ಭಕುತಿರತಿಯ ವಿಕಳತೆಯ ಯುಕ್ತಿಯನೇನ ಬೆಸಗೊಂಬಿರಯ್ಯಾ?
ಕಾಮಿಗುಂಟೆ ಲಜ್ಜೆ-ನಾಚಿಕೆ? ಕಾಮಿಗುಂಟೆ ಮಾನಾಪಮಾನವು?
ಕೂಡಲಸಂಗನ ಶರಣರಿಗೊಲಿದ ಮರುಳನನೇನ ಬೆಸಗೊಂಬಿರಯ್ಯಾ?
Transliteration Bhakutiratiya vikaḷateya yuktiyanēna besagombirayyā?
Kāmiguṇṭe lajje-nācike? Kāmiguṇṭe mānapamānavu?
Kūḍalasaṅgana śaraṇarigolida maruḷananēna besagombirayyā?
Manuscript
English Translation 2 What do you want to know
Of the passion of piety
And of the pangs of absence, Lord?
Does one who loves e'er know
Or shame or bashfulness?
Does one who loves e'er know
Of honour or ignominy?
What do you want to know
Of the fool who dotes upon
Kūḍala Saṅga's Śaraṇās?
Translated by: L M A Menezes, S M Angadi
Hindi Translation भक्तिरति विकल युक्ति क्या पूछते हो?
कामी को लज्जा या व्रीडा है?
कामी को मानापमान है?
कूडलसंगमदेव के शरणों से अनुरक्त
बावले से क्या पूछते हो ?
Translated by: Banakara K Gowdappa
Telugu Translation భక్తి రతుడ; వికలాత్ముడ;
ఏమని ప్రశ్నింతురయ్యా నన్ను
కాముకున కున్నదే సిగ్గు లజ్జ ?
కాముకున కున్నదే మానావమానము?
సంగని శరణుల వలచి వెడగైన నన్ను
ఏమని ప్రశ్నింతురయ్యా?
Translated by: Dr. Badala Ramaiah
Tamil Translation பக்திப் பெருக்கின் பரவசத்தை விவரிக்கவியலுமோ?
காமுகனுக்கு நாணம், வெட்கம் உண்டோ?
காமுகனுக்கு மான அவமானம் உண்டோ?
கூடல சங்கனின் அடியார் விரும்பும்
மருளனை எவ்விதம் விவரிப்பீர் ஐயனே?
Translated by: Smt. Kalyani Venkataraman, Chennai
Marathi Translation
भक्ती-रतीच्या वियोगावस्थविषयी काय विचारता देवा ?
कामुकाला लाज लज्जा असते ? मान अपमान असतो ?
कूडलसंगाच्या शरणांना आपलेसे
करणाऱ्या वेड्यांना काय विचारणार ?
Translated by Shalini Sreeshaila Doddamani
ಶಬ್ದಾರ್ಥಗಳು ಕಾಮಿ = ; ಬೆಸಗೊಂಬು = ; ಮರುಳ = ; ಯುಕುತಿ = ; ರತಿ = ; ಲಜ್ಜೆ = ; ವಿಕಳತೆ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಶರಣರ ವಿರಹದಿಂದ ಕಾತರಿಸಿ ಆಕಾಶಭಾಷಿತಾದಿ ವಿಕಳಾವಸ್ಥೆಯಲ್ಲಿದ್ದಾಗ ಅವರನ್ನು ಪ್ರಜ್ಞೆಗೆ ಬರಿಸಿ-ಕೇಳಿಸಿಕೊಂಡರೆ ಜನರೇನೆಂದುಕೊಂಡಾರೆಂದು ಭಯದಿಂದ ಸಂತೈಸಿದ ಹಿತವರಿಗೆ ಆ ಬಸವಣ್ಣನವರು ಕೊಟ್ಟ ವಿಷಾದದ ಉತ್ತರ ಈ ವಚನರೂಪದಲ್ಲಿದೆ.
ಪ್ರೀತಿಸಿದವರು ಅಗಲಿದರೆ ಅದು ವಿರಹವೆನಿಸುತ್ತದೆ. ಆ ವಿರಹಾವಸ್ಥೆ ಪ್ರೇಮಿಗಳ ಜೀವನದಲ್ಲಿ ಅತ್ಯಂತ ಗಂಡಾಂತರದ ಘಟ್ಟ. ಆಗ ಅವರಿಗೆ ಪರಸ್ಪರ ಮಿಲನವಾಗದಿದ್ದರೆ ಚಿಂತಿಸುವರು ಪರಸ್ಪರ ಸ್ಮರಿಸುವರು, ಗುಣಗಾನಮಾಡುವರು, ಉದ್ವೇಗಗೊಂಡು ನಿಟ್ಟುಸಿರುಗರೆವರು ಈ ಘಟ್ಟದಲ್ಲಿಯೂ ಮಿಲನವಾಗದಿದ್ದರೆ ಏಕಾಂಗಿಯಾಗಿದ್ದರೂ ಪರಸ್ಪರ ಮುಖಾಮುಖಿಯಾದವರಂತೆ ಪ್ರಲಾಪಮಾಡುವರು-ಅಲ್ಲಿಂದಾಚೆಗೆ ಉನ್ಮಾದ-ಆ ಅವಸ್ಥೆಯಲ್ಲಿ ಪ್ರಸ್ತುತದ ಪ್ರಜ್ಞೆಯಿಲ್ಲದೆ-ಅಸ್ತವ್ಯಸ್ತಗೊಂಡ ಪೂರ್ವಾನುಭವಗಳನ್ನೇ ಕುರಿತು ಬಡಬಡಿಸುವರು. ಇದನ್ನೇ ವಿಕಾಳಾವಸ್ಥೆ(ಬುದ್ಧಿವೈಕಲ್ಯ)ವೆಂದು ಕರೆಯುವರು. ಇಲ್ಲಿಂದಾಚೆಗೆ ಮರಣವೆಂಬ ಪ್ರಪಾತಕ್ಕೆ ಉಳಿದಿರುವುದು ಮೌನ ಮತ್ತು ಮೂರ್ಛೆ ಎಂಬ ಎರಡೇ ಹೆಜ್ಜೆ.
ಈ ಎಲ್ಲ ವಿವರ ಕಾಮರತಿಯನ್ನು ಕುರಿತುದು. ಈ ವಚನದಲ್ಲಿ ಕುರಿತಿರುವ ಭಕ್ತಿರತಿಯ ವಿಕಾಳವಸ್ಥೆಯು ತೀವ್ರತೆಯಲ್ಲಿ ಕಾಮರತಿಯ ವಿಕಾಳಾವಸ್ಥೆಯನ್ನೇ ಹೋಲುವುದಾದರೂ ಆ ಭಕ್ತರತಿಯು ಕಾಮರತಿಯಂತೆ ಮಾನಸಿಕ ದೌರ್ಬಲ್ಯದಲ್ಲಿ ಮತ್ತು ಮರಣದಲ್ಲಿ ಪರಿಣಮಿಸುವುದಿಲ್ಲ. ಯಾಕೆಂದರೆ ಭಕ್ತಿರತಿಯು ಪಂಚಭೌತಿಕವನ್ನೆ ಅವಲಂಬಿಸದೆ ಮಾನಸಸ್ತರದಿಂದಾಚೆಗೂ ಕ್ರಮಿಸಿ ಶಿವದಲ್ಲೇ ಸಂಲಗ್ನವಾಗಿರುವುದು. ಭಕ್ತಿರತಿಯ ಅಭಿಲಾಷೆ-ಚಿಂತೆ-ಸ್ಮೃತಿ-ಗುಣಕಥನ-ಉದ್ವೇಗ-ಪ್ರಲಾಪ-ಉನ್ಮಾದ ಮುಂತಾದ ದಶಾವಸ್ಥೆಗಳನ್ನು ಸತ್ಸಂಗದ ಮತ್ತು ಅದರಿಂದ ಲಭಿಸುವ ಶಿವಾನಂದದ ವಿಸ್ತೃತ ಪರಿಧಿಗಳಲ್ಲೇ ಗುರುತಿಸಿಕೊಳ್ಳಬೇಕಾಗುವುದು. ಅಭಿಲಾಷೆಯು ದೀಕ್ಷೆಯಾಗಿ, ಚಿಂತೆಯು ಶಿವಧ್ಯಾನವಾಗಿ, ಸ್ಮೃತಿಯು ಪೂರ್ವ ಶರಣರ ಸಚ್ಚಾರಿತ್ರದ ಸ್ಮರಣೆಯಾಗಿ, ಗುಣಕಥನವು ಸ್ತೋತ್ರವಾಗಿ, ಉದ್ವೇಗವು ಸಮರ್ಪಿತ ಜೀವನವಾಗಿ, ಪ್ರಲಾಪವು ಗೀತವಚನಗಾಯನವಾಗಿ, ಉನ್ಮಾದವು ಲಿಂಗವಿಕಳಾವಸ್ಥೆಯಾಗುವುದು. ಈ ಭಕ್ತಿರತಿಯಲ್ಲಿ ವ್ಯಾಧಿ(ಮೌನ)ಯಿಲ್ಲ. ಜಡತೆ(ಮೂರ್ಛೆ)ಯಿಲ್ಲ-ಮೃತ್ಯುರ್ಧಾವತಿ ಪಂಚಮ ಇತಿ. ಇದೆಲ್ಲವೂ ಕ್ರಾಂತದರ್ಶನ ದೀಪ್ತಿಯಲ್ಲಿ ಕಂಗೊಳಿಸುವುದು.
ಹುಡುಗಿಯರಿಲ್ಲದಿದ್ದರೆ ದೆಹಲಿಯ ಸುಲ್ತಾನರಂತೆ-ಬಸವಣ್ಣನವರು ಶರಣರ ಸಹವಾಸವಿಲ್ಲದಿದ್ದರೆ ಕಂಗೆಡುತ್ತಿದ್ದರು. ಅವರ ಸಾಹಚರ್ಯದಲ್ಲಿ ಅಷ್ಟೊಂದು ಸೇವಾಕಾರ್ಯಗಳನ್ನು ಹಮ್ಮಿಕೊಂಡಿರುತ್ತಿದ್ದರು ಬಸವಣ್ಣನವರು. ಅವು ಶರಣರ ದಿಗ್ದರ್ಶನದಲ್ಲಿ ಕ್ಲುಪ್ತವಾಗಿ ನೆರವೇರದಿದ್ದರೆ ಬಸವಣ್ಣನವರು ತಿನ್ನುತ್ತಿದ್ದ ನೋವು ಸಂತರ ಚರಿತ್ರೆಯಲ್ಲಿ ತೀರ ವಿಶಿಷ್ಟವಾದುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು