•  
  •  
  •  
  •  
Index   ವಚನ - 497    Search  
 
ಭಕ್ತನ ಶರಣಸ್ಥಲ - ದೇವರು
ಮಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯಾ! ಲಜ್ಜೆಗೆಟ್ಟಾದರೂ ಲಿಂಗವನೊಲಿಸುವೆ; ನಾಣುಗೆಟ್ಟಾದರೂ ಲಿಂಗವನೊಲಿಸುವೆ! ಕೆಲದ ಸಂಸಾರಿಗಳು ನಗುತಿರ್ದೊಡಿರಲಿ; ಕೂಡಲಸಂಗಮದೇವಾ, ಶರಣಗತಿವೊಕ್ಕೆನಯ್ಯಾ!
Transliteration Maṇḍeya bōḷisikoṇḍu gaṇḍudottuvokkenayyā! Lajjegeṭṭādarū liṅgavanolisuve; nāṇugeṭṭādarū liṅgavanolisuve! Kelada sansārigaḷu nagutirdoḍirali; kūḍalasaṅgamadēvā, śaraṇagativokkenayyā!
Manuscript
English Translation 2 Shaving my head, I turn Into a serving-man! Even by losing all my shame, I draw Liṅga to me! Even by ceasing to be coy, I draw Liṅga to me! Let worldings round about Make me their laughing-stock; To Thee I do surrender me, O Kūḍala Saṅgama Lord! Translated by: L M A Menezes, S M Angadi
Hindi Translation सिर मुंड़ाकर पुरुष-सेवक बनती हूँ लाज छोडकर भी लिंगदेव को प्रसन्न करती हूँ व्रीडा छोडकर भी लिंगदेव को प्रसन्न करती हूँ पडोस के पारिवारिक लोग चाहे हँसे; कूडलसंगमदेव मैं तव शरण आयी हूँ ॥ Translated by: Banakara K Gowdappa
Telugu Translation తల బోడిరచుకొని మగదాసినై నినుగొల్తు సిగ్గు చెడినా శివా ! నిన్నే వలతు నాన చచ్చినా ప్రభూ! నిన్నే వలతు సరి సంసారులెల్ల నవ్విన నవ్విపోనీ సంగా నీ శరణుల గతినే బోదునయ్య: Translated by: Dr. Badala Ramaiah
Tamil Translation தலையை மழித்து, ஆண் தொண்டனாகச் சென்றேன் ஐயனே, நாணம் கெட்டாவது இலிங்கத்தை விரும்புவேன் ஐயனே நாணம் கெட்டாவது இலிங்கத்தை நயப்பேன் உலகியலில் உள்ள சிலர் நகைக்கட்டும் கூடல சங்கம தேவனே தஞ்சம் அடைந்துள்ளேன் ஐயனே. Translated by: Smt. Kalyani Venkataraman, Chennai
Marathi Translation डोक्याचे मुंडन करून सेवक झालो. लज्जाविहीन होऊन लिंगाला प्रसन्न करुन घेतो. बेशरम होऊन लिंगाला प्रसन्न करुन घेतो. शेजारचे संसारी हसले तर हसू दे. कूडलसंगमदेवा, तुम्हाला शरण मी आलो देवा. Translated by Shalini Sreeshaila Doddamani
ಶಬ್ದಾರ್ಥಗಳು ಕಲದ = ; ಗತಿ = ; ನಾಣು = ; ಮಂಡೆ = ; ಲಜ್ಜೆ = ;
ಕನ್ನಡ ವ್ಯಾಖ್ಯಾನ ಕೂಡಲ ಸಂಗಮಕ್ಕೆ ಬರುವ ಮುನ್ನ ಬಾಗೇವಾಡಿಯಲ್ಲಿದ್ದ ಹದಿನಾರು ವರ್ಷದ ಹರೆಯದ ಬಸವಣ್ಣನವರ ಒಂದು ಭಕ್ತಿವರ್ಣಚಿತ್ರವನ್ನು ಹರಿಹರನು ಕೊಡುತ್ತ-ಶಿವಪ್ರಸಾದವನ್ನು ಹೊತ್ತು ನಿತ್ತರಿಸುವರು ಎಂಬಂತಿದ್ದ ಅವರ ಬಟ್ಟದುರುಬನ್ನು ಮೊದಲು ವರ್ಣಿಸಿರುವನು. ತಲೆಯಲ್ಲಿ ಮೇಲ್ಮುಖವಾಗಿ ಕಟ್ಟಿದ ಆ ತುರುಬಿನಲ್ಲಿ ಮಲ್ಲಿಗೆ ಮೊಲ್ಲೆ ಜಾಜಿ ಕೇತಕಿ ಮುಂತಾದ ಹೂಗಳನ್ನು ಅಳವಡಿಸಲಾಗಿತ್ತು, ಅದರೊತ್ತಿಗೇ ರುದ್ರಾಕ್ಷಿಯ ಮಾಲೆ ತುರುಬನ್ನು ಸುತ್ತಿತ್ತು. ಆ ತುರುಬಿನಿಂದ ಕೆಳಗೆ ಮುಂಗುರುಳು ಕೆಲವು ಜಾರಿ ಹಣೆಯ ಮೇಲೆ ನಲಿದಾಡುತ್ತಿದ್ದವು ಎಂದು ಮುಂತಾಗಿ ವರ್ಣನೆ ಮಾಡಿರುವನು. ಬಸವಣ್ಣನವರು ಕೂಡಲಸಂಗಮಕ್ಕೆ ಬಂದಾಗ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುವುದಕ್ಕೆ ಸಂಕೇತವಾಗಿ ಆ ತಮ್ಮ ಕೇಶರಾಶಿಯನ್ನೇ ಕತ್ತರಿಸಿ ಸಂಗಮೇಶ್ವರನಿಗೆ ಮುಡಿಪಿಟ್ಟಿರಬೇಕು. ಬಸವಣ್ಣನವರ ಈ ಬೋಳು (ನೋಡಿ ವಚನ 358) ಕಲ್ಯಾಣದಲ್ಲಿ ಕೇಶಾಲಂಕಾರಪ್ರಿಯರಾದ ಕೆಲವು ಸಂಸಾರಿಗಳಿಗೆ ನಗೆಯನ್ನು ತಂದಿರಬಹುದು. ಆದರೇನು ತ್ಯಾಗದ ಮತ್ತು ಕೈಂಕರ್ಯದ ಚಿಹ್ನೆಯಾಗಿ ತಾವು ಕೈಗೊಂಡ ಆ ವೇಷಕ್ಕಾಗಿ ತಾವು ಗೇಲಿಗೊಳಗಾದರೂ ಸರಿಯೆ-ಅದೇ ರೂಪದಲ್ಲಿ ತಮ್ಮ ಭಂಡಾರಿತನವನ್ನೂ ನಡೆಸಲು ನಿಷ್ಕರ್ಷಿಸಿರಬೇಕು-ಬಸವಣ್ಣನವರು. ಸಮಕಾಲೀನ ಸಮಾಜದಲ್ಲಿ ತಮಗಾದ ಅವಮಾನವನ್ನೂ ಬಸವಣ್ಣನವರು ಅಭಿಮಾನದಿಂದಲೇ ಕಾವ್ಯಮಯವಾಗಿ ಹೇಳುತ್ತಿರುವರು. ಶಿವನಿಗೆ ಶರಣಾಗತರಾದ ಮೇಲೆ ವ್ಯಕ್ತಿಗತವಾದ ಮಾನ ಅವಮಾನ ವಿಭಾವಕ್ಕೆ ಆಸ್ಪದವೆಲ್ಲಿದೆ ಶಿವಶರಣರಿಗೆ ?!

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು