ಮಾಹೇಶ್ವರನ ಜ್ಞಾನಿಸ್ಥಲ - ಭಕ್ತಿ
ವಿಪ್ರರ ಕರೆದು 'ನೃಪರುಗಳು ಇಪ್ಪರೆ ತಮ್ಮ ಶಿಶುವಿನೊಡನೆಂ'ದು
ಬೆಸಗೊಂಡರೆ,
"ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ
ತಾವು ಉಣ್ಣದವರುಂಟೆ?"
ಎಂದು ಕಣ್ಣು ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು!
ಅಂತೆಂದ ಮಾತ ಶಿಶು ಕೇಳಿ,
ಕೆಟ್ಟೋಡಿ ಬಂದು ಲಿಂಗದ ಹೊಟ್ಟೆಯ ಹೋಗಲು,
ಅಟ್ಟಿ ಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು,
ಮಂಡೆಯೊಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು,
ಘಟಸರ್ಪನ ತುಡುಕಿ ನಾಗನಾಥನಾಗಿ,
ಇಪ್ಪತ್ತೇಳು ಬಸತಿಯನೊಡೆಯನೆ?
ಆಗಳಂತೆ, ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು.
ಮುನ್ನೊಬ್ಬ ಕೆಡಿಸಿಹೆನೆಂದು ಬಂದು ಒಂದು ತುತ್ತನಿಟ್ಟು
ಮರಳಿ ಕೈಯಿಡ ಹೋದರೆ ತುತ್ತು ಹುಳುಗುಪ್ಪೆಯಾಗದೆ?
ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು!
ಕೂಡಲಸಂಗಮದೇವ ಸಾಕ್ಷಿಯಾಗಿ
ಮಕರಭೋನವಾಗನೆ ವಿನಾಶಕ್ತಿರಾಯನು?
Transliteration Viprara karedu'nr̥paru ippare tam'ma śiśuvinoḍaneṁ'du
besagoṇḍare,
“ipparu, ipparu, tāvu bittida phalagaḷu
tāvu uṇṇadavaruṇṭe?"
Endu kaṇṇu kāṇade hēḷidaru, aṇṇagaḷu, karmada baṭṭeyanu!
Antenda māta śiśu kēḷi,
keṭṭōḍi bandu liṅgada hoṭṭeya hōgalu,
aṭṭibandu khaṇḍeyava kaḷedukoṇḍu maṇḍeyanoḍeyalu,
maṇḍe oḍedu bhūmaṇḍalavariye nālku puravāgalu,
ghaṭasarpana tuḍuke nāganāthanāgi,
iṣṭēḷu basatiyanoḍeyane?
Hāge, enna māḍida karma nim'ma kaiyalu keḍisuvaru.
Munnobba keḍisihenendu bandu ondu tuttaniṭṭu
Maraḷi kaiyiḍa hōdare tuttu huḷuguppeyāgade?
Śivadharmava keḍisidavanu adharmakkiḷivanu!
Kūḍalasaṅgamadēva sākṣiyāgi
makarabhōnavāgane vināśaktirāyanu?
Manuscript
English Translation 2 The kings, inviting priests, questioned thus:
'Does one sleep with one's child?'-
They say, 'They do, they do:
Is there some one who does not eat
His own sown fruit?'
And so, with eyes unseeing, they point out,
These gentlemen, the path to sin!
The child, hearing the word thus said,
Came running like mad, and went
Into Liṅga's belly.
The king ran after her,
Drew his sword,
Broke the head of the Liṅga.
When the head broke, so the world knows,
It turned into four towns.
A monstrous serpent was troubled,
And so it became
The serpent-Lord; and did't he break
The seven-and-twenty Jaina shrines?
Similarly, they come to destroy my Karma.
Another: he kept
One morsel, and when he put
His hand again, did not
That morsel turn to a heap of worms?
Those who destroy
'Śiva's religion, must go down
As irreligious men:
Lord Kūḍala Saṅgama bear witness-did not
Vīṇāśaktirāya, become
A meal for a crocodile?
Translated by: L M A Menezes, S M Angadi
Hindi Translation विप्रों को बुलाकर पूछा गया;
अपनी कन्या, पुत्रि के साथ सोनेवाले राजा हैं?
हाँ, हाँ, अपने बोये फल खानेवाले नहीं हो सकते हैं?
यों उन बडोंने आँख मूँदकर कर्म बताया ।
यह बात सुन कन्या भयभीत हो लिंगोदर में छिप गयी।
राजा ने पीछा किया, कटार निकाल लिंग मस्तक फोडने पर
सारा जग जानता है, चार नगर निर्मित हुए ।
घटसर्प को सत्वर ग्रहण कर नागनाथ ने
सप्तविंशति जैन मंदिरों का नाश नहीं किया ?
ऐसे ही मेरे कृत कर्मोंको एक ने तव हाथ से नष्ट कराया ।
नष्ट करने आकर पूर्व में मँुह में कौर रखा,
दुबारा हाथ डालने पर कौर कीटाणु – मय नहीं बना?
शिवधर्म ध्वंसक अधर्मि बनेगा ।
विनाशक्तिराय मकर का भोजन नहीं बना?
कूडलसंगमदेव साक्षी है ॥
Translated by: Banakara K Gowdappa
Telugu Translation నృపుని విచారము సిరి సింగారము స్థిరము కాదురా మానవా!
చెడి కల్యాణము పాడై పోయె చూడరా!
ఒక్క జంగమాభిమానమున చాళుక్య నృపతి పాలన తెగె
సంగమదేవా కూడుకొనెనయ్యా నీ కవళమునకు.
Translated by: Dr. Badala Ramaiah
Tamil Translation வேதியரை அழைத்து, “அரசர் தம் குழந்தையோடு
இருப்பரோ” என வினவ, “இருப்பர், இருப்பர்
தாம் விதைத்த பலன்களை உண்ணாதவர் உண்டோ?
என்று பார்க்காமல் கர்ம வழியைக் கூறினர்
இதனைக் குழந்தை கேட்டு விரைந்தோடி வந்து
இலிங்கத்தின் வயிற்றில் செல்ல, பின் தொடர்ந்து
வாளைப் பிடித்துக் கொண்டு, மண்டையைத் தாக்க
மண்டை உடைந்து, பூவுலகில் நான்கு பகுதிகளாயின
குடப்பாப்பின் படம் நாகநாதனாகி
இருபத்து ஏழு ஜைனக் கோயில்களின் உடையனாகினன்
அதைப் போன்றே என்னைத் தோற்றிய வினை உம்மால் கெடும்
முன்பு ஒருவன் கெடுத்தனன் என வந்து ஒரு
கவளம் அளிக்க, மீண்டும் கையை ஏந்தின்
கவளம் புழுக்குவியலாகாதோ?
சிவ தர்மத்தைக் கெடுத்தவன் அதர்மவழியில் ஏகுவான்
கூடல சங்கமதேவன் சாட்சியாக
முதலைக்கு இரையாக மாட்டானோ அவன்.
Translated by: Smt. Kalyani Venkataraman, Chennai
Marathi Translation
राजसभेत विप्राला विचारले. `राजा आपल्या संतानसंभोग करु शकतो?
`होय, होय आपण पेरलेले आपण खात नाही का?` असा
अंध विप्राने पापाचा मार्ग सांगितला.
हे शब्द बालकन्येने ऐकून पळत लिंगाला शरण आली.
त्याचा पाठलाग करीत सैनिकाने शिरावर वार केला.
शिर फुटून त्याची चार नगरे निर्माण झाली.
मडक्यात दडलेला घटसर्प नागनाथ झाला.
सत्तावीस बस्ती पाडल्या गेल्या.
त्याप्रमाणे माझे कर्म तुमच्या हातातून नष्ट झाले.
पुढे कोणी शिवधर्म नष्ट करु लागला तर पुन्हा ?
त्या हातातील घासात किडे पडणार नाही का?
शिवधर्म नष्टीणारा अधर्मी होईल.
याला कूडलसंगमदेव साक्षी.
मगरीचे भोजन विनासक्तीराय झाला.
Translated by Shalini Sreeshaila Doddamani
ಶಬ್ದಾರ್ಥಗಳು ಇಪ್ಪರು = ; ಖಂಡೆ = ; ನೃಪ = ರಾಜ; ಪುರ = ; ಬಟ್ಟೆ = ; ಬೆಸಗೊಂಡ = ; ಭೂಮಂಡಲ = ; ಮಂಡೆ = ; ವಿಪ್ರ = ಬ್ರಾಹ್ಮಣ; ಹೊಗಲು = ;
ಕನ್ನಡ ವ್ಯಾಖ್ಯಾನ ವಚನದ “ನಾಲ್ಕು ಪುರವಾಗಲು[=ದೆ?] ಎಂಬ ವರೆಗಿನ ಭಾಗವು ಚಂದ್ರಗುಪ್ತ-ಮಲ್ಲಿಕಾದೇವಿಯರ, ಅಲ್ಲಿಂದ ಮುಂದೆ “ಬಸದಿಯನೊಡೆಯನೇ” ಎಂಬವರೆಗಿನ ಭಾಗವು ಜೇಡರ ದಾಸಿಮಯ್ಯನನ್ನು ಕೆಣಕಿದ ಜೈನರ, ಉಳಿದ ಭಾಗವು ವಿನಾಶಕ್ತಿರಾಯನೆಂಬ ರಾಜನ ಕಥಾಸಂದರ್ಭಗಳನ್ನು ಕುರಿತಿವೆ.
ಈ ವಚನವನ್ನು ತಿಳಿಯಲು ಸಹಾಯಕವಾಗಿ-ಪ್ರಾಚೀನ ಮೂಲಗಳಲ್ಲಿ ಉಪಲಬ್ಧವಿರುವ ಈ ಮೂರು ಕಥಾಸಂದರ್ಭಗಳನ್ನು ಸರಳಗನ್ನಡದಲ್ಲಿ ಈ ಮುಂದಿನಂತೆ ಸಂಗ್ರಹಿಸಬಹುದು :
1. ಶ್ರೀಶೈಲದಲ್ಲಿರುವ ಪಾಲಂಕಿ (ಪಾಲ್ಕುರಿಕೆ R) ಎಂಬ ಕ್ಷೇತ್ರದಲ್ಲಿ ಭದ್ರದತ್ತನೆಂಬ ರಾಜನು ರಾಜ್ಯವಾಳುತ್ತಿರಲು ಚಂದ್ರಗುಪ್ತರಾಯನು ಪಾತಳಗಂಗೆಯ ತೀರದಲ್ಲಿ ಲಿಂಗದ ನದೀಪುರವೆಂಬ ದುರ್ಗದರಸನಾಗಿ ರಾಜ್ಯವನ್ನು ಆಳುತ್ತಿರುವಾಗ-ಆತನ ಮಗಳು ಮಲ್ಲಿಕಾದೇವಿಯು ಸುಂದರಿಯಾಗಿರಲು-ಅವಳನ್ನು (ತಂದೆಯಾದ) ಚಂದ್ರಗುಪ್ತನು ಕಾಮಿಸಿ ವೇದವಿದ್ವಾಂಸರಾದ ವಿಪ್ರರನ್ನು ಕುರಿತು-“ತಾನು ಬಿತ್ತಿದ ಫಲವನ್ನು ತಾನೇ ಉಣ್ಣಬಹುದೇ” ಎಂದು ಕೇಳಲು-ಆ ಮಾತಿನ ಮರ್ಮವನ್ನು ಗ್ರಹಿಸದೆ-ಉಣ್ಣುಬಹುದು ಎಂದು ಆ ವಿಪ್ರರು ಹೇಳಿದರು. ರಾಜನು (ಸುಪ್ರೀತನಾಗಿ) ಮಗಳನ್ನು (ಕಾಮಭಾವದಿಂದ) ಹಿಡಿಯಲೆಂದು ಹೋಗಲು-ಅವಳು ಒಲ್ಲದೆ ಕಾಡಿಗೆ ಓಡಿಹೋಗಿ ತ್ರಿಪುರಾಂತಕಪುರ(ಶ್ರೀಶೈಲ)ದ ಲಿಂಗದ ಹಾಳುಗುಡಿಯನ್ನು ಪ್ರವೇಶಿಸಿದಳು. ಆಗ ತಂದೆಯೂ ಅಟ್ಟಿಸಿಕೊಂಡು ಹೋಗಿ ಆ ದೇವಾಲಯದೊಳಕ್ಕೇ ನುಗ್ಗಿದನು. ಇನ್ನವಳು ಕಿರುಚಿಕೊಂಡರೆ ಜನರಿಗೆ ತಿಳಿದೀತೆಂದು ಚಂದ್ರಗುಪ್ತರಾಜನು ಖಡ್ಗವನ್ನೆತ್ತಿ ಅವಳ ನೆತ್ತಿಯನ್ನು ಕಡಿಯಲು-ಅಸ್ಥಿಮಜ್ಜೆ ರಕ್ತ ಕೇಶ ಈ ನಾಲ್ಕೂ ನಾಲ್ಕು ದಿಕ್ಕಿಗೆ ಸಿಡಿದು (ಅಸ್ಥಿಲಾಪುರ-ಮಜ್ಜಲಾಪುರ-ರಕ್ತಲಾಪುರ-ಕುಂತಳಾಪುರ)ಎಂದು ನಾಲ್ಕು ಪುರವಾಗಿ ದೃಗ್ಗೋಚರವಾದವು. ಇತ್ತ ಶಿವನು ಮಲ್ಲಿಕಾದೇವಿಗೆ ಪ್ರಸನ್ನನಾಗಿ ಅಭಯವನ್ನು ಕೊಟ್ಟು-ನಿನ್ನ ಇಷ್ಟವೇನು ಬೇಡಿಕೋ ಎನ್ನಲು, ಇಲ್ಲಿ ತನ್ನ ಹೆಸರಿಂದ ಮಲ್ಲಿಕಾರ್ಜುನನೆಂಬ ಸಾಹಸಮೂರ್ತಿಯಾಗಿ ಪೂಜೆಗೊಳ್ಳೆಂದು ಮಲ್ಲಿಕಾದೇವಿಯು ಬೇಡಿಕೊಳ್ಳಲು-ಶಿವನು ಒಪ್ಪಿ ಅಲ್ಲಿ ಮಲ್ಲಿಕಾರ್ಜುನನೆಂಬ ಹೆಸರಿಂದ ಪೂಜೆಗೊಂಡನು. ಬಳಿಕ ಆ ಮಲ್ಲಿಕಾದೇವಿಯು ತಂದೆಯಾದ ಚಂದ್ರಗುಪ್ತನಿಗೆ-“ಮಗಳಿಗೆ ಅಳಿಪಿದೆಯಲ್ಲದೆ ಲಿಂಗದ ಮೊರೆಹೊಕ್ಕರೂ ಬಿಡದೆ ಕಡಿದೆ-ಪಾಪಿ ನೀನು ಕಲ್ಲಾಗಿ ಹುಟ್ಟೆಂದು ಕೊಟ್ಟ ಶಾಪದ ಫಲವಾಗಿ ಅವನು ಪಾತಾಳಗಂಗೆಯಲ್ಲಿ ಕಲ್ಲಾಗಿ ಮುಳುಗಿ ಹೋದನು (ಬೈ. ಕಾ. ಕಥಾಸೂತ್ರರತ್ನಾಕರ ಸಂ 2, ಪುಟ 304, 305).
2. ಜೈನರು ಜೇಡರ ದಾಸೀಮಯ್ಯನನ್ನು ಕೊಲ್ಲಬೇಕೆಂದು ಕೊಡದೊಳಗೆ ಘಟಸರ್ಪವನ್ನು ಅಡಗಿಸಿಟ್ಟು –“ಇದರಲ್ಲಿ ನಿಮ್ಮ ಶಿವನಿದ್ದಾನೆಯೇ” ಎಂದು ಪ್ರಶ್ನಿಸಿದರು, ಆಗ ದಾಸಯ್ಯನು-ಇಲ್ಲಿ ಶಿವನನ್ನು ತೋರಿಸಿ ನಿಮ್ಮನ್ನು ಸಂಹಾರಮಾಡದೆ ಬಿಡೆನೆಂದು ಕುಂಭದಲ್ಲಿ ಭಯಂಕರವಾಗಿದ್ದ ಸರ್ಪನ ಮೇಲೆ ಹಸ್ತವನ್ನು ಮಡಗಿದ ಒಡನೆಯೇ ಆ ಹಾವು ಸ್ಪಟಿಕಲಿಂಗವಾಯಿತು. ಅದಕ್ಕೆ ಉತ್ತರನಾಥನೆಂದು ಹೆಸರಿಟ್ಟು (ಪೊಟ್ಟಲ ಕೆರೆಯಲ್ಲಿ ?) ಏಳುನೂರು ಬಸತಿಗಳನ್ನು ಒಡೆದು-ಅಲ್ಲಿ ಆ ಲಿಂಗವನ್ನು ಪ್ರತಿಷ್ಠಿಸಿ ರಾಜಾದೇಸಿಂಗರಾಯನಿಗೆ ಲಿಂಗದೀಕ್ಷೆಯನ್ನು ಕೊಟ್ಟು ಭಕ್ತನನ್ನಾಗಿ ಮಾಡಿ ಜೇಡರ ದಾಸಯ್ಯನು ತನ್ನೂರಾದ ಮುದನೂರಿಗೆ ಹೋದನು. ಇತ್ತ ರಾಜ ದೇಸಿಂಗರಾಯನೂ ರಾಣಿ ಸುಗ್ಗಲದೇವಿಯೂ ಜಂಗಮಭಕ್ತಿಯನ್ನು ಮಾಡುತ್ತ ಶಿವನ ಕೃಪೆಯನ್ನು ಪಡೆದರು (ಅದೇ ಸಂ. 2, ಪುಟ 36).
3. ಹಿಂದೊಂದು ಕಾಲದಲ್ಲಿ ವಿನಾಶಕ್ತಿರಾಯನು ತಾನು ಹಿಡಿದ ಎರಳೆಯ ಮಾತನ್ನು ನಂಬಿ ಅದನ್ನು ಬಿಡಲು-ಅದು ಮರಿಗೆ ಮೊಲೆಯೂಡಿ ತಿರುಗಿ ಬಂದುದಿಲ್ಲವೆ ? ಅದೇ ಸಮಯಕ್ಕೆ ಆ ವಿನಾಶಕ್ತಿ ರಾಯನು ತಾ ಮಾಡಿದಾಹಾರ ಕಂಟಕದ ದೆಸೆಯಿಂದ ತಾನುಂಬ ಊಟ ಕ್ರಿಮಿಯಾಗಲು –ಇಂತಪ್ಪ ಬಾಧೆಯನ್ನು ಆ ಸತ್ಯವಂತ ಎರಳೆಯ ನುಡಿಯಿಂದ ಗೆದ್ದನು (ಅದೇ ಸಂಪುಟ3, ಪುಟ 303). ಇದೇ ವಿನಾಶಕ್ತಿ ರಾಯನ ಕಥೆ ಬಸವಣ್ಣನವರ 656ನೇ ವಚನದಲ್ಲಿ ಈ ಮುಂದಿನಂತೆ ಪ್ರಸ್ತಾಪಿತವಾಗಿದೆ: “ತರುಣಿಹರಿಣಿಯ ಉಪದೇಶದಿಂದ ಗತಿಪಥ ಮುಕ್ತಿಯ ಪಡೆದು ಬಟ್ಟೆಯ ಹತ್ತನೇ ವಿನಾಶಕ್ತಿರಾಯನು” ಎಂದು. ಮೇಲೆ ಹೇಳಿರುವಂತೆ ವಿನಾಶಕ್ತಿರಾಯನು ಮಾಡಿದ ಆಹಾರಕಂಟಕದ ವಿವರ ಇದೇ 625ನೇ ವಚನದಲ್ಲಿ-ಭಿಕ್ಷಾಂದೇಹಿ ಎಂದು ಬಂದವರನ್ನು ಬೈದು ಅಟ್ಟಿದ ವಿನಾಶಕ್ತಿರಾಯನಿಗೆ ತಿನ್ನಲು ಕೈಯಿಟ್ಟ ಅನ್ನವೆಲ್ಲಾ ಹುಳುಗುಪ್ಪೆಯಾಯಿತು. ಆ ಕರ್ಮವನ್ನು ರಾಯನು ಎರಳೆಯ ಉಪದೇಶ ಕೇಳಿಗೆದ್ದ. (ಕೊನೆಗೆ ?) ಒಂದು ಮೊಸಳೆಯ ಬಾಯಿಗೆ ತುತ್ತಾಗಿ ಹೋದ-ಎಂದಿರುವಂತಿದೆ (ನೋಡಿ ವಚನ 656).
ಈ ವಿನಾಶಕ್ತಿರಾಯನ ವೃತ್ತಾಂತವನ್ನು ಕುರಿತ ಮಾತುಗಳು ಮಾತ್ರ ಈ ವಚನದಲ್ಲಿ ಸ್ಪುಟವಾಗಿ ಅರ್ಥವಾಗುತ್ತಿಲ್ಲ. ಇದಕ್ಕೆ ಕಾರಣ ಕಾಲಕ್ರಮದಲ್ಲಿ ಕುರಿತ ಪಾಠ ತಿದ್ದುಪಡಿಗೊಳಗಾಗಿ ಕಗ್ಗಂಟಾಗಿರಬಹುದು. ಆದುದರಿಂದಲೇ 656ನೇ ವಚನದ ಪ್ರಕಾರ ವಿನಾಶಕ್ತಿರಾಯನು ಜಿಂಕೆಯ ಉಪದೇಶದಿಂದ ಮುಕ್ತಿಯನ್ನು ಪಡೆದನೆಂದಿದ್ದರೆ-ಈ 625ನೇ ವಚನದ ಪ್ರಕಾರ-ಅವನು ಧರ್ಮದ್ರೋಹಿಯಾಗಿ ದುರ್ಮರಣವನ್ನು ಅಪ್ಪಿದನೆಂಬಂತೆ ಕಥೆಯಿದೆ.
ವಿಪ್ರರನ್ನೂ ಜೈನರನ್ನೂ ರಾಜರನ್ನೂ ಖಂಡಿಸುವ ಈ ವಚನ-ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು ಎಂಬುದನ್ನು ಸಮರ್ಥಿಸುವುದೆನ್ನಬೇಕಾದರೂ-ವಾಸ್ತವವಾಗಿ ಅದು ಸುತಾತಲ್ಪಗಮನವನ್ನೂ, ಶಿವದೂಷಣೆಯನ್ನೂ ಅನ್ನದಾನನಿರಾಕರಣೆಯನ್ನೂ ನಿಷೇದಿಸುತ್ತಿರುವುದು ಸ್ಪಷ್ಟವಾಗಿದೆ. ಹೀಗೆ ಪ್ರತಿಜ್ಞೆಗೂ ಸಮರ್ಥನೆಗೂ ಲಗತ್ತಾಗದ ಈ ವಚನ ಪ್ರಕ್ಷಿಪ್ತವೆಂದರೆ ಆಶ್ಚರ್ಯಪಡಬೇಕಾಗಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು