•  
  •  
  •  
  •  
Index   ವಚನ - 449    Search  
 
ಭಕ್ತನ ಮಾಹೇಶ್ವರಸ್ಥಲ - ನಂಟುಭಕ್ತಿ
ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ; ನಂಟರು ಬಂದರೆ ಸಮಯವಿಲ್ಲೆನ್ನಿ! ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು? ಸಮಯಾಚಾರಕ್ಕೊಳಗಾದಂದು? ಪರುಷ ಮುಟ್ಟಲು ಕಬ್ಬುಣ ಸುವರ್ಣವಾಯಿತ್ತು: ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ?
Transliteration Oḍeyaru bandare guḍi tōraṇava kaṭṭi, naṇṭaru bandaḍe samayavillenni. Andēke bāraru? Nīriṅge nēṇiṅge horagādandu, samayācārakke oḷagādandu. Paruṣa muṭṭalu kabbuna suvarṇavāyittu. Baḷika bandhugaḷuṇṭe, kūḍalasaṅgamadēvā?
Manuscript
Music Courtesy: Akkanabalaga, Sri Taralabalu Jagadguru Brihanmath, Sirigere
English Translation 2 Oḍeyaru bandare guḍi tōraṇava kaṭṭi; naṇṭaru bandare samayavillenni! Andeke bāraru nīriṅge nēṇiṅge horagādandu? Samayācārakkoḷagādandu? Paruṣa muṭṭalu kabbuṇa suvarṇavāyittu: Baḷika bandhugaḷuṇṭe, kūḍalasaṅgamadēvā? Translated by: L M A Menezes, S M Angadi
Hindi Translation प्रभुओं के आने पर ध्वज-तोरण बाँधो; संबंधियों के आने पर कहो समय नही है। जल जनेऊ से बहिष्कृत होने पर, समयाचार अपनाने पर वे क्यों न आये? पारस स्पर्श से लोहा स्वर्ण बना तत्पश्चात् संबंधी कहाँ, कूडलसंगमदेव ? Translated by: Banakara K Gowdappa
Telugu Translation ఒడయులు రాగ గుడి తోరణములు కట్టి చుటములు రాగ బిడువు లేదనుడో! నీటికి త్రాటికి వెలిjైున వేళ సమయాచారమునకు వెలిjైున వేళ వీరేటికి రారో? స్పర్శవేది సోక లోహము సువర్ణ మైపోవ యిక చుట్టములెవ్వరో కూడల సంగమ దేవా! Translated by: Dr. Badala Ramaiah
Tamil Translation உடையர் வரின் கோபுரம், தோரணம் கட்டுவீர் உறவினர் வரின் நேரமில்லை என்பீர் அன்று ஏன் வரவில்லை குல ஆசார சடங்கை மேற்கொண்டபொழுது பரிசவேதி தீண்டிட இரும்பு பொன்னாயிற்று. பிறகு உறவினர் உண்டோ, கூடல சங்கமதேவனே Translated by: Smt. Kalyani Venkataraman, Chennai
Marathi Translation गुढी तोरणाने, स्वागत ते करू शिवशरण तारु, सर्वकाळ कोणाचे हे बंधू, कोणाचे सोयरे संकटात सारे लोपताती तयालागी वेळ, आम्हा नाही द्याया समयाचार वाया, घालिताती त्यागिता जाणवे, सोडिता घरदार तोडिता व्यवहार, नातीगोती त्यागूनि सर्वास, स्विकारू शरणास तृप्त करु त्यास, दासोहाने लोहासि सुवर्ण, करी पारस जाण शिवशरण चरण, तैसापरी कूडलसंगमदेवा! शरण ते अपूर्व आप्त बंधू सर्व, काय कीजे ? अर्थ- शिवशरणांच्या स्वागतासाठी गुड्या तोरणे उभारून उत्साहाने त्यांचे स्वागत करीन. आई - वडील, भाऊ बंधू, नाती – गोती, गण-गोत्र इत्यादि सर्व स्वार्थाचे सोबती होत. प्रसंगावर ते कामी पडत नाहीत मात्र माझ्या कूडलसंगमदेवाचे शिवशरण माझ्या उद्धारार्थ मार्गदर्शन करतात व आम्हास सदैव जागृत ठेवतात. म्हणून त्यांचे पवित्र चरण आम्हास पारसाहूनही श्रेष्ठ वाटतात. आम्ही यज्ञोपवित्राचा व घरादाराचा त्याग केला तेव्हा ते गणगोत्र कोठे होते ? Translated by Rajendra Jirobe, Published by V B Patil, Hirabaug, Chembur, Mumbai, 1983 शरण आगमनाचे ध्वज तोरणाने स्वागत करावे. बांधव येता वेळ नाही असे सांगावे. तेव्हा का आले नाही. जाणवे-पाणी त्यागले तेव्हा? वेळप्रसंग आला तेव्हा ? परिसस्पर्शाने लोखंडाचे सोने झाल्यावर बंधू बांधवांना घेऊन काय करायचे कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಕಬ್ಬುನ = ; ತೋರಣ = ; ನೇಣು = ; ಪರುಷ = ; ಸುವರ್ಣ = ; ಹೊರಗಾಗು = ;
ಕನ್ನಡ ವ್ಯಾಖ್ಯಾನ ಸಮಯ ಸಾಧಕರು ನಂಟರು ಶ್ರೀ ಬಸವೇಶ್ವರರ ಬಹುಪಾಲು ವಚನಗಳಿಗೆ ಒಂದಲ್ಲ ಒಂದು ಐತಿಹಾಸಿಕ ಘಟನೆಗಳ ಹಿನ್ನೆಲೆ ಇರುವುದಾದರೂ ಅದನ್ನು ಕಂಡುಕೊಳ್ಳುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ಆದರೆ ಕೆಲವು ವಚನಗಳಲ್ಲಿ ನೇರವಾಗಿ ಘಟನೆಗೆ ಸಂಬಂಧಿಸಿದ ಉಕ್ತಿಗಳಿವೆ. ಅಂತಹ ವಚನಗಳಲ್ಲಿ ಪ್ರಸ್ತುತ ವಚನವೂ ಒಂದು. ಕಲ್ಯಾಣದ ಚಾಲುಕ್ಯ ಮಹಾ ಸಾಮ್ರಾಜ್ಯದ ಮಹಾಮಂತ್ರಿ ಪದವಿಯಲ್ಲಿ ರಾರಾಜಿಸುವ, ಮತ್ತೊಂದು ಕಡೆ ಅನುಭವ ಮಂಟಪದ ಶರಣರ ಡಿಂಗರಿಗರ ಡಿಂಗರಿಗರಾದ ಸೌಜನ್ಯ ಮೂರ್ತಿ ಬಸವಣ್ಣನವರು ನೀಡಿದ ಆದೇಶವದು. “ಒಡೆಯರು ಬಂದರೆ ಗುಡಿತೋರಣವ ಕಟ್ಟಿ, ನಂಟರು ಬಂದರೆ ಸಮಯವಿಲ್ಲೆನ್ನಿ.....” ಇಲ್ಲಿ ಒಡೆಯರು ಎಂದರೆ ಜಾತ್ಯತೀತ ಮಾನವರು. ಜಾತಿಯ ಬಂಧನದಿಂದ ಹೊರಗಾಗಿ ಮಾನವತೆಯನ್ನಪ್ಪಿಕೊಂಡ ಜನರನ್ನು ‘ಒಡೆಯರು’ ಎಂದು ಗೌರವದಿಂದ ಸಂಬೋಧಿಸಿದ್ದಾರೆ. ಬಸವಣ್ಣನವರು ಅಂತಹ ಜಾತ್ಯತೀತ ಜನರು ಬಂದರೆ ತಳಿರು ತೋರಣಗಳನ್ನು ಕಟ್ಟಿ ವೈಭವ ಸಂರ್ಭಮಗಳಿಂದ ಸುಸ್ವಾಗತಿಸಿ ಎನ್ನುತ್ತಾರೆ ಅಣ್ಣನವರು. ಆದರೆ ನಂಟರು ಬಂದರೆ ಅವರನ್ನು ಸ್ವಾಗತಿಸುವುದಿರಲಿ, ಈಗ ಸಮಯವೇ ಇಲ್ಲವೆಂದು ಹೇಳಿ ಅವರನ್ನು ಹಿಂತಿರುಗಿಸಿ ಎಂದು ಎಚ್ಚರಿಸುತ್ತಿದ್ದಾರೆ. ಏಕೆಂದರೆ ಅವರು ಜಾತಿಯನ್ನೂ ನಂಟುತನವನ್ನೂ ಮುಂದಿಟ್ಟುಕೊಂಡು ಅವುಗಳ ಮಾಧ್ಯಮದಿಂದ ತಮ್ಮ ಆಶೋತ್ತರಗಗಳನ್ನು ಸಾಧಿಸಿಕೊಳಲು ಬರುವ ಸ್ವಾರ್ಥಿಗಳು. ಹೀಗೆ ನಂಟರು ನಂಟುತನದ ದಾಕ್ಷಣ್ಯವನ್ನು ಹೇರಲು ಮುಂದಾಗುವರು. ಈ ನಂಟರಾದರೋ ನಂಟುತನವನ್ನು ಮುಂದುಮಾಡಿಕೊಂಡು ಬರುವುದು ನೀವು ಅಧಿಕಾರಾರೂಢರಾಗಿದ್ದಾಗಲೇ. ಹಾಗಲ್ಲದಿದ್ದರೆ ಇಂದು ನಾನು ಅಧಿಕಾರದಲ್ಲಿರುವಾಗ ಮುನ್ನುಗ್ಗಿ ಬರುತ್ತಿರುವ ಈ ನಂಟರು “...ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು ಸಮಯಾಚಾರ್ಯಕೊರಳಗಾದಂದು...” ಎಂದು ತಮ್ಮನ್ನೇ ಉದಾಹರಣೆಯಾಗಿಟ್ಟುಕೊಂಡು ಅಧಿಕಾರದಲ್ಲಿರುವವರನ್ನು ಎಚ್ಚರಿಸುತ್ತಿದ್ದಾರೆ ಅಣ್ಣನವರು. ಹಾಗಾದರೆ ಅಂದು ಬಸವಣ್ಣನವರಿಗೆ ಆದದ್ದೇನು? ಬಸವಣ್ಣನವರು ಜನ್ಮತಃ ಬ್ರಾಹ್ಮಣ ಜಾತಿಯವರು. ಹೀಗೆ ಬ್ರಾಹ್ಮಣ ಕುಲದವರಾಗಿದ್ದಾಗ ಘಟಿಸಿದ ಒಂದು ದುರ್ಘಟನೆಯ ಸೂಚನೆ ಇಲ್ಲಿ ದೊರೆಯುತ್ತದೆ. ಅವರು ಬ್ರಾಹ್ಮಣ ಕುಲದಿಂದ ಬಹಿಷ್ಕೃತರಾದುದೇ ಆ ಘಟನೆ. ಇಲ್ಲಿ ಅವರಿಗೆ ಉಪನಯನ ಸಂಸ್ಕಾರವಾಗಿತ್ತೇ ಇಲ್ಲವೇ ಎಂಬ ಸಮಯೋಚಿತ ಜಿಜ್ಞಾಸೆ ಉಂಟಾಗುತ್ತದೆ. ಭೀಮ ಕವಿಯು ತನ್ನ ಬಸವ ಪುರಾಣದಲ್ಲಿ ಬಸವೇಶ್ವರರು ಬಾಲ್ಯದಲ್ಲಿಯೇ ಉಪನಯನ ಸಂಸ್ಕಾರವನ್ನು ತಿರಸ್ಕರಿಸಿದರೆಂದು ಹೇಳಿದರೆ, ಹರಿಹರನು ತನ್ನ ಬಸವರಾಜ ದೇವರ ರಗಳೆಯಲ್ಲಿ ‘......... ಕರ್ಮಲತೆಯಂತಿರ್ದ ಜನ್ನಿವಾರಮಂ ಕಳೆದು ಬಿಸುಟಿ....’ ಎಂದು ಹೇಳುವಲ್ಲಿ ಉಪನಯನ ಸಂಸ್ಕಾರ ಆಗಲೇ ಆಗಿತ್ತೆಂದು ಸೂಚಿಸಿದ್ದಾನೆ. ಹರಿಹರನು ಸೂಚಿಸಿರುವಂತೆ ಬಸವಣ್ಣನವರಿಗೆ ಬಾಲ್ಯದಲ್ಲಿಯೇ ಉಪನಯನ ಸಂಸ್ಕಾರ ಆಗಿರಲೇಬೇಕು. ಇದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಇದಕ್ಕೆ ಅವರ ವಚನಗಳೇ ಪ್ರಮಾಣ. ಅವರಿಗೆ ಉಪನಯನ ಆಗಿತ್ತೇ ಇಲ್ಲವೇ ಎಂಬುದನ್ನು ತಿಳಿಯಲು ಬಸವ ಪುರಾಣ ಇತ್ಯಾದಿ ಗ್ರಂಥಗಳನ್ನು ಆಶ್ರಯಿಸಿ ಹೊರಡುವುದು ಕೈಯ ಕಂಕಣಕ್ಕೆ ಕನ್ನಡಿಯ ಹಿಡಿಯ ಹೋದಂತೆ. ಒಂದು ಪಕ್ಷ ಹಾಗೆ ಮಾಡಿದರೂ ಈ ಗ್ರಂಥಗಳಲ್ಲಿ ಭಕ್ತಿಯ ಆವೇಶ ಹಾಗೂ ಕಾವ್ಯದ ಮೆರುಗಿನಲ್ಲಿ ಐತಿಹಾಸಿಕ ಘಟನೆ ಬಹು ಅಸ್ಪಷ್ಠವಾಗಿ , ಅಸಹಜವಾಗಿ ಪ್ರತಿಬಿಂಬಿತವಾಗಿರುವುದು ಕಾಣದಿರದು. ಆದ್ದರಿಂದ ಮುಂಗೈಯ ಕಂಕಣದಂತೆ ನಮ್ಮ ಮುಂದಿರುವ ಅಣ್ಣನವರ ವಚನವನ್ನೇ ನೋಡೋಣ.‘,........ ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು.......’ ಮಾನವ ಮಾನವರ ವಿಘಟನೆಗೆ ಕಾರಣವಾಗಿ, ಮಾನವತೆಯ ಕೊರಳಿಗೆ ಉರುಲಾಗಿದ್ದ ಜನಿವಾರವನ್ನು ಅಣ್ಣನವರು ಇಲ್ಲಿ ‘ನೇಣು’ ಎಂದು ಕರೆದಿದ್ದಾರೆ. ಆ ನೇಣಿನಿಂದ ಹೊರಗು ಮಾಡಿದರು ಎನ್ನುವಾಗ ಅವರು ತಮಗೆ ಉಪನಯನ ಸಂಸ್ಕಾರವಾಗಿತ್ತೆಂದು ನೇರವಾಗಿಯೇ ನಿರ್ದೇಶಿಸಿರುತ್ತಾರೆ. ಸಂದರ್ಭಾನುಸಾರವಾಗಿ ಆವಿರ್ಭವಿಸಿದ ಜಿಜ್ಞಾಸೆಗೆ ಉತ್ತರವಾಗಿ ಬಸವಣ್ಣನವರ ಈ ಮೇಲಿನ ನುಡಿಯನ್ನು ಇಲ್ಲಿ ಬಳಸಿಕೊಂಡಿದ್ದು ಘಟನೆಗೆ ಸಂಬಂಧಿಸಿದಂತೆ, ಅದರ ಭಾವ ಇಂತಿದೆ. ಇಂದು ನಾನು ಮುಖ್ಯಮಂತ್ರಿಯ ಸ್ಥಾನದಲ್ಲಿರುವೆ, ಆ ಕಾರಣದಿಂದ ಈ ನಂಟರೆಲ್ಲಾ ಬಸವಣ್ಣನು ನಮ್ಮವನು ನಮ್ಮ ಹತ್ತಿರದ ನಂಟ ಎಂದು ಎಲ್ಲರ ಹತ್ತಿರ ಹೆಮ್ಮೆಯಿಂದ ಹೇಳುತ್ತಾ ಬರುತ್ತಿರುವರಲ್ಲಾ, ಅಂದು ಜನಿವಾರವನ್ನು ಕಿತ್ತುಕೊಂಡು ನನ್ನನ್ನು ತಮ್ಮ ಜಾತಿಯಿಂದ ಬಹಿಷ್ಕರಿಸಿದಾಗ ಈ ನಂಟರು ಎಲ್ಲಿಗೆ ಹೋಗಿದ್ದರು? ಆಗ ಬಸವಣ್ಣನು ನಮ್ಮ ನಂಟ ಎನ್ನುವುದಿರಲಿ ನಮ್ಮವನು ಎಂದು ಕೊಳ್ಳುವುದಕ್ಕೂ ಈ ನಂಟರು ಸಿದ್ದರಿರಲಿಲ್ಲವಲ್ಲ ಏಕೆ? ಎಂಬುದು ಅಣ್ಣನವರ ಇಲ್ಲಿಯ ಪ್ರಶ್ನೆಯ ಇಂಗಿತಾರ್ಥ. ಬಸವಣ್ಣನವರನ್ನು ಬಹಿಷ್ಕರಿಸಿ ಬೆಂಕಿ ಬಿಸಿನೀರುಗಳನ್ನು ಕಟ್ಟು ಮಾಡಿ ದೇವರೇ ಅವರ ನಂಟರು. ಜನಿವಾರವನ್ನು ಕಿತ್ತುಕೊಂಡವರೂ ಅವರ ನಂಟರೇ. ಈಗ ಅಧಿಕಾರದಲ್ಲಿರುವಾಗ ಬರುತ್ತಿರುವವರೂ ಅದೇ ನಂಟರೇ. ಆದರೆ ಅವರನ್ನು ಸ್ವಾಗತಿಸಲು ಅಣ್ಣನವರು ಸಿದ್ದರಿಲ್ಲ. ಅದಕ್ಕೂ ಮೊದಲು ಅವರನ್ನು ಬಂಧುಗಳೆಂದು ಭಾವಿಸಲು ಅವರು ಸಿದ್ದರಿಲ್ಲ. “.......... ಪುರುಷ ಮುಟ್ಟಲೊಡನೆ ಕಬ್ಬುನ ಸುವರ್ಣವಾಹಿತ್ತು ಬಳಿಕ ಬಂಧುಗಳುಂಟೆ ಕೂಡಲಸಂಗಮಮದೇವಾ?” ಕಬ್ಬಿಣವು ಪರುಷ ಮಣಿಯ ಸಂಸ್ಫರ್ಶದಿಂದ ಬಂಗಾರವಾಗುತ್ತದೆ. ಕಬ್ಬಿಣವನ್ನು ಸುವರ್ಣಮಯವಾಗಿಸತಕ್ಕಂಥ ಶಕ್ತಿಯು ಆ ಪುರುಷಮಣಿಯಲ್ಲಿದೆ. ಅಂತೆಯೇ ಶಿವದೀಕ್ಷಾ ಸಂಸ್ಕಾರದಿಂದ ಮಾನವನಲ್ಲಿದ್ದ ನರತ್ವವು ದೂರಗೊಂಡು ಅವನಲ್ಲಿ ಹರತ್ವವು ಅಳವಡುತ್ತದೆ. ನರನಾಗಿದ್ದ ಮಾನವನನ್ನು ಹರನನ್ನಾಗಿಸುವ ಶಕ್ತಿ ಶ್ರಿ ಗುರುವಿನಿಂದ ಕರಸ್ಥಲಕ್ಕೆ ಕರುಣಿಸಲ್ಪಟ್ಟ ಆ ಲಿಂಗದಲ್ಲಿದೆ. ಇಂತು ಜಾತಿ ಸಂಕೋಲೆಗಳ ಬಂಧನದಿಂದ ವಿಮುಕ್ತನಾಗಿ ಮಾನವನ ಧರ್ಮದ ನಿಜ ಅರಿವಿನಿಂದ ಒಗ್ಗೂಡಿದ ಜನತೆಯತ್ತ ಸಾಗುತ್ತಾನೆ. ಹಿಂದಿನ ಜಾತಿಯ ಕಾರಣದಿಂದ “ಇವರು ನಮ್ಮವರು, ಇವರು ನಮ್ಮವರಲ್ಲ” ಎಂಬ ಸಂಕುಚಿತ ಭಾವನೆಯನ್ನು ತಾಳಲು ಇಲ್ಲಿ ಅವಕಾಶವೇ ಇಲ್ಲ. ಒಂದು ಪಕ್ಷ ಹಾಗೆ ಸಂಕುಚಿತ ದೃಷ್ಠಿಯುಳ್ಳವನಾದರೆ ಅವನಲ್ಲಿ ಹರತ್ವವು ಇನ್ನು ಅಳವಟ್ಟಿಲ್ಲವೆಂದೇ ಹೇಳಬೇಕಾಗುತ್ತದೆ. ಇದರಿಂದ ಲಿಂಗದ ಶಕ್ತಿಗೆ ಕುಂದೇನೂ ಇಲ್ಲ. ತನ್ನ ಕರಸ್ಥಲದಲ್ಲಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಅವನ ದೌರ್ಭಾಗ್ಯ. (ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ ಕೊಳಗ ಬಳಲುವುದೇ.......?) ಹೀಗೆ ಜಾತಿಯ ಕಾರಣದಿಂದ ಆಗದಿದ್ದರೂ ರಕ್ತ ಸಂಬಂಧದಿಂದಲಾದರೂ ನಂಟರಾಗಲೇ ಬೇಕಲ್ಲವೇ, ಎಂದರೆ ಅದು ಸಾಧ್ಯವಿಲ್ಲ. ಅಣ್ಣನವರೇ ಇನ್ನೊಂದು ಕಡೆ ಹೇಳಿರುವಂತೆ ‘ಆರಾಧ್ಯ ಪ್ರಾಣಲಿಂಗವೆಂದರಿದು ಪೂರ್ವಗುಣವಳಿದು, ಪುನರ್ಜಾತನಾದ ಬಳಿಕ ಸಂಸಾರ ಬಂಧುಗಳೆನ್ನವರೆಂದೊಡೆ ‘ನಂಟುಭಕ್ತಿ ನಾಯಕನರಕ .......’ ಕಾರುಣ್ಯ ಮೂರ್ತಿ ಗುರುವಿನ ಹಸ್ತ ಶಿಷ್ಯನ ಮಸ್ತಕದೊಡನೆ ಎಂದು ಸಂಯೋಗಗೊಂಡಿತೋ ಅಂದೇ ಆಣವಾದಿ ಮಲಗಳಿಂದ ಕೂಡಿದ್ದ ಶಿಷ್ಯನ ಪೂರ್ವಶರೀರವು ನಾಶವಾಗಿ ಅವನಿಗೆ ಹೊಸದೊಂದು ಶರೀರ ಬರುತ್ತದೆ. ಹೀಗೆಂದರೆ ಪೂರ್ವದ ಸಂಕುಚಿತ ಗುಣಗಳು ಅಳಿದು ಅವನಲ್ಲಿ ವಿಶಾಲ ಗುಣಗಳು ಅಳವಡುತ್ತವೆ. ಈ ದೃಷ್ಠಿಯಲ್ಲಿ ಅವನು ಪುನರ್ಜಾತನು. ಈ ಪುನರ್ಜಾತನ ದೇಹವು ಗುರುವಿನಿಂದ ಬಂದದ್ದು; ಗುರುವಿಗೆ ಸಂಬಂಧಿಸಿದ ಮೇಲೆ ಆ ಗುರುವಿನ ಧ್ಯೇಯಕ್ಕನುಸಾರವಾಗಿ ಅವನು ಕೆಲವೇ ಜನಗಳಿಗೆ ಸಂಬಂಧಿಸಿದ ಒಬ್ಬ ಬಂಧುವಲ್ಲ; ಅಖಿಲ ಮಾನವಕೋಟಿಗೆ ಸಂಬಂಧಿಸಿದ ಒಬ್ಬ ‘ವಿಶ್ವಬಂಧು’ ಅಥವಾ ವಿಶ್ವಪೌರ.” - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.