•  
  •  
  •  
  •  
Index   ವಚನ - 527    Search  
 
ಮಾಹೇಶ್ವರನ ಜ್ಞಾನಿಸ್ಥಲ - ದೇವರು
ಸ್ವಾಮಿ ನೀನು, ಶಾಶ್ವತ ನೀನು: ಎತ್ತಿದೆಬಿರುದ ಜಗವೆಲ್ಲ ಅರಿಯಲು. ʼಮಹಾದೇವ, ಮಹಾದೇವ:ʼ ಇಲ್ಲಿಂದ ಮುಂದೆ ಶಬ್ದವಿಲ್ಲ! ಪಶುಪತಿ ಜಗಕ್ಕೆ ಏಕೋದೇವ, ಸ್ವರ್ಗ ಮರ್ತ್ಯ ಪಾತಾಳದೊಳಗೆ ಒಬ್ಬನೇ ದೇವ ಕೂಡಲಸಂಗಮದೇವ.
Transliteration 'Svāmi nīnu, śāśvata nīnu:' Ettidebiruda jagavella ariyalu. ʼmahādēva, mahādēva:ʼ illinda munde śabdavilla! Paśupati jagakke ēkōdēva, svarga martya pātāḷadoḷage obbanē dēva kūḍalasaṅgamadēva.
Manuscript
Music Courtesy: Isha Nada Aradhana2022 - #Sadhguru
English Translation 2 Thou art the Lord, the eternal one: I sing hosannas for the world to know "Mahādēva, Mahādēva": Beyond this there is no word! As the world's Herdsman but one God: In heaven, on earth, in hell, There is but one God, Lord Kūḍala Saṅgama! Translated by: L M A Menezes, S M Angadi
Hindi Translation प्रभु तुम हो, शाश्वत तुम हो, सारे जग के ज्ञानार्थ तव स्तुति करता हूँ महादेव, महादेव, इसके परे कोई शब्द नहीं पशुपति जग का एक मात्र देव है, स्वर्ग, मर्त्य, पाताल में एक ही देव हैं कूडलसंगमदेव ॥ Translated by: Banakara K Gowdappa
Telugu Translation స్వామివి నీవు; శాశ్వతుడ వీవు జగమెల్ల తెలియ నెత్తిన బిరుదు ‘‘మహాదేవ; మహాదేవ’’ ఇటపై యిక శబ్దమే లేదు! పశుపతి జగతికొకడే దేవుడు స్వర్గమర్త్య పాతాళములకొకడే దేవుడు మా కూడల సంగమ దేవుడు Translated by: Dr. Badala Ramaiah
Tamil Translation மாஹேசுவரத்தலம் மாஹேசுவரனின் ஞானித்தலம் நீ சுவாமி, நிலைபெற்றவன் நீ உலகெலாம் அறிய புகழொடு விளங்குகிறாய் மகாதேவனே, மகாதேவனே இங்கிருந்து மேற்கொண்டு ஒலி இல்லை பசுபதி உலகிற்கு ஒரு இறைவன் சுவர்கம், பூவுலகம், பாதாள உலகங்களுக்கு ஒருவனே, இறைவன் கூடல சங்கமதேவன் Translated by: Smt. Kalyani Venkataraman, Chennai
Marathi Translation स्वामी तुम्ही, शाश्वत तुम्ही आहात, घोषित केले सर्व जगामध्ये, जगाने आपल्याला जाणले महादेव, महादेव, याच्यापुढे शब्द नाही. जीवेश्वर एकच देव जगात स्वर्ग, मर्त्य, पाताळामध्येही एक देव आहे कूडलसंगमदेव. Translated by Shalini Sreeshaila Doddamani
ಶಬ್ದಾರ್ಥಗಳು ಜಗ = ; ಪಶುಪತಿ = ; ಪಾತಾಳ = ; ಬಿರಿದ = ; ಮತ್ಯು = ;
ಕನ್ನಡ ವ್ಯಾಖ್ಯಾನ 'ಮರೆಯಲಾಗದು ಹರಿಯ!' ವಚನಸಾಹಿತ್ಯದ ಗೋಳಗುಮ್ಮಟ ವೆನಿಸಿದ್ದ ಫ. ಗು. ಹಳಕಟ್ಟಿಯವರ ಪ್ರಯತ್ನದ ಫಲವಾಗಿ ಬಸವಾದಿ ಶಿವಶರಣರ ವಚನಗಳು ಓಲೆಯ ಕಟ್ಟುಗಳಿಂದ ಗರಿಗೆದರಿ ಬೆಳಕಿಗೆ ಬಂದವು. ವಚನಗಳಿಗೆ ರಾಗ ತಾಳ ಹಾಕಿ ಸುಶ್ರಾವ್ಯವಾಗಿ ಹಾಡುವ ಮತ್ತು ಮನದಣಿಯೆ ಕೇಳುವ ದಿನಗಳು ಆರಂಭವಾದವು. ಸಭೆ ಸಮಾರಂಭಗಳ ಪ್ರಾರಂಭದಲ್ಲಿ ವಚನಗೀತೆಗಳನ್ನು ಹಾಡಿಸುವ ಹೊಸ ಸಂಪ್ರದಾಯ ಹುಟ್ಟಿಕೊಂಡಿತು. ಈಗೀಗ ವಚನಸಂಗೀತದ ಕಂಪು ಎಲ್ಲೆಡೆ ಹರಡಿದೆ. ಮೈಸೂರು, ಬೆಂಗಳೂರು, ಭದ್ರಾವತಿ, ಧಾರವಾಡ ಮೊದಲಾದ ಆಕಾಶವಾಣಿಯ ವಿವಿಧ ಕೇಂದ್ರಗಳಿಂದ ನಿತ್ಯವೂ ಬೆಳಗಿನ ಸುಪ್ರಭಾತದಲ್ಲಿ ಶರಣರ ವಚನಗಳು ಕೇಳಿಬಂದು ಶ್ರೋತೃಗಳ ಹೃನ್ಮನಗಳು ಅರಳುವಂತಾಗಿದೆ. ಬಸವಾದಿ ಶಿವಶರಣರ ವಚನಗಳನ್ನು ಕುರಿತು ಈ ವರೆಗೆ ಸಾಕಷ್ಟು ಅಧ್ಯಯನ, ಚರ್ಚೆ, ವಿಚಾರ ಸಂಕಿರಣಗಳು ಜರುಗಿವೆ. ಅನೇಕ ಪುಸ್ತಕಗಳು ಹೊರಬಂದಿವೆ. ವಿದ್ವಾಂಸರು, ಭಾಷಣಕಾರರು, ಮಠಾಧೀಶರು ತಮ್ಮ ಭಾಷಣಗಳಲ್ಲಿ ಶರಣರ ವಚನಗಳನ್ನು ಧಾರಾಳವಾಗಿ ಬಳಸುತ್ತಾರಾದರೂ ಇಡೀ ವಚನ ಹೇಳುವುದು ಕಡಿಮೆ. ವಚನಗಳ ಒಂದೊಂದು ಸಾಲನ್ನು ತಮ್ಮ ಮಾತಿನ ಆಶಯಕ್ಕನುಗುಣವಾಗಿ ಬಳಸುತ್ತಾರೆ. ಕೆಲವು ಪ್ರಸಿದ್ದ ವಚನಗಳ ಸಾಲುಗಳಂತೂ ನಾಣ್ಯಗಳಂತೆ ಎಲ್ಲರೂ ಬಳಸಿ ಬಳಸಿ ಕ್ಲೀಷೆಯಾಗಿಬಿಟ್ಟಿವೆ. 'ಕಾಯಕವೇ ಕೈಲಾಸ', 'ದೇವನೊಬ್ಬ ನಾಮ ಹಲವು', ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ' ಎಂಬಿವೇ ವಚನಗಳ ನುಡಿಗಟ್ಟುಗಳು ಚರ್ವಿತ ಚರ್ವಣ ಆಗಿವೆಯೇ ಹೊರತು ಸಮಗ್ರ ವಚನಗಳ ತಲಸ್ಪರ್ಶಿ ಅಧ್ಯಯನ ಇನ್ನೂ ಆಗಿಲ್ಲ. ಆ ನಿಟ್ಟಿನಲ್ಲಿ ವಿದ್ವಾಂಸರ ಚಿಂತನೆ ಹರಿಯಬೇಕಾದದ್ದು ಅತ್ಯಂತ ತುರ್ತಾಗಿದೆ. ಬಸವಣ್ಣನವರ ಷಟ್ಸ್ಥಲ ವಚನಗಳಲ್ಲಿ ಮಾಹೇಶ್ವರನ ಜ್ಞಾನಿಸ್ಥಲದ ಒಂದು ವಚನ ಹೀಗಿದೆ: ಮರೆಯಲಾಗದು ಹರಿಯ; ಮರೆಯಲಾಗದು ಬ್ರಹ್ಮನ ಮರೆಯಲಾಗದು ತೆತ್ತೀಸ ದೇವರ್ಕಳ! ನಮ್ಮ ಕೂಡಲ ಸಂಗಮದೇವರ ಮರೆಯಲಹುದು. ಈ ವಚನದ ಶಬ್ದಾರ್ಥವನ್ನು ಮೇಲ್ನೋಟಕ್ಕೆ ಗ್ರಹಿಸಿ ಹೇಳುವುದಾದರೆ “ಹರಿಯನ್ನು ಮರೆಯಲಾಗದು, ಬ್ರಹ್ಮನನ್ನು ಮರೆಯಲಾಗದು, ಮೂವತ್ತು ಮೂರು ಕೋಟಿ ದೇವತೆಗಳನ್ನೂ ಮರೆಯಲಾಗದು. ಆದರೆ ಕೂಡಲಸಂಗಮದೇವರನ್ನು ಮಾತ್ರ ಮರೆಯಬಹುದು” ಎಂಬರ್ಥವನ್ನು ನೀಡುತ್ತದೆ. ಇದೇ ಅರ್ಥವನ್ನು ಗ್ರಹಿಸಿ ಪ್ರೊಫೆಸರ್ ಮೆನೆಜೆಸ್ ಮತ್ತು ಅಂಗಡಿಯವರು ನಮ್ಮ ಮಠದಿಂದ ಮೊಟ್ಟಮೊದಲಿಗೆ ಪ್ರಕಟವಾದ ಬಸವಣ್ಣನವರ ಸಮಗ್ರ ವಚನಗಳ ಇಂಗ್ಲೀಷ್ ಅನುವಾದದಲ್ಲಿ ಹೀಗೆ ಭಾಷಾಂತರಿಸಿದ್ದಾರೆ: Hari you can't forget, Brahma you can't forget, Nor three and thirty crores Of deities Only you can afford to forget Our Lord Kudala Sangama! (Vachanas of Basavanna) ಇದೇ ರೀತಿ ನಮ್ಮ ಮಠದಿಂದ ಪ್ರಕಟವಾದ ಬಾಡಾಲು ರಾಮಯ್ಯನವರ 'ಬಸವೇಶ್ವರ ವಚನಾಲು ಸಮಗ್ರ ಸಮೀಕ್ಷೆ ಗ್ರಂಥದಲ್ಲಿಯೂ ಸಹ ಈ ವಚನವನ್ನು ತೆಲುಗಿನಲ್ಲಿ ಹೀಗೆ ಅನುವಾದಿಸಲಾಗಿದೆ: ಮರುವರಾದು ಹರಿನಿ ಮರುವರಾದು ಬ್ರಹ್ಮನು ಮರುವರಾದು ತ್ರಿಂಶಕ್ಕೋಟಿ ದೇವತಲ ಕಾನಿ ಮಾ ಮಹಾದೇವುನಿ ಮರುವವಚುನಯ್ಯಾ !! (ವಚನ ಸಂಖ್ಯೆ: ೫೨ ಪು:೧೩೮) ಕೂಡಲ ಸಂಗಮದೇವನನ್ನು 'ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, ನೀನಲ್ಲದೆ ಮತ್ತಾರೂ ಇಲ್ಲವಯ್ಯಾ' ಎಂದ ಬಸವಣ್ಣನವರು ಹೀಗೆ 'ಹರಿ ಬ್ರಹ್ಮಾದಿಗಳನ್ನು ಮರೆಯಲಾಗದು, ಮುವತ್ತು ಮೂರು ಕೋಟಿ ದೇವತೆಗಳನ್ನೂ ಮರೆಯಕೂಡದು. ಕೂಡಲ ಸಂಗಮ ದೇವರನ್ನು ಮಾತ್ರ ಮರೆಯಬಹುದು' ಎಂದು ಹೇಳಿರಲು ಸಾಧ್ಯವೇ? ಇಡೀ ವಿಶ್ವವನ್ನು ವ್ಯಾಪಿಸಿರುವ 'ಅಗಮ್ಯ ಅಗೋಚರ ಅಪ್ರತಿಮ ನಾದ ಪರಮಾತ್ಮನನ್ನು ಬಸವಣ್ಣನವರು ಕೂಡಲ ಸಂಗಮದೇವನೆಂದು ಸಂಬೋಧಿಸಿ ಅದೇ ಅಂಕಿತದಲ್ಲಿ ಅನೇಕ ವಚನಗಳನ್ನು ರಚಿಸಿದ್ದಾರೆ. ಸ್ವಾಮಿ ನೀನು, ಶಾಶ್ವತ ನೀನು, ಎತ್ತಿದೆಬಿರಿದ ಜಗವೆಲ್ಲ ಅರಿಯಲು. ಮಹಾದೇವ, ಮಹಾದೇವ, ಇಲ್ಲಿಂದ ಮೇಲೆ ಶಬ್ದವಿಲ್ಲ. ಪಶುಪತಿ ಜಗಕ್ಕೇಕೋದೇವ, ಸ್ವರ್ಗ ಮರ್ತ್ಯ ಪಾತಾಳದೊಳಗೆ ಒಬ್ಬನೇ ದೇವ ಕೂಡಲಸಂಗಮದೇವ. ಇದು ಬಸವಣ್ಣನವರು ನಂಬಿದ ಕೂಡಲ ಸಂಗನ ನಿಜಸ್ವರೂಪ. ಹಲವು ದೈವಗಳನ್ನು ಪೂಜಿಸುವ ಭಕ್ತರ ಭಕ್ತಿಯ ಟೊಳ್ಳುತನವನ್ನು ಅವರು ವಿಡಂಬಿಸುತ್ತಾರೆ: ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ; ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ! ಕೂಡಲ ಸಂಗಮದೇವನಲ್ಲದೆ ಇಲ್ಲವೆಂದಿತ್ತು ವೇದ! ಭಕ್ತ ಮತ್ತು ಭಗವಂತನ ಸಂಬಂಧ ಗಂಡ-ಹೆಂಡಿರ ಸಂಬಂಧದಂತೆ ಪವಿತ್ರವಾದುದು. ತಾನು ನಂಬಿದ ದೈವವನ್ನು ಮರೆತು ಅನ್ಯ ದೈವಗಳನ್ನು ಹುಡುಕುತ್ತಾ ಹೋಗುವವರನ್ನು ಕಂಡು ಬಸವಣ್ಣನವರು 'ಬೇಡ, ಬೇಡ ಅನ್ಯದೈವವೆಂಬುದು ಹಾದರ ಕಾಣಿರೋ!' ಎಂದು ಎಚ್ಚರಿಸುತ್ತಾರೆ. ಇಡೀ ಬ್ರಹ್ಮಾಂಡದ ರಕ್ಷಕ ಕೂಡಲ ಸಂಗಮನಲ್ಲದೆ ಬೇರೆ ಯಾರೂ ಅಲ್ಲ. ಹೀಗಿರುವಾಗ ತಾನು ನಂಬಿದ, ನಚ್ಚಿದ, ಸಲೆ ಮಾರುಹೋದ' ಕೂಡಲ ಸಂಗಮದೇವರನ್ನು ಮರೆಯಬಹುದು ಎಂದು ಬಸವಣ್ಣನವರು ಹೇಳಿರಲು ಎಂದಿಗೂ ಶಕ್ಯವಿಲ್ಲ. ಆದಕಾರಣ ಅವರ ಈ ವಚನದಲ್ಲಿ ಬರುವ ‘ಮರೆಯಲಹುದು' ಎಂಬ ಶಬ್ದ ದೋಷಪೂರ್ಣವಾಗಿದೆಯೆಂಬುದರಲ್ಲಿ ಅನುಮಾನವಿಲ್ಲ. ಇದು ಇಂದು ಪುಸ್ತಕ ಪ್ರಕಟಣೆಯಲ್ಲಿ ಮುದ್ರಣದೋಷಗಳು ಇರುವಂತೆ ಹಿಂದಿನ ಕಾಲದಲ್ಲಿ ಲಿಪಿಕಾರರಿಂದ ಉಂಟಾದ ಪ್ರಮಾದ. ಬಸವಣ್ಣನವರು ಇಲ್ಲಿ ಬಳಸಿರುವ ಶಬ್ದ 'ಮರೆ' (to forget) ಅಲ್ಲ ‘ಮೊರೆ' (to seek, to take refuge). 'ಮೊರೆ' ಎಂಬ ಪದವು ನಾಮಪದವಾಗಿ, ಕ್ರಿಯಾಪದವಾಗಿ ಬಳಕೆಯಲ್ಲಿರುವುದನ್ನು ಗಮನಿಸಬಹುದು. ಮೊರೆಯಿಡು, ಮೊರೆಯಿಟ್ಟರು ಎಂಬರ್ಥದ ಪದಪ್ರಯೋಗಗಳು ಬಸವಣ್ಣನವರ ವಚನಗಳಲ್ಲಿಯೇ ಸಿಗುತ್ತವೆ. ವಿಷವಟ್ಟಿ ಸುಡುವಲ್ಲಿ ವೀರಭದ್ರ ಕೋಲುವಲ್ಲಿ ಕೂಡಲ ಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರೂ ‘ಮೊರೆ' ಅಂದರೆ ರಕ್ಷಣೆಯನ್ನು ಬೇಡು ಎಂದರ್ಥ. ಈ ಹಿನ್ನೆಲೆಯಲ್ಲಿ ಮೇಲ್ಕಂಡ ವಚನದಲ್ಲಿ 'ಮರೆ' ಎಂಬುದನ್ನು 'ಮೊರೆ' ಎಂದು ಪಾಠ ಪರಿಷ್ಕರಣೆ ಮಾಡಿ ಈ ಕೆಳಕಂಡಂತೆ ಓದಿಕೊಂಡರೆ ಅರ್ಥಪೂರ್ಣವಾಗುತ್ತದೆ. ಮೊರೆಯಲಾಗದು ಹರಿಯ; ಮೊರೆಯಲಾಗದು ಬ್ರಹ್ಮನ ಮೊರೆಯಲಾಗದು ತೆತ್ತೀಸ ದೇವರ್ಕಳ! ನಮ್ಮ ಕೂಡಲ ಸಂಗಮದೇವರ ಮೊರೆಯಲಹುದು. ಭಕ್ತನು ರಕ್ಷಣೆಗಾಗಿ ಅನೇಕ ದೇವರನ್ನು ನಂಬಿ ಪ್ರಯೋಜನವಿಲ್ಲ; ಮೂವತ್ತು ಮೂರು ಕೋಟಿ ದೇವತೆಗಳೂ ಸಹ ಅವನ ರಕ್ಷಣೆಗೆ ಬರಲಾರರು. ಅವನು ತನ್ನ ರಕ್ಷಣೆಗಾಗಿ ಬೇಡಬೇಕಾದ್ದು ಏಕಮೇವಾದ್ವಿತೀಯನಾದ ಒಬ್ಬ ದೇವರನ್ನು ಮಾತ್ರ ಎಂಬುದು ಬಸವಣ್ಣನವರ ಈ ವಚನದ ಆಶಯ. ಇಲ್ಲಿ ಮತ್ತೊಂದು ಮಾತು. ಮೇಲಿನ ವಚನಕ್ಕೆ ಮತೀಯ ನೆಲೆಯಲ್ಲಿ ಅಪಾರ್ಥ ಕಲ್ಪಿಸುವ ಅಪಾಯವಿದೆ. ಬಸವಣ್ಣನವರು ಈ ವಚನದಲ್ಲಿ ಬೇರೆ ದೇವರುಗಳನ್ನು ಕುರಿತು ಅತ್ಯಂತ ಕಠೋರವಾಗಿ ನುಡಿದಿದ್ದಾರೆಂದು ಮೇಲುನೋಟಕ್ಕೆ ಅನ್ನಿಸಬಹುದು. ಆದರೆ ಅವರು ಇಲ್ಲಿ ಹೇಳಬಯಸಿರುವುದು ಏಕದೇವತೋಪಾಸನೆಯ ಅಗತ್ಯವನ್ನು. ಯಾವ ದೇವರನ್ನು 'ಶಿವ' ಎಂದು ಕರೆಯುತ್ತಾರೋ, 'ಹರಿ' ಎಂದು ಕರೆಯುತ್ತಾರೋ, 'ವಿಷ್ಣು'ವೆಂದು ಕರೆಯುತ್ತಾರೋ ಆ ಏಕಮೇವಾದ್ವಿತೀಯ ದೇವರೇ ಬಸವಣ್ಣನವರ ಕೂಡಲ ಸಂಗಮದೇವಾ. 'ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ... ನಿಗಮಗೋಚರ ಪುರಂದರವಿಠಲಗಲ್ಲದೆ ಮಿಗಿಲಾದ ದೈವಗಳಿಗೀ ಭಾಗ್ಯ ಉಂಟೆ?' ಎಂದು ಪುರಂದರದಾಸರು ಹಾಡಿ ಕೊಂಡಾಡಿದ್ದು ಈ ಅರ್ಥದಲ್ಲಿಯೇ. ಇಷ್ಟು ಹಿನ್ನೆಲೆಯಿಟ್ಟುಕೊಂಡು ಈ ವಚನದ ಪಾಠವನ್ನು ಗ್ರಹಿಸಿದರೆ ಅರ್ಥದ ತೊಡಕು ಇರಲಾರದು. - ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ ಬಿಸಿಲು ಬೆಳದಿಂಗಳು - 183 ವಿಜಯ ಕರ್ನಾಟಕ (8.9.2011)