•  
  •  
  •  
  •  
Index   ವಚನ - 66    Search  
 
ಸಂಸಾರಹೇಯಸ್ಥಲ - ಅನುಗ್ರಹ
ನೀನೊಲಿದರೆ ಕೊರಡು ಕೊನರುವುದಯ್ಯಾ; ನೀನೊಲಿದರೆ ಬರಡು ಹಯನಹುದಯ್ಯಾ; ನೀನೊಲಿದರೆ ವಿಷವೆ ಅಮೃತವಹುದಯ್ಯಾ; ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪುವು, ಕೂಡಲ ಸಂಗಮದೇವಾ.
Transliteration Nīnolidare koraḍu konaruvudayyā; nīnolidare baraḍu hayanahudayyā; nīnolidare viṣave amr̥tavahudayyā; nīnolidare sakala paḍipadārtha idiralirpuvu, kūḍala saṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
English Translation 2 If it's Thy will, O Lord, A log may sprout ! If its Thy will, O Lord, A barren cow gives milk ! If it's Thy will , O Lord, Poison is turned to nectar ! If It's Thy will, O Lord, All things obey one's call, O Kūḍala Saṅgama Lord ! Translated by: L M A Menezes, S M Angadi
Hindi Translation तव कृपा हो, तो काठ पल्लवित होगा । तव कृपा हो, तो बाँझ दूध देगी । तव कृपा हो, तो विष अमृत होगा । तव कृपा हो, तो सकल पदार्थ सम्मुख होंगे कूडलसंगमदेव ॥ Translated by: Banakara K Gowdappa
Telugu Translation నీ వొలయగ కొఱడు కొనలిడునయ్యా, నీవు మెచ్చ గొడ్డు పాలిడునయ్యా, నీవు తలప విషమె అమృత మగునయ్యా; నీవు కోర సకలపడి పదార్ధము లెదుట నిల్చును కూడల సంగమదేవా! Translated by: Dr. Badala Ramaiah
Tamil Translation நீ அருள்புரியின் கட்டை துளிர்க்கும் ஐயனே நீ அருள்புரியின் மலட்டுப்பசு கறக்கும் ஐயனே, நீ அருள்புரியின் நஞ்சு அமிழ்தமாம் ஐயனே, நீ அருள்புரியின் அனைத்துப் பொருட்களும் நல்லெதிர்மறைதனை யெய்தும் கூடல சங்கம் தேவனே. Translated by: Smt. Kalyani Venkataraman, Chennai
Marathi Translation तुम्ही प्रसन्न झाला तर लाकडाला पालवी फूटेल देवा. तुम्ही प्रसन्न झाला तर वांझ गायही दूध देईल देवा. तुम्ही प्रसन्न झाला तर विषसुध्दा अमृत होईल देवा. तुम्ही प्रसन्न झाला तर सर्व काही मिळेल कूडलसंगमदेवा. Translated by Shalini Sreeshaila Doddamani
Urdu Translation جوہوتیراکرم تو خشک لکڑی سےحسیں کونپل نکل آئے جوہوتیرا کرم توبانجھ گائےکےتھنوںمیںدودھ آجائے جوہوتیراکرم توزہر کی تلخی میں بھی امرت کا لطف آئے جوہوتیرا کرم اے کوڈلا سنگا توہرمقصود مِل جائے Translated by: Hameed Almas
ಶಬ್ದಾರ್ಥಗಳು ಕೊನರು = ಚಿಗರು; ಪಡಿ = ಸಮಾನ, ಸಾಟಿ; ಹಯನ = ಬರುಡಾದ ಹಸು;
ಕನ್ನಡ ವ್ಯಾಖ್ಯಾನ ದೇವರೊಲಿದರೆ ಎಲ್ಲವೂ ಸಾಧ್ಯ ಈ ವಚನದಲ್ಲಿ ಅಣ್ಣ ಬಸವಣ್ಣನವರು ದೇವರು ಸರ್ವಶಕ್ತನು, (Omnipo tent) ಅವನಿಗೆ, ಅಸಾಧ್ಯವಾದದು ಯಾವುದೂ ಇಲ್ಲ ಎಂಬುದನ್ನು ತಿಳಿಯ ಪಡಿಸಿದ್ದಾರೆ. ಒಂದು ಒಣಗಿದ ಮರದ ಕೊರಡು ಚಿಗುರುವುದು ನೈಸರ್ಗಿಕ ದೃಷ್ಟಿಯಿಂದ ಅಸಾಧ್ಯ. ಆದರೆ ದೇವರು ಬಯಸಿದರೆ ಅಂತಹ ಕೊರಡು ಚಿಗುರ ಬಲ್ಲದು. ಬರಡಾದ (ಗೊಡ್ಡಾದ) ಹಸು ಹಾಲನ್ನು ಕೊಡಲು ಅಸಮರ್ಥವಾದರೂ ದೇವರು ಇಚ್ಛಿಸಿದರೆ ಹಾಲು ಕೊಡುವಂತಾಗುವುದು. ವಿಷವು ವ್ಯಕ್ತಿಯ ಮರಣಕ್ಕೆ ಕಾರಣವಾಗುವುದು ಸ್ವಾಭಾವಿಕ, ಆದರೆ ಅಂತಹ ವಿಷವೂ ದೇವರ ಕೃಪೆಯಿಂದ ಅಮೃತವಾಗಿ ಪರಿಣಮಿಸಿ ಆ ವ್ಯಕ್ತಿಯು ಚಿರಂತನವಾಗಿ ಬಾಳಲು ಸಾಧ್ಯ. ಆದ್ದರಿಂದ ದೇವರ ಒಲುಮೆ ಮುಖ್ಯವೇ ಹೊರತು ನಾವು ಬಯಸುವ ಅಥವಾ ಬಯಸದಿರುವ ವಸ್ತುಗಳಲ್ಲ. ನಾವು ಏನನ್ನಾದರೂ ಬಯಸುವುದು ತಾತ್ಕಾಲಿಕ ಸ್ಥಿತಿಗಳನ್ನು, ಸನ್ನಿವೇಶ ಪರಿಸರಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ. ಆಗಲೂ ನಮ್ಮ ಬೇಡಿಕೆಗಳು ಸರಿಯಾದವಿರುವುದಿಲ್ಲ. ಎಷ್ಟೋ ವೇಳೆ ನಮ್ಮ ಹಿತಕ್ಕೆ ಧಕ್ಕೆ ತರುವಂಥವೇ ಆಗಿರುತ್ತವೆ. ಉದಾಹರಣೆಗೆ ಒಬ್ಬ ಹಾಲು ಮಾರವ ಗವಳಿಗನಿರುತ್ತಾನೆ. ಅವನ ಮನೆಯಲ್ಲಿ ಹಸುವೇನೋ ಇದೆ. ಆದರೆ ಅದು ಬರಡು (ಗೊಡ್ಡು). ಆದ್ದರಿಂದ ಅವನು ದೇವರಲ್ಲಿ ಮೊರೆಯಿಡುತ್ತಾನೆ. ‘ನನ್ನ ಹಸು ಗರ್ಭಧರಿಸುವಂತೆ ಮಾಡು (ಗಬ್ಬಾಗುವಂತೆ ಮಾಡು)’ ಎಂದು. ಅವನ ಮೊರೆಯನ್ನು ಆಲಿಸಿದ ದೇವರ ಕೃಪೆಯಿಂದ ಹಸು ಗರ್ಭಧರಿಸಿತು; ಕರುವನ್ನೂ ಹಾಕಿತು. ಆದರೆ ಮುಂದೇನಾಯಿತು. ಗೊತ್ತೇ? ಕರು ಸತ್ತು ಹೊಯಿತು; ಹಸು ಹಾಲು ಕೊಡದಾಯಿತು. ಇದರಿಂದ ಲಾಭವೇನು? ಗವಳಿಗ ಕಣ್ಣೀರು ಸುರಿಸಲಾರಂಭಿಸಿದ ಅವನಿಗೆ ಬೇಕಾದ್ದು ಹಾಲು. ಹಸು ಗರ್ಭ ಧರಿಸುವುದಲ್ಲ, ಕರು ಹಾಕುವುದಲ್ಲ. ಹಸು ಗೊಡ್ಡಾಗಿದ್ದೇ ಹಾಲು ಕೊಟ್ಟರೂ ಸರಿ. ಹಸು ಗರ್ಭಧರಿಸಿದರೆ ಹಾಲು ಕೊಟ್ಟೇ ಕೊಡುವುದೆಂದು ಅವನ ಭಾವನೆ. ಆದರೆ ಅದು ಹೀಗಾಗುತ್ತದೆಯೆಂದು ಅವನು ಊಹಿಸಿರಲಿಲ್ಲ. ಹಾಗಾಗುವುದೆಂದು ಮೊದಲೇ ತಿಳಿದಿದ್ದರೆ ‘ಹಸುವಿನಿಂದ ನನಗೆ ಹಾಲು ದೊರಕುವಂತೆ ಮಾಡು' ಎಂದೇ ದೇವರನ್ನು ಪ್ರಾರ್ಥಿಸುತ್ತಿದ್ದ. ಆದ್ದರಿಂದಲೇ ಮೇಲೆ ಹೇಳಿರುವುದು; ಎಷ್ಟೋ ವೇಳೆ ನಮ್ಮ ಬೇಡಿಕೆಗಳು (ಪ್ರಾರ್ಥನೆಗಳು) ನಮ್ಮ ಹಿತಕ್ಕೆ ಅನುಗುಣವಾಗಿರುವುದಿಲ್ಲ ಎಂದು. ಮೇಲಿನ ಉದಾಹರಣೆಯನ್ನೇ ನೋಡಿದರೆ ಜೀವನದ ಅಂತಿಮ ಗುರಿಯನ್ನು ಮುಟ್ಟುವುದು ಹೇಗೆ ಎಂದು ಯೋಚಿಸಿ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾರ್ಥಿಸದೆ ತಾತ್ಕಾಲಿಕ ಸ್ಥಿತಿಗತಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಾವು ಪ್ರಾರ್ಥಿಸುವೆವು ಎಂಬುದನ್ನೂ ಮನಗಾಣಬಹುದು. ಅಂತಹ ಪ್ರಾರ್ಥನೆಗಳು ಕೆಲವು ವೇಳೆ ಹೀಗೆ ಸಹಕಾರಿಯಾಗಲಾರವೆಂಬುದನ್ನೂ ಮೇಲೆ ಕಾಣಬಹುದು. ಆದ್ದರಿಂದ ನಾವು ಬೇಕು-ಬೇಡಗಳ ಜವಾಬ್ದಾರಿಯನ್ನು ದೆೇವರ ಮೇಲೆಯೇ ಹೊರಿಸಿ. ಅವನ ಒಲುಮೆಯ ಕಡೆ ಮನ ಕೊಡುವುದು ಉತ್ತಮ. ತಾಯಿ, ಮಗುವಿನಿಂದ ಹೇಳಿಸಿಕೊಂಡೇ ಹಾಲು ಕೊಡುವುದಿಲ್ಲ. ಮಗುವಿನ ಸಂರಕ್ಷಣಾ ಭಾರವನ್ನು ಸಂಪೂರ್ಣ ಹೊತ್ತಿರುವವಳು ಮಗುವಿನ ಬೇಕು-ಬೇಡಗಳನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳುವಳು. ಆದ ಪ್ರಯುಕ್ತ ನಾವು ದೇವರನ್ನು ಒಲಿಸಿಕೊಳ್ಳುವತ್ತ ಮನ ಹರಿಸಬೇಕು. ಅವನಿಗೆ ನಮ್ಮನ್ನೇ ಸಮರ್ಪಿಸಿಕೊಳ್ಳಬೇಕು. ಆಗ ಸರ್ವ ದಯಾಪಾರಿಯಾದ, ಸರ್ವಶಕ್ತನಾದ ದೇವರು ನಾವು ಬಯಸದಿದ್ದರೂ ನಮಗೆ ಹಿತಕಾರಿಯಾದ, ಅವಶ್ಯಕವಾದ ವಸ್ತುಗಳನ್ನು ನಮ್ಮ ಮುಂದೆಯೇ ಬಂದು ನಿಲ್ಲುವಂತೆ ಮಾಡುವನು. ‘...... ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿರ್ಪುವು ಕೂಡಲಸಂಗಮದೇವಾ!' - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.