•  
  •  
  •  
  •  
Index   ವಚನ - 682    Search  
 
ಮಾಹೇಶ್ವರನ ಜ್ಞಾನಿಸ್ಥಲ - ಶರಣ
ಒಂದು ಮಾತೆನ್ನಬಹುದೆ ಶಬ್ದಸಾರಾಯವನು? ಒಂದು ಮಾತೆನ್ನಬಹುದೆ ಶರಣ ಸಂಬಂಧವನು? ಕೂಡಲಸಂಗಮದೇವಾ ನಂಬಿಗೆ ʼಓʼ ಎಂದುದನೊಂದು ಮಾತೆನ್ನಬಹುದೆ?
Transliteration Ondu mātannabahude śabdasārāyavanu? Ondu mātannabahude śaraṇa sambandhavanu? Kūḍalasaṅgamadēvā nambige ʼōʼ endudanondu mātennabahude?
Manuscript
English Translation 2 Should you describe the essence of words As a mere word? Should you descrie the Śaraṇās ' fellowship As a mere word? Should you describe the glad response That Lord Kūḍala Saṅgama gave Nambi As a mere word? Translated by: L M A Menezes, S M Angadi
Hindi Translation शब्द-सार को एक शब्द कह सकते हैं? शरण-संबंध को एक शब्द कह सकते हैं? कूडलसंगमदेवने नंबी से जो ‘हाँ’ कहा उसे एक शब्द कह सकते हैं? Translated by: Banakara K Gowdappa
Telugu Translation మాటతో సరిపుచ్చవచ్చునే శబ్దసారుని మాటతో సరి యనవచ్చునే శరణ సంబంథుని? సంగయ్య; నంబికి ‘ఓ’ యన్నమాట; అది ఒక వట్టిమాటబోయని వదలవచ్చునే! Translated by: Dr. Badala Ramaiah
Tamil Translation சொல்ஞானத்தை ஒரு பேச்சு என்னலாகுமா? அடியார் தொடர்பை ஒரு பேச்சு என்னலாகுமா? நம்பிக்குக் கூடல சங்கமதேவன் “ஓ” என்று கூறியதை ஒரு பேச்சு என்னலாகுமா? Translated by: Smt. Kalyani Venkataraman, Chennai
Marathi Translation साधी गोष्ट म्हणता येईल का वचनज्ञान संपत्तीला? साधी गोष्ट म्हणता येईल का शरण संबंधाला ? कूडलसंगमदेवा, नंबीच्या हाकेला ओ देणे ही साधी गोष्ट आहे काय? Translated by Shalini Sreeshaila Doddamani
ಶಬ್ದಾರ್ಥಗಳು ಕಂಪಣಿಗ = ; ಭಕ್ತಿಲಂಪಟ = ; ಸಮರ್ಥ = ; ಸಾರಾಯನ = ;
ಕನ್ನಡ ವ್ಯಾಖ್ಯಾನ ಮಂತ್ರವನ್ನು ಬರೀ ಒಂದು ಮಾತೆಂದವರುಂಟೆ ? ಶರಣನ ಮತ್ತು ಶಿವನ ಅನುಬಂಧವನ್ನು ರೂಢಿಯ ಒಂದು ಅನುಬಂಧವೆಂಬ ಮಾತೆಂದವರುಂಟೆ? ಶಿವನು ನಂಬಿಯಣ್ಣನಿಗೆ ಓಗೊಟ್ಟು ತೋರಿದ ಭಕ್ತಜನವಾತ್ಸಲ್ಯವನ್ನು ಕೇವಲ ಒಂದು ಮಾತೆಂದವರುಂಟೆ ? ಅದು ವಾಗತೀತ ಅನಿರ್ವಾಚ್ಯವೆಂಬುದು ಈ ವಚನದ ಅಭಿಪ್ರಾಯ. ತಿರುವಾಯೂರಿನ ಜಡೆಯ ನಾಯನಾರನಿಗೆ ಆ ಊರಿನ ವಲ್ಮೀಕನಾಥನ ವರದಿಂದ ಯಸ್ಯಜ್ಞಾನೀ ದೇವಿಯಲ್ಲಿ ಸೌಂದರ (ಪೆರುಮಾಳೆ ಅಥವಾ) ನಂಬಿ ಹುಟ್ಟುತ್ತಾನೆ. ಆ ನಂಬಿಕೆಯನ್ನು ಅವನ ಐದರ ವಯಸ್ಸಿನಲ್ಲಿಯೇ –ಆ ಊರಿನ ಅರಸನಾದ ನರಸಿಂಗ ಮೊನೆಯಾರನು ದತ್ತು ತೆಗೆದುಕೊಂಡು ಸಾಕುವುವನು. ನಂಬಿ(ಯಣ್ಣನಿ)ಗೆ ಹದಿನಾರರ ಹರೆಯ ಬಂದಾಗ ಮಣಮಂದಪುತ್ತೂರಿನ ಒಂದು ಹೆಣ್ಣನ್ನು ನಿಶ್ಚೈಸಿ ಮದುವೆ ಮಾಡುವ ಭರದಲ್ಲಿರುವನು ರಾಜ. ಆಗ ಶಿವನು ವೃದ್ಧಮಾಹೇಶ್ವರನ ವೇಷದಲ್ಲಿ ವಿವಾಹಮಂಟಪಕ್ಕೆ ಒಂದು -ಹಸೆಯ ಮೇಲಿರುವ ಮದುಮಗನು ರಾಜಪುತ್ರನಲ್ಲವೆಂದೂ, ತನ್ನ ಗುಲಾಮನೊಬ್ಬನ ಮಗನೆಂದೂ ಗಲಭೆಯೆಬ್ಬಿಸಿ ಆ ಮದುವೆಯನ್ನು ತಪ್ಪಿಸುತ್ತಾನೆ. ಆಗ ಅವನನ್ನು ಹುಚ್ಚನೆಂದು ಜರಿಯುವನು ನಂಬಿಯಣ್ಣ. ವೃದ್ಧ ಮಾಹೇಶ್ವರನಾದರೋ ತನ್ನ ಮಾತನ್ನು ರುಜುವಾತುಪಡಿಸಲು ನಂಬಿಯಣ್ಣನನ್ನು ತಿರುವಾಯೂರಿನ ವಲ್ಮೀಕನಾಥ ದೇವಾಲಯಕ್ಕೆ ಕರೆದೊಯ್ದು ಅಲ್ಲಿ ನಿಜರೂಪವನ್ನು ತೋರಿ ಕೃಪಾದೃಷ್ಟಿಯನ್ನು ಬೀರಿ ಚಿನ್ನದ ತಾಳಗಳನ್ನು ಅವನ ಕೈಗಿತ್ತು ತನನ್ನು ಮಣಮಂದಪುತ್ತೂರಿನ ಮದುವೆಯ ಮಂಟಪದಲ್ಲಿ ಹುಚ್ಚನೆಂದು ಬೈದದನ್ನೇ ಹಾಡಾಗಿ ಹಾಡೆಂದು ಮುದ್ದಿಸುವನು. ಶಿವನು ಹೇಗೆ ಛಲದಿಂದಲಾದರೂ ತನ್ನನ್ನು ಸ್ವೀಕರಿಸಿದ್ದು ತನ್ನ ಸುಕೃತವೆಂದೇ ನಂಬಿಯಣ್ಣನು ಭಕ್ತಿಯಿಂದ ಭಾವಿಸಿ : “ಪಿಚ್ಚನೇ ಪೆರೆಸೂಡಿದನೆ ಪರಮ ಪಶುಪತಿಯೆ | ಅಚ್ಚ ಸವಿಯೇ ಸುಖವೆ ಸಖನೆ ನಂಬಿಯ ಪತಿಯೆ | ನೀನೆ ಆಳ್ಮಾಡಿಕೊಳಲಲ್ಲೆನಲ್ ಬಪ್ಪುದೇ | ನೀನೆ ತೊಳ್ತಾಳ್ವಡಿನ್ನಲ್ಲೆನಲ್ ಬಪ್ಪದೇ | ನೀನೆ ಬಂದಾಳ್ಮಾಡೆ ಯುಕುತಿಕೊಂಬುದೆ ದೇವ | ನೀನೆ ಬಂದಾಳ್ವೆನೆನೆ ಧರ್ಮವುಂಟೇ ದೇವ | ಪ್ರೇರಕಂ ನೀಂ ಬರಲು ಸಾಕ್ಷಿಯುಂಟೇ ತಂದೆ | ಮಾರಾರಿ ನೀಂ ಬರೆ ವಿಚಾರವುಂಟೇ ತಂದೆ | ಇನ್ನೇನು ತೊತ್ತಾದೆನಲ್ಲೆನಲು ಬಪ್ಪುದೇ | ಇನ್ನಂತು ಮಿಂತುಮೆಂತುಂ ಹೊಳೆಯ ಬಪ್ಪುದೇ | ಮಚ್ಚಿ ಬಂದಾಳಾದೆನಲ್ಲೆನಲ್ ಬಪ್ಪುದೇ | ನಚ್ಚಿ ನಿನಗಾಳಾದೆನಲ್ಲೆನಲ್ ಬಪ್ಪುದೆ” ಎಂದು ಹಾಡುವನು. ಹೀಗೆ ತನಗೆ ಆಳಾಗಿ ಪ್ರಿಯಪುತ್ರನಾದ ನಂಬಿಯಣ್ಣನಿಗೆ ಪರವೆನಾಚಿಯೆಂಬ ಸುಂದರಿಯನ್ನು ವರಿಸಿ ಪ್ರೀತಿಸಲು ಶಿವ ತಾನೆ ಕುಂಟಣಿಯೂ ಆಗುವನು. ಈ ನಂಬಿಯಣ್ಣನು ತಮಿಳು ನಾಡಿನ ಅರುವತ್ತು ಮೂರು ಜನ ಪುರಾತನರಲ್ಲಿ ಸುಪ್ರಸಿದ್ಧನಾದ ವಾಗ್ಗೇಯಕಾರನೂ ಹೌದು. ತಮಿಳುನಾಡಿನ ಮತ್ತು ಕೇರಳದ ಶಿವಾಲಯಗಳಲ್ಲಿ ಹಾಡುವುದು ಅವನ ಕಾಯಕ. ಈ ಮಹನೀಯನು ಪ್ರೇಮಜೀವನವನ್ನು ಒಂದು ಶಿವ ಯೋಗವಾಗಿ ನಡೆಸಿದ ಸಿದ್ಧಪುರುಷ. ಇವನೊಮ್ಮೆ ತಿರುವಾಲೂರಿನಲ್ಲಿ ಜಲಕ್ರೀಡೆಯನ್ನಾಡಿ ಬಂದು ತಳಿರ ಮಂಟಪದಲ್ಲಿ ತನ್ನ ಸತಿ ಪರವೆ ನಾಚಿಯೊಡನೆ ಶಯನದಲ್ಲಿದ್ದು ಎಚ್ಚತ್ತು-ಅವಳ ಮೊಲೆಗಳನ್ನು ನಿಟ್ಟಿಸಿ ಜೋಡಿ ಶಿವಲಿಂಗಗಳೆಂದು ಭಾವಿಸಿ ತಾಳವನ್ನು ನುಡಿಸುತ್ತ ಹಾಡಿದನು. ಆ ಇನಿದನಿಗೆ ಪರವೆನಾಚಿ ಎಚ್ಚತ್ತು ಇದೇನೆಂದು ಕೇಳಲು -ನನ್ನ ಮತ್ತು ನಿನ್ನ ಭಕ್ತಿಗೆ ಶಿವನು ಉಭಯಲಿಂಗವಾಗಿ ನಿನ್ನೆದೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ -ನೋಡಿಕೋ ಎಂದನು. ಅದಕ್ಕೆ ಪರವೆನಾಚಿಯು ಕಡುನಾಚಿ ಸುಳ್ಳೆಂದು ಅಲ್ಲಗಳೆಯುವಳು. ನಂಬಿಯಣ್ಣನಾದರೋ ಮರಳಿ ತಾಳವನ್ನು ನುಡಿಸುತ್ತ –“ಸ್ತನಶಂಕರೇಶ್ವರ” ಎಂದು ತಿರುಪಾಟೊಂದನ್ನು ಕಟ್ಟಿ ಹಾಡಿದನು ಒಡೆನೆಯೇ ಶಿವನು ಆ ಮೊಲೆಗಳೊಳಗಿಂದಲೇ ಓಗೊಂಡು ಕಾಣಿಸಿಕೊಂಡು ಮೆಚ್ಚಿ, ಪಡಿಹೊಂಗಳನ್ನೂ ಕೊಟ್ಟನಂತೆ. ಈ ಸಂದರ್ಭವನ್ನೇ ಪ್ರಸ್ತಾಪಿಸಿರುವುದು ಬಸವಣ್ಣನವರು ತಮ್ಮ ಈ 684 ನೇ ವಚನದಲ್ಲಿ – “ನಂಬಿಗೆ ಓ ಯೆಂದುದನೊಂದು ಮಾತೆನ್ನಬಹುದೇ” ಎಂದು. ಇಲ್ಲಿ ನಂಬಿಗೆ ಶಿವನು ಓಯೆಂದುದನ್ನು –ಅಭ್ಯುಪಮಗಮ ಅರ್ಥದೊಂದು ಸಾಮಾನ್ಯ ಶಬ್ದಕ್ಕೆ ಸರಿಸಾಟಿ ಮಾಡಲಾಗದು. ಯಾರು ಓಯೆಂದು ಏನೆಲ್ಲವನ್ನೂ ಸಂತೈಸಿ ಅಭಯ ಕೊಟ್ಟು ಸಂತೋಷಗೊಳಿಸುವರೋ-ಅದೆಲ್ಲಕ್ಕೂ ಮಿಗಿಲಾದೊಂದು ನಿರ್ದ್ವಂದ್ವ ಶಾಶ್ವತಸ್ಥಿತಿ ಲಭ್ಯವಾಗುವುದು ಶಿವನು ಓಗೊಟ್ಟರೆ –ಅಲ್ಲಿ ದುಃಖವೂ ಇಲ್ಲದ ಮೋದವೂ ಇಲ್ಲದ –ತನ್ನಲ್ಲಿ ತಾನಾಗಿರುವ –ಇದ್ದು ಅರಿವ –ಅರಿತು ಆನಂದಿಸುವ ಸ್ಥಿತಿಯೊಂದು ಲಭ್ಯವಾಗುವುದು –ಅದನ್ನೇ ಕೈವಲ್ಯವೆನ್ನುವರು. ಇಂಥ ಐಕ್ಯಸ್ಥಿತಿಯನ್ನು ಬರೀ ಮಾತೆಂದವರುಂಟೆ? ವಾಸ್ತವವಾಗಿ ಅದೇ ಎಲ್ಲ ಶಬ್ದ ಜಾಲವನ್ನು ಹಿಂಡಿ ತೆಗೆದ ಜೇನು ! ಶರಣನಿಗೂ ಶಿವನಿಗೂ ಏರ್ಪಡುವ ಈ ಜೀವನಾನುಬಂಧವೇ ನಮ್ಮ ಸುತ್ತಣ ಸೃಷ್ಟಿಗೂ ನಮಗೂ ನಡುವಿರುವ ವ್ಯವಹಾರಸಕಲದ ಸಿದ್ಧಿಗೆ ಪ್ರತೀಕವಾಗಿರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು