•  
  •  
  •  
  •  
Index   ವಚನ - 304    Search  
 
ಭಕ್ತನ ಭಕ್ತಸ್ಥಲ - ಜಂಗಮ
ಒಡೆಯರಿಗೆ ಒಡವೆಯನೊಪ್ಪಿಸಲಾರದೆ ಮೊರೆಯಿಡುವ ಮನವ ನಾನೇನೆಂಬೆ? ನೆತ್ತಿಯಲ್ಲಿ ಅಲಗ ತಿರುಹುವಂತಪ್ಪ ವೇದನೆಯಹುದೆನಗೆ! ಕೊಯ್ದಮೂಗಿಂಗೆ ಕನ್ನಡಿಯ ತೋರುವಂತಪ್ಪ ವೇದನೆಯಹುದೆನಗೆ! ಬೆಂದ ಹುಣ್ಣ ಕಂಬಿಯಲ್ಲಿ ಕೀಸುವಂತಪ್ಪ ವೇದನೆಯಹುದೆನಗೆ! ಕೂಡಲಸಂಗಮದೇವ ಮಾಡಿ ನೋಡುವ ಹಗರಣವ ನಾ ಮಾಡಿಹೆನೆಂದರೆ ಮನಕ್ಕೆ ಮನ ನಾಚದೆ, ಅಯ್ಯಾ.
Transliteration Oḍeyarige oḍaveyanoppisalārade moreyiḍuva manava nānēnembe? Nettiyalli alaga tiruhuvantappa vēdaneyahudenage! Koydamūgiṅge kannaḍiya tōruvantappa vēdaneyahudenage! Benda huṇṇa kambiyalli kīsuvantappa vēdaneyahudenage! Kūḍalasaṅgamadēvā māḍi nōḍuva hagaraṇava nā māḍ'̔ihenendare manakke mana nācade, ayyā.
Manuscript
English Translation 2 Unless I can surrender Unto my Master what is His, What shall I think of this Lamenting heart of mine? Even as a blade That’s spun in my head, My pain shall be! Even as a mirror shown To one whose nose is cut, My pain shall be! Even as a point Searching a scalded scar, My pain shall be! Should I repeat the pranks Lord Kūḍala Saṅgama plays For trial' s sake, Will not my mind, O Lord, Blush at itself? Translated by: L M A Menezes, S M Angadi
Hindi Translation प्रभु की वस्तु न सौंप सकने के कारण विलाप करनेवाले मन को क्या कहूँ? सिर में बर्छी चुभने की सी वेदना होती है मुझे! कटी नाक को दर्पण दिखाने की भाँति वेदना होती है मुझे! जले व्रण पर कील खुरचने की भाँति वेदना होती है मुझे! कूडलसंगमदेव कृत अभिनय मुझसे ही हुआ कहने पर, मन लज्जित नहीं होता? Translated by: Banakara K Gowdappa
Telugu Translation ఒడయుల కొడవుల నొప్పింపలేక మొఱలిడ మనసు నేమందు? నెత్తిపై కత్తి త్రిప్పినంత వేదనయగు నాకు కోసిన ముక్కున కద్దము చూపించినంత వేదనయగు నాకు కాలినపుండును కమ్మితో కెలకినంత వేదనయగు నాకు సంగయ్య చేసిచూపెడి నాట్యము నే జేసితినన మనసుకు మనసే సిగ్గగునయ్యా Translated by: Dr. Badala Ramaiah
Marathi Translation मालकाला संपत्ती अर्पण केल्याविना हाक मारणाऱ्या मनाला काय म्हणावे? डोक्यावर तलवार फिरविल्याप्रमाणे वेदना होते. कापलेल्या नाकाला दर्पण दाखविल्यासम वेदना होते. पिकलेल्या फोडावर लोखंडी टोकाने टोचल्यासम वेदना होते. कूडलसंगमदेवाच्या लिला- विनोदाचे अनुकरण मी करु लागलो तर, मनाची मलाच लाज वाटते देवा. Translated by Shalini Sreeshaila Doddamani
ಶಬ್ದಾರ್ಥಗಳು ಅಲಗ = ; ಒಡವೆ = ; ಕೀಸು = ; ಮೊರೆ = ; ವೇದನೆ = ; ಹಗರಣ = ; ಹುಣ್ಣು = ;
ಕನ್ನಡ ವ್ಯಾಖ್ಯಾನ ವಿಶ್ವನಾಥನಾದ ಶಿವನ ಒಡವೆಯಲ್ಲವೆ ಈ ವಿಶ್ವವೆಲ್ಲಾ ? ಆ ಶಿವನ ಪ್ರತಿನಿಧಿಗಳಲ್ಲವೆ ಶರಣರು ಮತ್ತು ಜಂಗಮರು ? ಅವರಿಗೆ ತನ್ನ ತನು ಮನ ಧನವನ್ನು ಕೊಡುವುದಲ್ಲವೆ ಧರ್ಮ-ಶಿವನ ಕಿಂಕರನೆಂದು ಕರೆಸಿಕೊಳ್ಳುವ ಭಕ್ತನಿಗೆ ? ಆದರೆ ಅವನು ಏನನ್ನೂ ತ್ಯಾಗಮಾಡಲಾರ-ಬರಿದೆ ಶಿವನನ್ನು ಕುರಿತು ನನ್ನನ್ನು ಉದ್ಧಾರ ಮಾಡೆಂದು-ನಾಟಕದಲ್ಲಿ ಕೋಡಂಗಿಯಂತೆ-ಮೇಲೆ ಮೇಲೆ ಮೊರೆಯಿಡುತ್ತಾನೆ. ತನುಮನಧನ ವಂಚಕನಾದ ಭಕ್ತನ ಆ ಮೊರೆ ಕೇವಲ ಡಂಬಾಚಾರವಷ್ಟೆ ಎನ್ನುತ್ತ-ಬಸವಣ್ಣನವರು ತಮ್ಮನ್ನು ಆ ವಂಚಕ ಭಕ್ತನಿಗೆ, ಮತ್ತು ತಮ್ಮ ಪ್ರಾರ್ಥನೆಯನ್ನು ಅವನ ಡಂಬಾಚಾರದ ಮೊರೆಗೆ ಹೋಲಿಸಿಕೊಂಡು ವೇದನೆಪಡುತ್ತಿರುವರು. ಮತ್ತು ಆ ತಮ್ಮ ವೇದನೆಯನ್ನು-ತಲೆಗೆ ಚುಚ್ಚಿ ಮೀಟಿದ ಕತ್ತಿಯ ಏಟಿನಿಂದಾಗುವ ಮನಭಂಗದ ಪ್ರಾಣಸಂಕಟಕ್ಕೆ, ಮೂಗನ್ನು ಕೊಯ್ದು ಮುಖಕ್ಕೆ ಕನ್ನಡಿ ಹಿಡಿದಾಗ ಆಗುವ ಮುಖಭಂಗದ ಯಾತನೆಗೆ, ಸುಟ್ಟ ಗಾಯದ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದರೆ ಆಗುವ ತನುಭಂಗದ ಬಾಧೆಗೆ ಸಮವೆಂದು ತತ್ತರಿಸುತ್ತಿರುವರು. ಮತ್ತೆ ಮುಂದುವರಿದು-ಈ ಸಂಸಾರದ ಹಗರಣ(ನಗೆನಾಟಕ)ದಲ್ಲಿ ನಾನು ನಿನ್ನ ಕೈಯ ಬೊಂಬೆ ಮಾತ್ರ-ನೀನಾಡಿಸಿದಂತೆ ನಾನಾಡುತ್ತಿರುವೆನೆನ್ನುತ್ತ ತಮ್ಮ ಭಕ್ತಿಜೀವನದ ಅಸಂಗತಗಳನ್ನೆಲ್ಲಾ ಶಿವನಿಗೇ ಅರ್ಪಿಸಿಕೊಂಡು ಮತ್ತಷ್ಟು ನೋವಿನಿಂದ ವಿನಮ್ರವಾಗುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು