•  
  •  
  •  
  •  
Index   ವಚನ - 20    Search  
 
ಸಂಸಾರಹೇಯಸ್ಥಲ - ಸಂಸಾರ
ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯ ವಿಷಯವೆಂಬ ವಿಷದಿಂದ ಆನು ಮುಂದುಗೆಟ್ಟೆನಯ್ಯಾ; ಆನು ಹೊರಳಿ ಬೀಳುತ್ತಿದ್ದೆನಯ್ಯಾ. 'ಓಂ ನಮಃ ಶಿವಾಯ' ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯಾ, ಕೂಡಲ ಸಂಗಮದೇವಾ.
Transliteration Sansāravemba sarpa muṭṭalu pan̄cēndriya viṣayavemba viṣadinda ānu mundugeṭṭenayyā; ānu horaḷi bīḷuttiddenayyā. 'Ōṁ namaḥ śivāya' emba mantrava japisuttiddenayyā, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 When the serpent of this world Instilled its venom into me- They call it objects of the fivefold sense- There was no stepping further....I Reel and writhe and toss in pain ! But then I tell and tell the spell ''Ōṁ namah Śivāya!, O Lord Kūḍala Saṅgama ! Translated by: L M A Menezes, S M Angadi
Hindi Translation संसार सर्प के स्पर्श से पंचेंद्रिय – विषय के विष से - मैं पथ - भ्रष्ट हूँ । मैं चक्कर खाकर गिरता हूँ! ‘ऊँ नमः शिवाय’ मंत्र जपता हूँ, कूडलसंगमदेव ॥ Translated by: Banakara K Gowdappa
Telugu Translation సంసారమను సర్పము ముట్ట పంచేంద్రియ విషయమను విషం బెగసె; చెడితినయ్యా! ముందే చెడితి; చెడి తూలి పడుచుంటినయ్యా, నేను; ‘‘ఓంనమశ్శివాయ’’ అను మంత్రము జపించుచుంటినయ్యా, కూడల సంగయ్యా! Translated by: Dr. Badala Ramaiah
Tamil Translation வாழ்வெனும் அரவந்தீண்டி ஐம்புலனின்பமெனும் நஞ்சினாலே நான் உயர்வழிந்தேன் ஐயனே. நான் விழுந்து புரண்டே னையனே, “ஓம் நமச்சிவாய” எனும் மந்திரத்தை ஓதுகிறேன் கூடல சங்கம தேவனே. Translated by: Smt. Kalyani Venkataraman, Chennai
Marathi Translation संसाररुपी सर्प डसता पंचेंद्रिय विषयरुपी विषाने माझे जीवन उध्वस्त झाले. मी चक्कर येऊन पडत आहे. ॐ नमः शिवाय मंत्राचा जप करतो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಆನು = ನಾನು; ವಿಷಯ = ಬಯಕೆ;
ಕನ್ನಡ ವ್ಯಾಖ್ಯಾನ ಸಂಸಾರವೆಂಬುದೊಂದು ಸರ್ಪ-ನಮ್ಮ ಐದು ಇಂದ್ರಿಯಗಳೇ ಅದರ ಐದು ಹೆಡೆಗಳು. ನಾವು ಅನುಭವಿಸುತ್ತಿರುವ ವಿಷಯಾನುಭವಗಳೇ-ಅದರ ಐದು ಬಗೆಯ ವಿಷಗಳು. ಸ್ವಾರ್ಥೈಕಲೋಭಭಾವದಿಂದ ಒಂದು ಶಬ್ಧವನ್ನು ಕೇಳಿದರೆ, ಒಂದು ರೂಪನ್ನು ಕಂಡರೆ, ಒಂದು ವಾಸನೆಯನ್ನು ಮೂಸಿದರೆ, ಒಂದು ಸ್ಪರ್ಶವನ್ನು ಸೋಕಿದರೆ, ಒಂದು ರುಚಿಯನ್ನು ರುಚಿಸಿದರೆ-ಈ ಎಲ್ಲದರಿಂದ ಮೊದಮೊದಲಿಗೆ ನಮಗೆ ಸುಖವೆನಿಸಬಹುದಾದರೂ-ಆತ್ಯಂತಿಕವಾಗಿ ಅದೆಲ್ಲವೂ ಅತೃಪ್ತಿಯಲ್ಲಿ ತವಕದಲ್ಲಿ ತಲ್ಲಣದಲ್ಲಿ ಪರಿಣಮಿಸುತ್ತದೆಯೆಂಬುದು ಕಂಡುಂಡ ವಿಚಾರವೇ ಆಗಿದೆ. ಇಂಥ ಇಂದ್ರಿಯಪರಿಮಿತ ಸ್ವಾರ್ಥಪರಿಮಿತ ಸುಖಕ್ಕಿಂತಲೂ ಭಿನ್ನವಾದೊಂದು ಇಂದ್ರಿಯಾತೀತ ಪರಮಸುಖವಿದೆಯೆಂಬುದು ಅರಿವಿಗೆ ಬಂದು ಅದು ನಮ್ಮದಾಗಬೇಕಾದರೆ-ಓಂ ನಮಶ್ಯಿವಾಯ ಎಂದು ಜಪಿಸುತ್ತಿರಬೇಕು. ಓಂ ನಮಶ್ಯಿವಾಯವೆಂದರೆ-ಯಾವುದೂ ನನ್ನದಲ್ಲ, ಎಲ್ಲವೂ ಶಿವನದು; ಯಾವುದೂ ನನಗಲ್ಲ, ಶಿವನಿಗೆ ಸಮರ್ಪಿತ-ಎಂದು. ನಿರ್ಮಮತೆಯ ನಿರಹಂಕಾರದ ಅರ್ಪಣೆಯ ಸೇವಾಕಾಂಕ್ಷೆಗೆ ಕೊಟ್ಟ ದಿವ್ಯ ನಾಮವೇ-ಓಂ ನಮಶ್ಯಿವಾಯ. ಈ ಶಿವನಾಮಸ್ಮರಣೆಯಿಂದ ಜೀವನ ಅಪರಿಹಾರ್ಯ ಅಂಶವೇ ಆದ ವಿಷಯಾನುಭವವು ತನ್ನ ವಿಷಾಂಶವನ್ನು ಕಳೆದುಕೊಂಡು ಅಚ್ಚ ಆನಂದಾಮೃತವಾಗುವುದು ನಿಶ್ಚಯ. ಸಾಮಾನ್ಯ ಸರ್ಪ ಕಚ್ಚಿದರೆ ಕಚ್ಚಿಸಿಕೊಂಡವನ ಪರವಾಗಿ ಬೇರೊಬ್ಬ ವಿಷವೈದ್ಯನು ಮಂತ್ರವನ್ನು ಉಚ್ಚರಿಸುವನು-ಸಂಸಾರಸರ್ಪ ಕಚ್ಚಿತಾದರೆ-ತನಗೆ ತಾನೇ ಶಿವಮಂತ್ರವನ್ನು ಉಚ್ಚರಿಸುತ್ತ ತನಗೆ ತಾನೇ ನಿರ್ವಿಷ(ಯ)ನಾಗಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು