•  
  •  
  •  
  •  
Index   ವಚನ - 662    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣರು
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ, ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ, ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆಯಾಡುವಂತೆ, ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ ಸುಣ್ಣದಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!
Transliteration Hāvina heḍegaḷa koṇḍu kenneya turisuvante, uriva koḷḷiya koṇḍu maṇḍeya sikka biḍisuvante, huliya mīseya hiḍidukoṇḍu oliduyyaleyāḍuvante, kūḍalasaṅgana śaraṇaroḍane maredu sarasavāḍidare suṇṇadakalla maḍilalli kaṭṭikoṇḍu maḍuva biddante!
Manuscript
English Translation 2 If you would trifle, thoughtlessly, With Kūḍala Saṅga's,Śaraṇās you are Like one who'd scratch his cheek With a snake's hoods! Like one who would untangle his knocked head With a burning torch; like one Who'll take his pleasure on a swing Holding a tiger's whiskers; like one Who ties up lime-stone within his fold And dives into a pool! Translated by: L M A Menezes, S M Angadi
Hindi Translation सर्पफण से गाल खुजलाने के समान, जलती लकडी से सिर के केश सुलझाने के समान, बाघ की मूँछ पकडकर प्रेम से झूलने के समान, कूडलसंगमेश के शरणों के साथ परिहास करना चूने के पत्थर गोद में बाँधकर तालाब में कूदने के समान है । Translated by: Banakara K Gowdappa
Telugu Translation పాము పడగలబట్టి చెంపల తుడిచినట్లగు; మండుకొఱివిని బట్టి తలచిక్కు తీసినట్లగు; పులి మీసములబట్టి ఉయ్యా ల లూగినట్లగు; సంగని శరణలతో సరసమన్న సున్నపురాళ్ళ నొడి గట్టుకొని మడుగులో పడినట్లే పోవురా!! Translated by: Dr. Badala Ramaiah
Tamil Translation பாம்புப் படங்களால் கன்னத்தை கீறுவதனைய கொள்ளியால் தலைச்சிடுக்கை விடுவிப்பதனைய புலியின் மீசையைப் பிடித்தவாறு, விரும்பி ஊஞ்சல் ஆடுவதனைய கூடல சங்கனின் அடியாருடன் மறந்து வெற்றுரையாடின் சுண்ணக்கல்லை மடியில் கட்டிக்கொண்டு மடுவில் விழுந்ததனையதாம் Translated by: Smt. Kalyani Venkataraman, Chennai
Marathi Translation नागाच्या फण्याने गाल खाजविल्यासम, जळत्या लाकडाने केस विंचरल्यासम, वाघाच्या मिशीला धरुन लोंबकळल्या सम, कूडलसंगाच्या शरणाबरोबर चुकून मस्करी केली तर चुना पदरात बांधून डबक्यात उडी घेतल्यासम होईल ! Translated by Shalini Sreeshaila Doddamani
ಶಬ್ದಾರ್ಥಗಳು ಉಯ್ಯಲೆ = ; ಕೊಳ್ಳಿ = ; ತುರಿಸು = ; ಮಂಡೆ = ; ಮಡಿಲು = ; ಮಡು = ; ಸರದ = ;
ಕನ್ನಡ ವ್ಯಾಖ್ಯಾನ ಕೆನ್ನೆ ನವೆಯಾಯಿತೆಂದರೆ - ಹಿಡಿದ ಸರ್ಪದ ಹೆಡೆಯಿಂದಲೇ ಯಾಮಾರಿ ತುರಿಸಿಕೊಂಡರೇನಾಗುವುದೆಂದು ಹಾವಾಡಿಗನಿಗೆ ತಿಳಿಯದೆ ? ತಲೆಗೂದಲು ಸಿಕ್ಕುಬಿದ್ದಿತೆಂದರೆ –ಉರಿಯುವ ಕೊಳ್ಳಿಯನ್ನು ಹಿಡಿದ ಕೈಯಿಂದಲೇ ಬಾಚಿಕೊಂಡರೇನಾಗುವುದೆಂದು ಭಟ್ಟನಿಗೆ ತಿಳಿಯದೆ ? ಜೋಕಾಲಿಯ ಜುಮ್ಮು ಬೇಕೆನಿಸಿದರೆ –ಉಯ್ಯಾಲೆ ಕಟ್ಟಿ ಜೀಕದೆ -ಹುಲಿಯ ಮೀಸೆಗೇ ಜೋತುಬಿದ್ದರೇನಾಗುವುದೆಂದು ವಿಲಾಸಿಗೆ ತಿಳಿಯದೆ ? ವಿನೋದ ಬೇಕೆನಿಸಿದರೆ ನಕಲಿ ಶ್ಯಾಮರೊಡನೆ ನಗೆಯಾಡದೆ -ಶರಣರೊಡನೆಯೇ ಚಕ್ಕಂದವಾಡಿದರೆ ನಗೆ ಹೋಗಿ ಹೊಗೆಯಾಗುವುದೆಂದು ವಿವೇಕಿಗೆ ತಿಳಿಯದೆ ? ಶರಣರೊಡನೆ ಹಾಸ್ಯಮಾಡುವುದೆಂದರೆ –ಅದು ಸುಣ್ಣದ ಕಲ್ಲಿನೊಡನೆ ಸರಸವಾಡಿದಂತೆ ! ಸುಣ್ಣವನ್ನು ವಿಧಿವತ್ತಾಗಿ ಬಳಸಿದರೆ ಮನೆ ಬೆಳಕಾಗುವುದು. ಅದನ್ನು ತಾಂಬೂಲಕ್ಕೆ ಬಳಸಿದರೆ ತುಟಿ ಕೆಂಪಾಗುವುದು, ನಡುವಿನಲ್ಲಿ ಕಟ್ಟಿಕೊಂಡು ಮಡುವಿನಲ್ಲಿ ಬಿದ್ದರೆ ಸಾವಿನ ಕುದಿಯಾಗುವುದು. ಸುಣ್ಣಕಲ್ಲನ್ನು ನಡುವಿಗೇ ಕಟ್ಟಿಕೊಂಡವರು -ಹುಚ್ಚಾಟವಾಡದೆ ಎಚ್ಚರವಾಗಿರಬೇಕು. ಹೇಗೋ ಹಾಗೆ -ಶರಣರ ಸಂಗಮಾಡಿದವರು ಅಪಹಾಸ್ಯದ ಸಲುಗೆಯಿಂದ ದೂರವಿರಬೇಕು. ಇಲ್ಲದಿದ್ದರೆ ಆ ನಕ್ಕ ನಗುವಿಗೆ ಬಿಕ್ಕಿಬಿಕ್ಕಿ ಅಳುವ ತೆರಿಗೆಯನ್ನು ತೆರಬೇಕಾದೀತು !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು