುವ ನಿದರ್ಶನಗಳ ವಿವರಣೆ ಈ ರೀತಿ ಇದೆ. ಒಲೆಯೊಳಗಿರುವ ಬೆಂಕಿಯನ್ನು ಕಾಣುವಂತೆ ನೀರಿನಲ್ಲಿರುವ ಬೆಂಕಿಯನ್ನು ಕಾಣಲಾಗುವುದಿಲ್ಲ. ಏಕೆಂದರೆ ಅದು ಚಕ್ಷುಂದ್ರಿಯಕ್ಕೆ (ಕಣ್ಣಿಗೆ) ಅಗೋಚರ. ವ್ಯಕ್ತರೂಪದಲ್ಲಿ ತೋರಿಬರುವ ಒಲೆಯ ಬೆಂಕಿಯೇ ಅವ್ಯಕ್ತರೂಪವಾಗಿ ನೀರಿನೊಳಗೆ ಅಡಗಿ ಕುಳಿತಿರುವುದೇ ಇದಕ್ಕೆ ಕಾರಣ. ಹೀಗಿರುವಾಗ ಅದರ ಅನುಭವ ಕೇವಲ ಸ್ಪರ್ಶದಿಂದ ಆಗಲು ಸಾಧ್ಯ. ‘ಸ್ನಾನಕ್ಕೆ ನೀರು ಕಾದಿದೆಯೇನು ನೋಡು ಮಗು’ ಎಂದು ತಂದೆ ಕೇಳಿದಾಗ, ಮಗು ಪಾತ್ರೆಯ ನೀರಿನಲ್ಲಿ ಬಹು ಜಾಗರೂಕತೆಯಿಂದ ಕೈಯನ್ನು ಅದ್ದಿ ನೀರು ಕಾದಿದೆಯೋ ಇಲ್ಲವೋ ಎಂಬುದನ್ನು ತಂದೆಗೆ ಹೇಳುತ್ತದೆ. ಇಲ್ಲಿ ಮಗು ಕೈಯಿಂದ ನೀರನ್ನು ಸ್ಪರ್ಶಿಸುವುದರ ಮೂಲಕ ನೀರು ಬಿಸಿಯಾಗಿದೆಯೇ ಇಲ್ಲವೇ ಎಂಬುದನ್ನು ಗ್ರಹಿಸುತ್ತದೆ. ಹೀಗೆ ನೀರಿನೊಳಗಿರುವ ಬೆಂಕಿಯು ಸ್ಪರ್ಶೇಂದ್ರಿಯ ಗೋಚರ. ಇಲ್ಲಿ ಕೆಲವರು ‘ಉದಕದೊಳಗೆ ಬಯ್ಚಿಟ್ಟ ಬಯಕೆಯ ಕಿಚ್ಚು’ ಎಂದರೆ ಸಮುದ್ರದ ತಳಭಾಗದಲ್ಲಿ ಸುಪ್ತವಾಗಿರುವ ‘ಬಾಡಬಾನಲ’ವೆಂಬ ಅಗ್ನಿಯೆಂದು ಹೇಳುತ್ತಾರೆ. ಆದರೆ ಬಸವಣ್ಣನವವರ ಈ ನುಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ‘ಬಾಡಬಾನಲ’ವೆಂಬ ಸಮುದ್ರದ ತಳಭಾಗದಲ್ಲಿರುವ ಅಗ್ನಿಯನ್ನಲ್ಲದೆ ಮೇಲೆ ಹೇಳಿರುವಂತೆ ನೀರಿನೊಳಗಿರುವ ಸಾಮಾನ್ಯ ಅಗ್ನಿಯನ್ನೇ ಕುರಿತು ಹೇಳಲಾಗಿದೆ ಎನ್ನುವುದು ಕಾಣಬರದಿರದು. ಏಕೆಂದರೆ ಇಲ್ಲಿ ‘ಕಿಚ್ಚು’ ಎಂಬ ಪದಕ್ಕೆ ಎರಡು ವಿಶೇಷಣಗಳಿವೆ. ೧. ಬಯ್ಚಿಟ್ಟ ಮತ್ತು ೨. ಬಯ್ಕೆಯ., ಈ ವಿಶೇಷಗಳು ಬಿಸಿನೀರಿನೊಳಗಿರುವ ಸಾಧಾರಣ ಅಗ್ನಿಗೇ ಅನ್ವಯಿಸುತ್ತವೆ. ಏಕೆಂದರೆ ನೀರನ್ನು ಕಾಯಿಸುತ್ತಿರುವಾಗ ಒಲೆಯ ಬೆಂಕಿಯೇ ನೀರಿನ ಕಣಗಳಲ್ಲಿ ಅಡಗಿ ಕುಳಿತುಕೊಳ್ಳುತ್ತದೆ (ಬೈತಿಟ್ಟುಕೊಳ್ಳುತ್ತದೆ). ಹೀಗೆ ನೀರಿನೊಳಗೆ ಅಡಗಿರುವ ಬೆಂಕಿಯು ನಾವಾಗಿಯೇ ಬಚ್ಚಿಟ್ಟಿದ್ದು. ಆದ್ದರಿಂದಲೇ ಅದು ಬಯ್ಚಿಟ್ಟ ಕಿಚ್ಚು. ನೀರನ್ನು ನಾವು ಹದವರಿತು ಬಿಸಿಮಾಡಿ ಬಳಸಿಕೊಳ್ಳುತ್ತೇವೆ. ಹೀಗೆ ಹದವರಿತು ಬಿಸಿಯಾದ ನೀರಿನೊಳಗಿರುವ ಬೆಂಕಿಯು ಮೇಲೆ ಹೇಳಿರುವಂತೆ ಹೇಗೆ ಬಯ್ಚಿಟ್ಟದ್ದೋ ಅಂತೆಯೇ ಬಯಕೆಯ ಕಿಚ್ಚೂ ಹೌದು. ನಾವು ಬಯಸಿದ ಮಟ್ಟದ ಕಿಚ್ಚಾದ್ದರಿಂದ. ಹೀಗೆ ಈ ವಿಶೇಷಣಗಳ ಸಾರ್ಥಕ್ಯವನ್ನು ನಾವು ಕಾಣುತ್ತೇವೆ. ‘ಬಾಡಬಾನಲ’ವೆಂಬ ಅಗ್ನಿಯೆಂದಿಟ್ಟುಕೊಂಡರೆ ಈ ಸಾರ್ಥಕ್ಯ ತೋರಿಬರುವುದಿಲ್ಲ. ಏಕೆಂದರೆ ಅದು ಸಮುದ್ರದ ತಳದಲ್ಲಿ ಗೋಪ್ಯವಾಗಿರುವುದರಿಂದ ಬಯ್ಚಿಟ್ಟ ಕಿಚ್ಚು ಎಂದೆನಿಸಿದರೂ ‘ಬಯ್ಕೆಯ ಕಿಚ್ಚು’ಆಗಲಾರದು. ನಾವು ಬಯಸುವುದಾದರೂ ನಮಗೆ ಬೇಕೆಂದು ತೋರುವ ವಸ್ತುವನ್ನೇ ತಾನೇ? ಇದೂ ಅಲ್ಲದೆ ಬಸವಣ್ಣನವರು ಇಲ್ಲಿ ಕೊಟ್ಟಿರುವ ಉಪಮೆಗಳಲ್ಲಿ ಬರುವ ‘ರಸದ ರುಚಿ’, ನನೆಯ ಪರಿಮಳ, ‘ಕನ್ಯೆಯ ಸ್ನೇಹ’ಇವೆಲ್ಲವೂ ಎರಡು ರೀತಿಯ ಸ್ಥಿತಿ ಅಥವಾ ಅವಸ್ಥೆಗಳನ್ನು (stage) ಹೊಂದಿವೆ. ಒಂದು ಸೂಕ್ಷ್ಮ ಅಥವಾ ಅವ್ಯಕ್ತ, ಮತ್ತೊಂದು ಸ್ಥೂಲ ಅಥವಾ ವ್ಯಕ್ತ. ಈ ದೃಷ್ಠಿಯಿಂದ ಇವುಗಳ ಸಾಲಿನಲ್ಲಿ ‘ಬಾಡಬಾನಲ’ವೆಂಬ ಅಗ್ನಿಯನ್ನು ಇಟ್ಟು ನೋಡಿದರೆ ಆ ದ್ವಿವಿಧ ಸ್ಥಿತಿಗಳು ಕಾಣುವುದಿಲ್ಲ. ಏಕೆಂದರೆ ಆ ‘ಬಾಡಬಾನಲ’ವು ಸೂಕ್ಷ್ಮವಾಗಿ ಅವ್ಯಕ್ತವಾಗಿ ಇರಬಹುದು ನಿಜ; ಆದರೆ ಅದು ಎಂದೆಂದಿಗೂ ಸ್ಥೂಲರೂಪದಲ್ಲಿ ಪ್ರಕಟವಾಗುವುದಿಲ್ಲ. ನೇರವಾಗಿ ನಮ್ಮ ಅನುಭವಕ್ಕೆ ಬರುವುದೂ ಇಲ್ಲ. ಇದೂ ಅಲ್ಲದೆ ‘ನುಡಿದರೆ ಮುತ್ತಿನಹಾರದಂತಿರಬೇಕು’ ಇತ್ಯಾದಿಯಾಗಿ ನುಡಿದ ಬಸವಣ್ಣನವರು ನುಡಿಜಾಣರು. ಅಂತಹವರು ಸಮುದ್ರದ ತಳಭಾಗದಲ್ಲಿರಬಹುದಾದ ಬಾಡಬಾನಲವನ್ನೇ ಕುರಿತು ಹೇಳಬೇಕಾಗಿದ್ದರೆ ‘ಉದಕದೊಳಗೆ’ ಎನ್ನುವ ಬದಲು ‘ಸಮುದ್ರದೊಳಗೆ’ ಅಥವಾ ‘ವಾರಧಿಯೊಳಗೆ’ ಎಂದೆನ್ನುತ್ತಿರಲಿಲ್ಲವೆ? ಸಂಸ್ಕೃತದಲ್ಲಿ ‘ಉದಕ’ ಎಂದರೆ ‘ನೀರು’ ಎಂದಷ್ಟೇ ಅರ್ಥ. ‘ಸಮುದ್ರದ ನೀರು’ ಎಂದೇನೂ ಅಲ್ಲ. ಅದನ್ನೇ ಗೌಣಾರ್ಥವೆಂದು (Secondary meaning) ಭಾವಿಸುವುದಾದರೆ ಇಲ್ಲಿ ಮುಖ್ಯಾರ್ಥಕ್ಕೆ (Primary meaning) ಬಾಧವೇ ಇಲ್ಲ. ಮುಖ್ಯಾರ್ಥಕ್ಕೆ ಬಾಧ ಉಂಟಾದಾಗಲೇ ತಾನೇ ಗೌಣಾರ್ಥ? ಇಷ್ಟೆಲ್ಲಾ ವಿಚಾರ ಮಾಡಿದಾಗ ‘ಉದಕದೊಳಗೆ ಬಯ್ಚಿಟ್ಟ ಬಯ್ಯೆಯ ಕಿಚ್ಚೆಂದರೆ ನೀರಿನೊಳಗಿರುವ ಸಾಮಾನ್ಯ ಅಗ್ನಿಯೆ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಹೀಗೆ ನೀರಿನೊಳಗಿರುವ ಕಿಚ್ಚು ಸೂಕ್ಷ್ಮ ರೂಪದಲ್ಲಿದ್ದು ಒಂದು ದೃಷ್ಠಿಯಿಂದ (ಕಣ್ಣಿಗೆ ಕಾಣದಿರುವುದರಿಂದ) ಅವ್ಯಕ್ತ, ಮತ್ತೊಂದು ದೃಷ್ಠಿಯಿಂದ (ಸ್ಪರ್ಶಗೋಚರವಾದುದರಿಂದ) ವ್ಯಕ್ತ. ಸಸಿಯು ಭೂಮಿಯಲ್ಲಿರುವ ಸಾರವತ್ತಾದ ಭಾರವನ್ನು ಹೀರಿ ರಸವತ್ತಾದ ಫಲದ ಮೂಲಕ ಅದನ್ನು ನೀಡುತ್ತದೆ. ಆ ಫಲದಲ್ಲಿರುವ ರಸದ ಸವಿಯನ್ನು ಕಣ್ಣಿನಿಂದಾಗಲೀ, ಸ್ಪರ್ಶದಿಂದಾಗಲೀ ಅನುಭವಿಸಲು ಸಾಧ್ಯವಿಲ್ಲ. ರಸನೇಂದ್ರಿಯದಿಂದಲೇ (ನಾಲಿಗೆ ಅದನ್ನು ಸವಿಯಲು ಸಾಧ್ಯ). ಸಸಿಯು ಫಲವನ್ನು ಕೊಡುವುದಕ್ಕೆ ಮುನ್ನ ಅದರ ರಸವೆಲ್ಲವೂ ಸಸಿಯಲ್ಲಿಯೇ ಇರುತ್ತದೆ. ಅಂತೆಯೇ ಫಲದ ರಸದ ರುಚಿಯೂ ಕೂಡ ಸಸಿಯ ರಸದಲ್ಲಿ ಅವ್ಯಕ್ತ ರೂಪದಲ್ಲಿರುತ್ತದೆ. ಇನ್ನು ಹೂವಿನ ಪರಿಮಳವೂ ಅದೇ ರೀತಿಯೇ. ಹೂವು ಅರಳಿ ಸುಗಂಧ ಸೂಸುವ ಮುನ್ನ ಮೊಗ್ಗಾಗಿದ್ದಾಗ ಆ ಪರಿಮಳವೆಲ್ಲವೂ ಆ ಮೊಗ್ಗಿನಲ್ಲಿಯೇ ಸೂಕ್ಷ್ಮ ರೂಪದಲ್ಲಿರುತ್ತದೆ. ಅದೇ ಮೊಗ್ಗು ಅರಳಿ ಹೂವಾದಾಗ ಪರಿಮಳವು ಹೊರಹೊಮ್ಮುತ್ತದೆ. ಈ ಪರಿಮಳವನ್ನು ನಾಸಿಕದಿಂದಲೇ (ಮೂಗು) ಗ್ರಹಿಸಲು ಸಾಧ್ಯ. ಯುವತಿಯ ಯೌವನ ಸಂಬಂಧಿ ಆಸೆ ಆಕಾಂಕ್ಷೆಗಳು ಅವಳ ಬಾಲ್ಯಾವಸ್ಥೆಯಲ್ಲಿಯೇ ಸುಪ್ತವಾಗಿದ್ದು ಪ್ರಾಪ್ತವಯಸ್ಕಳಾದ ಮೇಲೆಯೇ ಅವು ಪ್ರಕಟಗೊಳ್ಳುತ್ತವೆ. ಈ ಮೇಲಿನ ನಾಲ್ಕು ನಿದರ್ಶನಗಳಿಂದ ದೇವರ ನಿಲುವನ್ನು ಸ್ಪಷ್ಟ ಪಡಿಸಲು ಯತ್ನಿಸಿದ್ದಾರೆ ಬಸವಣ್ಣನವರು. ಅದನ್ನು ಪ್ರತ್ಯೇಕ ಪದಗಳಲ್ಲಿ ಅವರೇನೂ ವಾಚ್ಯವಾಗಿ ಹೇಳಿಲ್ಲ. ಹೇಳಬೇಕಾದುದೆಲ್ಲವೂ ಈ ನಿದರ್ಶನಗಳಲ್ಲಿಯೇ ಇಂಗಿತಗೊಂಡಿದೆ. ನಮ್ಮ ವೇದೋಪನಿಷತ್ತುಗಳು ಸಾರುವಂತೆ ದೇವರು ಸರ್ವವ್ಯಾಪ್ತಿ (Ominipresent). ಬಿಸಿನೀರಿನಲ್ಲಿ ಬೆಂಕಿಯು, ಸಸಿಯಲ್ಲಿ ರಸದ ರುಚಿಯು, ಮೊಗ್ಗಿನಲ್ಲಿ ಪರಿಮಳವು ಮತ್ತು ಕನ್ಯೆಯಲ್ಲಿ ಯೌವನ ಗುಣಗಳು ಹೇಗೆ ಅವ್ಯಕ್ತವಾಗಿರುವವೋ ಹಾಗೆಯೇ ಈ ವಿಶ್ವದಲ್ಲಿ ದೇವರು ಅವ್ಯಕ್ತನಾಗಿದ್ದಾನೆ. ಅವನು ಇಂದ್ರಿಯಾತೀತನೂ ಹೌದು. ಅಂದರೆ ಅವನು ಪ್ರತ್ಯಕ್ಷ ಗೋಚರನಲ್ಲ. ಹೀಗೆ ಇಂದ್ರಿಯಗಳಿಗೆ ಗೋಚರನಲ್ಲವೆಂದ ಮಾತ್ರಕ್ಕೆ ಗಗನ ಕುಸುಮ (ಆಕಾಶಪುಷ್ಪ), ಶಶವಿಷಾಣ (ಮೊಲದ ಕೊಂಬು) ಗಳಂತೆ ದೇವರು ಇಲ್ಲವೇ ಇಲ್ಲವೆಂದು ವಾದಿಸುವುದು ಸರಿಯಲ್ಲ. ಏಕೆಂದರೆ ಹಾಗೆ ವಾದಿಸುವುದು ಕಣ್ಣಿಲ್ಲದ ಕುರುಡ ತನಗೆ ಬೆಳಕು ಕಾಣಿಸುತ್ತಿಲ್ಲವೆಂದು (ಬೆಳಕಿನ ಅನುಭವವಾಗುತ್ತಿಲ್ಲವೆಂದು) ಬೆಳಕೇ ಇಲ್ಲವೆಂದು ಹೇಳುವ ಮೂರ್ಖತನವಾದೀತು. ಈ ಕಾರಣದಿಂದ ಬೆಂಕಿಯು ಹೇಗೆ ಸ್ಪರ್ಶೇಂದ್ರಿಯ ಗೋಚರವೋ, ರಸದ ರುಚಿಯು ಹೇಗೆ ಜಿಹ್ವೇಂದ್ರಿಯ ಗೋಚರವೋ, ಹೂವಿನ ಪರಿಮಳವು ಹೇಗೆ ಘ್ರಾಣೇಂದ್ರಿಯ ಗೋಚರವೋ ಕನ್ಯೆಯ ಸ್ನೇಹವು ಯೌವನದಲ್ಲಿ ತರುಣನ ಅನುಭವಕ್ಕೆ ಹೇಗೆ ಗೋಚರವೋ, ಅದೇ ರೀತಿ ದೇವರು ಅನುಭಾವ ಗೋಚರನು. ಕುರುಡನಿಗೆ ಬೆಳಕಿನ ಅನುಭವವಾಗದಿರುವುದು ಅವನ ಇಂದ್ರಿಯ ದೋಷ (ಕುರುಡುತನ) ವನ್ನು ಎತ್ತಿತೋರಿಸುವುದೇ ವಿನಾ ಬೆಳಕಿನ ಅಭಾವವನ್ನಲ್ಲ. ಹೀಗೆ ಆಯಾಯ ಇಂದ್ರಿಯಗಳು ಇಲ್ಲದೇ ಹೋದರೆ ಅವಕ್ಕೆ ಸಂಬಂಧಿಸಿದ ವಿಷಯಗಳು ಇದ್ದರೂ ಅವುಗಳ ಅರಿವು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ದೇವರು ವಿಶ್ವವ್ಯಾಪಿಯಾದುದರಿಂದ ಸರ್ವತ್ರ ಇದ್ದರೂ ಅನುಭಾವವಿಲ್ಲದಿದ್ದರೆ ಅವನ ಅರಿವು ಆಗಲಾರದು. ಬಿಸಿನೀರಿನಲ್ಲಿ ಅವ್ಯಕ್ತವಾಗಿ ಅಡಗಿ ಕುಳಿತಿರುವ ಬೆಂಕಿಯು ನೀರಿನ ಯಾವುದೋ ಒಂದು ಭಾಗದಲ್ಲಿರದೆ ಅದನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿರುತ್ತದೆ. ಅಂತೆಯೇ ಭಗವಂತನು ಸಂಪೂರ್ಣ ವಿಶ್ವವನ್ನೇ ವ್ಯಾಪಿಸಿಕೊಂಡಿರುವನು. ಆದ್ದರಿಂದಲೇ ದಾರ್ಶನಿಕರು ಅವನನ್ನು ವಿಶ್ವವ್ಯಾಪಿ, ಸರ್ವವ್ಯಾಪಿ (Ominipresent) ಇತ್ಯಾದಿ ಪದಗಳಿಂದ ಸಂಬೋಧಿಸಿರುವುದು.- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.