•  
  •  
  •  
  •  
Index   ವಚನ - 2    Search  
 
ಪಿಂಡಜ್ಞಾನಸ್ಥಲ - ದೇವರು
ಕಾಳಿಯ ಕಣ್‌ ಕಾಣದಿಂದ ಮುನ್ನ, ತ್ರಿಪುರಸಂಹಾರದಿಂದ ಮುನ್ನ, ಹರಿವಿರಂಚಿಗಳಿಂದ ಮುನ್ನ, ಉಮೆಯ ಕಲ್ಯಾಣದಿಂದ ಮುನ್ನ, ಮುನ್ನ, ಮುನ್ನ ಮುನ್ನ- ಅಂದಿಂಗೆಳೆಯ ನೀನು, ಹಳೆಯ ನಾನು, ಮಹಾದಾನಿ ಕೂಡಲ ಸಂಗಮದೇವಾ.
Transliteration Kāḷiya kaṅkāḷadinda munna, tripurasanhāradinda munna, hariviran̄cigaḷinda munna, umeyakalyāṇadinda munna, munna munna munna- andiṅgeḷeya nīnu, haḷeya nānu, mahādāni kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Design : Manjuswamy, Yathish Kasargod Choreography : Dimple.A Lighting Design : Ravimohan Music : Dr C Ashwath Concept - Dialogues : Prasad Kundoor Direction : Suguna Niranthara, Niranthara Theatre Group presents 'Koodalasangama' a dance ballet based on Vachanas of Basavanna.
English Translation 2 Before the eyes of Kāḷi could see, Before the Triple City burned, Before Viṣṇu and Brahma, Before Umā was wed- Before That time and long before, Before what day soever might be, Thou wert a babe!..... However, I am Thy elder, O most bountiful Lord Kūḍala Saṅgama! Translated by: L M A Menezes, S M Angadi
Hindi Translation काली के कंकाल से पूर्व, त्रिपुर संहार से पूर्व, हरि-विरंचियों से पूर्व, उमा-विवाह से पूर्व, पूर्व, पूर्व, पूर्व- तभी तुम नूतन और मैं पुरातन, महादानी कूडलसंगमदेव ॥ Translated by: Banakara K Gowdappa
Telugu Translation కాళికన్ను కానకముందె; త్రిపుర సంహారమునకు ముందె హరివిరించుల కన్నముందె ముందె మున్నుందె; ఆముందె స్వామీ నీవు నాటినుండి భటుడ నేను కూడల సంగమదేవరా! Translated by: Dr. Badala Ramaiah
Tamil Translation திருமாலின் முதுகெலும்பு கோலாகுமுன்னே, மூவெயிலின் அழிவிற்கு முன்னே, அரி, பிரம்மருக்கு முன்னே, உமையின் மணத்திற்கு முன்னே, முன்னே, முன்னே, முன்னே, இளையோன்நீ; பழையோன் நான், வள்ளலே, கூடலசங்கமதேவனே. Translated by: Smt. Kalyani Venkataraman, Chennai
Marathi Translation काळीच्या कंकाळापूर्वी, त्रिपूरसंहाराच्या पूर्वी, ब्रह्मा-विष्णूच्यापूर्वी, उमाच्या विवाहापूर्वी पूर्वी पूर्वी पूर्वी तेव्हापासून तू नवीन, मी पुरातन महादानी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಉಮೆ = ಪಾರ್ವತಿ; ಕಂಕಾಳ = ಅಸ್ತಿ ಪಂಜರ; ತ್ರಿಪುರ = ಭ್ರಮೆ; ವಿರಿಂಚಿ = ಬ್ರಹ್ಮ;
ಕನ್ನಡ ವ್ಯಾಖ್ಯಾನ ತಾನೇ ತಾನಾಗಿದ್ದ ಪರಶಿವತತ್ತ್ವವು ಜೀವ-ಜಗತ್ತಾಗಿ ಪರಿಣಮಿಸುವುದು ಶಿವ-ಸದಾಶಿವ-ಮಹೇಶ್ವರ ಎಂದು ಮುಖ್ಯವಾಗಿ ಮೂರು ಘಟ್ಟಗಳಲ್ಲಿ. ಇವು ಕ್ರಮವಾಗಿ ನಿಷ್ಕಳ-ಸಕಳ ನಿಷ್ಕಳ-ಸಕಳ ಸ್ಥಿತಿಯಲ್ಲಿರುವವು. ಈ ಸ್ಥಿತ್ಯಂತರವನ್ನು ಅನಿಲ-ನೀರು-ಆಲಿಕಲ್ಲಿಗೆ ಹೋಲಿಸುವರು. ಈ ಮೂರೂ ತತ್ತ್ವಸ್ಥಿತಿಗಳಿಗೆ ಅತೀತ ಪರಶಿವ. ಪರಶಿವನು ಶಿವನಾದಾಗ-ಅವನನ್ನು ನೆನೆದ ಕಡಲೇಕಾಳಿಗೂ, ಸದಾಶಿವನನ್ನು ಮೊಳಕೆಯೊಡೆದ ಕಡಲೇಕಾಳಿಗೂ ಹೋಲಿಸಬಹುದು. ಏಕೈಕವಾಗಿದ್ದ ಶಿವನು ಈ ಎರಡನೇ ಘಟ್ಟದಲ್ಲಿ ಶಕ್ತಿಯೊಡನೆ ಸಂಗಮಿಸುವನು. ಜೀವನು ಮುಂದಣ ಮಹೇಶ್ವರಾವಸ್ಥೆಯಲ್ಲಿ ಹೊಮ್ಮಿದವನಾದರೂ-ಅವನಿಗೆ ಶೀವನೊಡತಣ ಸಂಬಂಧ-ಶಕ್ತಿಮುಖೇನ-ಬಹಳ ಹಳೆಯದೆಂಬುದೇ ಈ ವಚನದ ತಾತ್ಪರ್ಯ. ಮಹೇಶ್ವರನು ಈ ಜಗದ ಮತ್ತು ಜೀವರ ಸೃಷ್ಟಿಗಾಗಿ ಮತ್ತು ನಿರ್ವಹಣೆಗಾಗಿ ಪಂಚವಿಂಶತಿಲೀಲೆಗಳನ್ನು ತೋರಿದುದಾಗಿ ಪುರಾಣಗಳಲ್ಲಿ ಹೇಳಿದೆ : ಉಮೆಯನ್ನು ಮದುವೆಯಾದ ಉಮಾಮಹೇಶ್ವರಲೀಲೆ, ಅಹಂಕರಿಸಿದ ಹರಿಬ್ರಹ್ಮರಿಗೆ ಉರಿಲಿಂಗವಾಗಿ ಉದ್ಭವಿಸಿ ಬದ್ಧಿಗಲಿಸಿದ ಉರಿಲಿಂಗೋದ್ಭವಲೀಲೆ, ತ್ರಿಪುರಗಳನ್ನು ಸುಟ್ಟ ತ್ರಿಪುರಸಂಹಾರಲೀಲೆ, ಕಾಳಸರ್ಪವನ್ನು ಕಂಕಣವಾಗಿ ಧರಿಸಿದ ದಕ್ಷಿಣಾಮೂರ್ತಿಲೀಲೆ ಎಂಬುವು ಆ ಪಂಚವಿಂಶತಿಲೀಲೆಗಳಲ್ಲಿ ಕೆಲವು ಮಾತ್ರ. ಇವನ್ನು ಬಸವಣ್ಣನವರು ತಮ್ಮ ಈ ವಚನದಲ್ಲಿ ಸಿಂಹಾವಲೋಕನಕ್ರಮದಿಂದ ಪ್ರಸ್ತಾಪಿಸಿರುವರು. ಹೀಗೆ ಪ್ರಸ್ತಾಪಿಸುತ್ತಾ ಜೀವರ ಮತ್ತು ದೇವರ ಸಂಬಂಧವನ್ನು ಮಾಹೇಶ್ವರತತ್ತ್ವದ ಲೀಲೆಗಳ ಘಟ್ಟದಿಂದ ಹಿಡಿದು ಗುರುತಿಸಲು ಆರಂಭಿಸಿ-ಅಲ್ಲಿಂದ ಸದಾಶಿವತತ್ತ್ವವನ್ನೂ, ಆ ಸದಾಶಿವತತ್ತ್ವದಿಂದ ಆಚೆಗಿನ ಶಿವತತ್ತ್ವವನ್ನೂ ಭೇದಿಸಿ ನೋಡಿ, ಆ ಶಿವ ಮತ್ತು ಜೀವರಿಗಿರುವ ಸ್ವಾಮಿಭೃತ್ಯ ಸಂಬಂಧ ಆದಿಯಿಂದ ಇದ್ದುದೇ ಆಗಿದೆಯೆನ್ನುವರು ಬಸವಣ್ಣನವರು. ಹೀಗೆ ಪಿಂಡಜ್ಞಾನಸ್ಥಲದಲ್ಲಿ ಜೀವನು ಶಿವನೊಡನೆ ತನಗಿರುವ ಅಂಟುನಂಟನ್ನು ಗುರುತಿಸಿಕೊಳ್ಳುವನು. ತೆಲುಗು ಬಸವಪುರಾಣ (ಭಂಡಾರು ತಮ್ಮಯ್ಯ ಪಿ.107)ದಲ್ಲಿ ಪಾಲ್ಕುರಿಕೆ ಸೋಮನಾಥನು ಈ ವಚನವನ್ನು ಈ ಮುಂದಿನಂತೆ ಉಲ್ಲೇಖಿಸಿರುವನು : “ಕಾಲಕೂಟಮುಗುತ್ತುಕಕು ರಾಕಮುನ್ನ | ಕ್ರಾಲು ಪುರಂಬುಲು ಗಾಲಕಮುನ್ನ | ಗೌರಿವಿವಾಹಂಬುಗಾಕಟ ಮುನ್ನ | ಯಾರನಜಾಂಡಂಬು ಲಲರಕಮುನ್ನ | ತಿವಿರಿ ಮೂರ್ತುಲು ನೆನ್ಮಿದಿಯು ಲೇಕಮುನ್ನ | ಭುವಿ ಹರಿಬ್ರಹ್ಮುಲು ಪುಟ್ಟಕ ಮುನ್ನ | ಯಟಮುನ್ನ ಯಟಮುನ್ನ ಯಟಮುನ್ನ ಮುನ್ನ | ಯಿಟ ನೀವು ನಾಸ್ವಾಮಿ ವೇನು ನೀಬಂಟ”.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

ಕಾಳಿಯ ಕಂಕಾಳ

ಬಲಿಚಕ್ರವರ್ತಿ ನೂರು ಯಜ್ಞಗಳನ್ನು ಮಾಡಿ ಇಂದ್ರಪಟ್ಟವನ್ನು ಆಕ್ರಮಿಸಬೇಕೆಂದಿದ್ದನು. ವಿಷ್ಣು ಅದನ್ನಾಗಗೊಡಬಾರದೆಂದು ಹಂಚಿಕೆ ಹಾಕಿ ವಾಮನ ರೂಪಿಯಾಗಿ ಬಲಿಯ ಬಳಿಗೆ ಹೋದನು. ಅವನು ಮೂರು ಪಾದ ಭೂಮಿಯ ದಾನವನ್ನು ಬೇಡಲು ಅರಸು ತೆಗೆದುಕೋ ಎಂದನು. ವಾಮನನು ಅಳೆದುಕೊಳ್ಳುವುದಕ್ಕಾಗಿ ಒಂದು ಪಾದ ವನ್ನಿಡಲು ಅದು ಭೂಮಂಡಲವನ್ನೇ ವ್ಯಾಪಿಸಿತು; ಎರಡನೆಯ ಪಾದಕ್ಕೆ ಆಕಾಶವೆಲ್ಲ ತುಂಬಿತು. ಇನ್ನೊಂದನ್ನಿಡಲು ಸ್ಥಳವಿಲ್ಲದೆ ಬಲಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ಮೆಟ್ಟಿದನು. ಆಕಾಶದಲ್ಲಿ ತನ್ನೆಡೆಗೆ ಬಂದ ಪಾದವನ್ನು ಕಂಡು ಬ್ರಹ್ಮನು ‘ಇದು ಶಿವನದಲ್ಲದಿದ್ದರೆ ಕಳಚಿ ಬೀಳಲಿ’ ಎಂದು ನುಡಿದನು. ಅದರಿಂದ ಮೊಟಕಾದ ವಿಷ್ಣುಪಾದವು ಆಕಾಶದಲ್ಲಿ ಹಾವಳಿಯೆಬ್ಬಿಸಿತು. ಆಗ ಭೈರವ ಗಣೇಶ್ವರನು ವಾಮನನನ್ನು ಕೊಂದನು. ಅವನ ಬೆನ್ನೆಲುವನ್ನು ಶಿವನು ಕೈಯಲ್ಲಿ ಧರಿಸಿದನು. ಈ ಕಥೆ ಸ್ಕಂದ ಪುರಾಣದ ಕಾಳಿಕಾಖಂಡದಲ್ಲಿ ಬಂದುದರಿಂದ ಅದಕ್ಕೆ ಕಾಳಿಯ ಕಂಕಾಳವೆಂಬ ಹೆಸರು ಬಂದಿದೆ. ಇದು ಶಿವನ 16ನೆಯ ಲೀಲೆ.

ಉಮೆಯ ಕಲ್ಯಾಣ

ಗಿರಿರಾಜ, ಆತನ ಹೆಂಡತಿ ಮೇನಕಾದೇವಿ. ಅವರು ಮಕ್ಕಳನ್ನು ಬಯಸಿ ಅನಂತ ಕಾಲ ತಪವನ್ನಾಚರಿಸಿದರು. ತಪವು ಫಲಿಸಿತೆಂಬಂತೆ ನೈದಿಲೆ ಹೂವಿನೊಳಗೆ ಹೆಣ್ಣು ಕೂಸೊಂದು ಅವರಿಗೆ ಲಭಿಸಿತು. ಮೇನಕೆ ಅದನ್ನು ಸಲಹಿ ಬೆಳೆಸಿದಳು. ಅದಕ್ಕೆ ಉಮೆ ಹೆಸರಿಟ್ಟರು. ಉಮೆ ತಂದೆತಾಯಿಗಳ ಕಣ್ಮಣಿಯಾಗಿ ಬೆಳೆದು ತಾರುಣ್ಯದಲ್ಲಿ ಕಾಲಿಟ್ಟಳು. ಆಗ ಸಪ್ತರ್ಷಿಗಳು (ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠರು) ವಿಧ್ಯುಕ್ತವಾಗಿ ಶಿವನೊಡನೆ ಆಕೆಯ ವಿವಾಹ ಮಾಡಿದರು. ಈ ಕಥೆ ಶಿವನ ಉಮಾಕಲ್ಯಾಣಲೀಲೆ ಎನಿಸಿತು.

ತ್ರಿಪುರ ಸಂಹಾರ

ವೀರ, ವಿದ್ಯುನ್ಮಾಲಿ, ತಾರಕರೆಂಬವರು ಮೂವರು ದೈತ್ಯರು. ಅವರು ಬ್ರಹ್ಮನಿಂದ ವರವನ್ನು ಪಡೆದು ಆಕಾಶದಲ್ಲಿ ಮೂರು ಪಟ್ಟಣ (ಲೋಹಪುರ, ರಜತಪುರ, ಸುವರ್ಣಪುರ)ಗಳನ್ನು ಕಟ್ಟಿಕೊಂಡು ಅಲ್ಲಿ ಸುಖವಾಗಿದ್ದರು. ನಿಷ್ಕಂಟಕರಾದ ಅವರು ಮದೋನ್ಮತ್ತರಾಗಿ ದೇವತೆಗಳನ್ನು ಕಾಡತೊಡಗಿದರು. ಆಗ ಹರಿಬ್ರಹ್ಮರು ಶಿವನಲ್ಲಿ ಮೊರೆಯಿಟ್ಟರು. ಅದನ್ನು ಕೇಳಿ ಶಿವನು ರಕ್ಕಸರ ಮೇಲೆ ದಾಳಿಯಿಟ್ಟು, ಅವರ    ನಗರಗಳನ್ನು ಸುಟ್ಟು, ಅವರನ್ನು ಕೊಂದನು. ಈ ದಾಳಿಯಲ್ಲಿ ಶಿವನಿಗೆ ಭೂಮಿ ರಥವಾಗಿತ್ತು. ಸೂರ್ಯಚಂದ್ರರೆ ಅದರ ಗಾಲಿಗಳಾಗಿದ್ದರು: ಬ್ರಹ್ಮ ಸಾರಥಿ, ಮೇರುಗಿರಿಯೇ ಬಿಲ್ಲು, ಆದಿಶೇಷನೆ ಬಿಲ್ಲ ಹೆದೆ, ವಿಷ್ಣುವೆ ಬಾಣ ಆಗಿದ್ದರು. ಈ ಕಥೆ ಶಿವನ ತ್ರಿಪುರ ಸಂಹಾರ ಲೀಲೆ ಎಂದು ಹೆಸರಾಗಿದೆ.

ಹರಿ-ವಿರಿ೦ಚಿಗಳು

ಒಮ್ಮೆ ಹರಿಯೂ ಬ್ರಹ್ಮನೂ ನಾ ಹೆಚ್ಚು ನಾ ಹೆಚ್ಚು ಎಂದು ಜಗಳವಾಡಿದರು; ಬಡಿದಾಡಿದರು. ಆಗ ಅವರ ನಡುವೆ ಉರಿಲಿಂಗವೆದ್ದು ಭೂಮ್ಯಾಕಾಶಕ್ಕೆ ಏಕಾಕಾರವಾಗಿ ನಿಂತಿತು. ಈ ಲಿಂಗದ ಪಾದ ಮತ್ತು ಮಸ್ತಕವನ್ನು ಕಂಡವರೇ ಹೆಚ್ಚಿನವರು ಎಂದು ಆಕಾಶವಾಣಿಯಾಯಿತು. ಹರಿ ಹಂದಿಯಾಗಿ ನೆಲವನ್ನಗಿಯುತ್ತ ಆ ಲಿಂಗದ ಪಾದವನ್ನುಹುಡುಕಿ ಹುಡುಕಿ ಕಾಣದೆ ಸಾಕಾಗಿ ಶಿವನಲ್ಲಿಗೆ ಬಂದು ಅದು ತನಗೆ ಸಿಕ್ಕಲಿಲ್ಲವೆಂದು ಹೇಳಿದನು. ಇತ್ತ ಬ್ರಹ್ಮನು ಲಿಂಗದ ಮಸ್ತಕವನ್ನು ನೋಡುವುದಕ್ಕೆ ಹಂಸನಾಗಿ ಆಕಾಶಕ್ಕೆ ಹಾರಿದ್ದನು. ಎಷ್ಟು ಮೇಲೇರಿದರೂ ಅದು ಸಿಕ್ಕಲಿಲ್ಲ. ಕೇದಗೆ ಮತ್ತು ಕಾಮಧೇನುಗಳನ್ನು ಅಲ್ಲಿ ಅವನು ಕಂಡನು. ಶಿವನಲ್ಲಿಗೆ ಬಂದು ಲಿಂಗದ ತಲೆಯನ್ನು ನೋಡಿದೆನೆಂದು ಸುಳ್ಳು ಹೇಳಿದನು ಕೇದಗೆ ಕಾಮಧೇನುಗಳು ಬ್ರಹ್ಮನ ಹೇಳಿಕೆಗೆ ಹೌದೆಂದು ಸಾಕ್ಷ್ಯವನ್ನು ನುಡಿದವು. ಆಗ ಶಿವನು 'ಅಸತ್ಯವಾದಿಗಳಾದ ಬ್ರಹ್ಮ, ಕಾಮಧೇನು, ಕೇದಗೆಗಳು ಪೂಜೆಗೆ ಸಲ್ಲದೆ ಹೋಗಲಿ, ಸತ್ಯವಾದಿ  ವಿಷ್ಣು  ಪೂಜೆಗೆ ಅರ್ಹನಾಗಲಿ' ಎಂದು ವಿಧಿಸಿದನು. ಇದು ಶಿವನ ಉರಿಲಿಂಗಲೀಲೆ ಎಂದು ಪ್ರಸಿದ್ಧವಾಗಿದೆ.