ಮಾಹೇಶ್ವರನ ಜ್ಞಾನಿಸ್ಥಲ - ಭಕ್ತ
ಭಕ್ತರೇ ಸಮರ್ಥರು; ಅಸಮರ್ಥರೆನಲುಂಟೆ?
ಚೆನ್ನನೆತ್ತ, ಚೋಳನೆತ್ತ?
ಚೆನ್ನನೊಡನುಂಡ ಶಿವ, ಆಹಾ ! ಅಯ್ಯಾ !
ಚೆನ್ನ, ಚೋಳನ ಮನೆಯ ಕಂಪಣಿಗನಯ್ಯಾ !
ಕೂಡಲಸಂಗಮದೇವ ಭಕ್ತಲಂಪಟನಯ್ಯಾ !
Transliteration Bhaktarē samartharu; asamartharenaluṇṭe?
Cennanetta, cōḷanetta?
Cennanoḍanuṇḍa śiva, āhā! Ayyā!
Cenna, cōḷana maneya kampaṇiganayyā!
Kūḍalasaṅgamadēva bhaktalampaṭanayyā!
Manuscript
English Translation 2 A devotee is powerful,
And would you call him powerless?
How far was Cenna from Cōḷa !
And yet, behold, good Sir,
Śiva with Cenna partook of food:
Cenna was but a servant-man
In Cōḷa's house!
Lord Kūḍala Saṅgama
Is passionately fond of piety!
Translated by: L M A Menezes, S M Angadi
Hindi Translation भक्त समर्थ हैं, उन्हें असमर्थ कह सकते हैं?
चन्न कहाँ? चोळ कहाँ?
आहा चन्न के साथ भोजन किया शिवने,
चन्न चोळ के घर का नौकर था,
कूडलसंगमदेव भक्त-वत्सल है ॥
Translated by: Banakara K Gowdappa
Telugu Translation భక్తుల సమర్ధులు; అసమర్ధులనుటగలదే?
ఎక్కడి చెన్నుడు? ఎక్కడి చోళుడు?
చెన్నునితో చేరి శివుడు భుజించె. ఔరౌరా!
చోళుని యింటిపనివాడు చెన్నుడయ్యా!
సంగమదేవుడు భక్తి లంపటుడయ్యా!
Translated by: Dr. Badala Ramaiah
Tamil Translation பக்தர்களில் திறமைசாலி, திறமையற்றவரென்பது உண்டோ?
சென்னன் எங்கு? சோழன் எங்கு?
சென்னனுடன் சிவன் உண்டனன், ஆஹா, ஐயனே
சென்னன் சோழனின் இல்லத்திற்குப் புல்கட்டை
அளித்தவன் ஐயனே
கூடல சங்கமதேவன் பக்தனை விரும்புவான் ஐயனே.
Translated by: Smt. Kalyani Venkataraman, Chennai
Marathi Translation
भक्त समर्थ आहेत, त्यांना असमर्थ म्हणता येईल ?
चन्नय्या कोठे ? चोळ राजा कोठे ?
चन्नय्याचा प्रसाद स्वीकारला शिवाने !
अहा देवा! चन्नय्या चोळाचा नोकर होता देवा !
कूडलसंगमदेव भक्ती लंपट आहे !
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ರಾಜರು ಅಧಿಕಾರದಿಂದ ಐಶ್ವರ್ಯದಿಂದ ಮೇಲ್ನೋಟಕ್ಕೆ ಅತ್ಯಂತ ಸಮರ್ಥರಂತೆ ಕಂಡರೂ-ಅವರ ಕುದುರೇ ಲಾಯದ ಒಬ್ಬ ಕೀಳಾಳೂ ತನ್ನ ಶಿವಭಕ್ತಿಯ ಮಹಿಮೆಯಿಂದ ಅವರಿಗಿಂತ ಸಮರ್ಥನೇ ಆಗಿರುವನೆಂಬುದು ಈ ವಚನದ ತಾತ್ಪರ್ಯ.
ಮಾದರ ಚೆನ್ನಯ್ಯನೆಂಬ ಮಹಾಶಿವಶರಣನು ತನ್ನ ಜೀವಮಾನವಿಡಿಯಾಗಿ ಕರಿಕಾಲ ಚೋಳನೆಂಬೊಬ್ಬ ರಾಜನ ಕುದುರೆಯ ಲಾಯಕ್ಕೆ ಹುಲ್ಲುಕೊಯ್ದು ತರುವ ಕಾಯಕದಲ್ಲಿದ್ದವನು. ಆ ಚೋಳನೂ ಪ್ರಖ್ಯಾತ ಶಿವಭಕ್ತನೇ ಆದರೂ ಶಿವನಿಗೆ ಆ ಚೋಳನ ಮೇಲಿದ್ದುದಕ್ಕಿಂತ ಹೆಚ್ಚಿನ ವಾತ್ಸಲ್ಯವಿತ್ತು ಸರಳತೆಯೇ ಸಾಕಾರವೆತ್ತಂತಿದ್ದ ಆ ಮಾದರ ಚೆನ್ನಯ್ಯನ ಮೇಲೆ.
ಒಂದು ಸಲ ಚೆನ್ನಯ್ಯನ ಮನೆಯಲ್ಲಿ ಅಂಬಲಿ ಉಂಡುಹೋದ ಶಿವನು-ಚೋಳರಾಜನ ಮನೆಯಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ಬಡಿಸಿ ನೈವೇದ್ಯ ಮಾಡಿದಾಗ-“ಉಂಡೆವಾ ಚೆನ್ನನೊಡನೆಮಗಿಂದು ಹಸಿವಿಲ್ಲ”ವೆನ್ನುತ್ತಾನೆ.-ಮುಂದುವರಿದು “ಕೇಳಂಬಕಳದ ಸವಿಯನದನೇನೆಂದಪೆಂ| ಚೋಳಾದಿಗಳ್ ಪಡೆಯರದನೆಂತು ಬಣ್ಣಿಪೆಂ| ಪಾಕದಿಂದಪ್ಪ ವಸ್ತುಗಳದಕೆ ಪಡಿಯಿಲ್ಲ”ಎಂದು ಆ ಚೆನ್ನಯ್ಯನ ಭಕ್ತಿರಸ(ಪಾಕ)ವನ್ನು ಕೊಂಡಾಡುವನು.
ಶಿವನ ಕೃಪೆಗೆ ಇಷ್ಟು ಪಾತ್ರವಾದ ಆ ಚೆನ್ನಯ್ಯನನ್ನು ಕಣ್ಣಾರೆ ಕಾಣಬೇಕೆಂದು ಚೋಳರಾಜನು ದಡದಡನೆ ಅರಮನೆಯಿಂದ ಹೊರಟು ಊರ ಹೊರಗಣ ಹಿರಿಯ(ಹೊಲೆ)ಗೇರಿಯಲ್ಲಿ ಪ್ರವೇಶಿಸಿ ಆ ಚೆನ್ನಯ್ಯನ ಮನೆಯಲ್ಲಿದೆಯೆಂದು ತಾನೇ ಹುಡುಕಾಡಿ ಹೊಕ್ಕು-ತನ್ನ ಲಾಯದ ಕಂಪಣಿಗನೇ ಅವನೆಂದು ಗುರುತಿಸಿ-ಮತ್ತಷ್ಟು ಧನ್ಯತೆಯಿಂದ ಧೊಪ್ಪೆಂದು ಅವನ ಕಾಲಿಗೆ ಬೀಳುವನು. ಗಾಬರಿಗೊಂಡ ಚೆನ್ನಯ್ಯನು “ಎನ್ನ ಕುಲಮಂ ನೋಡದಿಂತು ಬರ್ಪರೆ ಚೋಳ| ಎನ್ನ ಜಾತಿಯನರಿಯದಿಂತು ಮಾಳ್ಪರೆ ಚೋಳ” ಎಂದು ದೈನ್ಯವಾಡುವನು. ಆದರೆ ಶಿವಭಕ್ತನಾದ ಚೋಳನಿಗೆ ಜಾತಿಬುದ್ಧಿಯಿರಲಿಲ್ಲ –ಅವನನ್ನು ಅಪ್ಪಿಕೊಂಡು ಆನೆಯ ಮೇಲೆ ಕೂರಿಸಿಕೊಂಡು ಊರಿನ ತುಂಬ ಮೆರೆಸುವನು.
ಇದರಿಂದ ಚೋಳರಾಜನೇನೋ ಕೃತಾರ್ಥನಾದ-ಆದರೆ ನಿಗರ್ವಿಯೂ ನಿರಾಡಂಬರಿಯೂ ಆಗಿ ಗುಪ್ತ ಶಿವಭಕ್ತನಾಗಿದ್ದ ಚೆನ್ನಯ್ಯನಿಗೆ ಮುಜುಗರವಾಯಿತು. ತನ್ನನ್ನೇಕೆ ಶಿವನು ಈ ಪ್ರಸಿದ್ಧಿಯ ಶೂಲಕ್ಕೇರಿಸಿದನೆಂದು ಮರುಗಿದ. ಶಿವನಿಗೆ ತಾನು ಮಾಡಿದ ಪೂಜೆ ಈ ಮಂಗಮೂತಿಯ ಫಲವನ್ನು ಕೊಟ್ಟಿತೇ ಎಂದು ಪರಿತಪಿಸಿದ. ಮತ್ತು ಆ ಶಿವನನ್ನು ಕುರಿತು-“ಅರಿಯದಂಬಲಿಯನರ್ಪಿಸಿದೊಡಿಂತಿರಿವರೇ| ಹೆರೆಸೂಡಿದನೆ ತೂರಿ ಮಾರಿ ನೆರೆ ದೂರುವರೆ| ಮೇದಿನಿಗೆ ಬೀದಿಗರುವಾಯಿತೆನ್ನಯ ಭಕ್ತಿ| ವಾದಕ್ಕೆ ಹರಲೆಯಂ ತಂದಿಕ್ಕಿತೀ ಭಕ್ತಿ| ಇನ್ನಿಳೆಯೊಳಿರೆ”ನೆಂದು ಆಕ್ಷೇಪಿಸಿದ.
ಹಸಿವೆಗಿಂತಲೂ ಕಾಮಕ್ಕಿಂತಲೂ ಪ್ರಕರ್ಷವಾದ ಕೀರ್ತಿಕಾಮವನ್ನು ಚೆನ್ನಯ್ಯನು ತಿರಸ್ಕರಿಸಿದನೆಂದರೆ –ಅವನಿಗಿಂತ ಶಿವಭಕ್ತರಿನ್ನಾರು? ಅವನು ಜಾತಿಯಲ್ಲಿ ಮಾದಾರನೆಂಬ, ವೃತ್ತಿಯಲ್ಲಿ ಹುಲ್ಲುಕೊಯ್ಯವ ಕೂಲಿಯೆಂಬ ಏನೊಂದೂ ವಿವರವು ಅವನ ಶಿವಭಕ್ತಿ ಸಾಮರ್ಥ್ಯವನ್ನು ಮಸುಳಿಸಲಾರದು.
ಇಂಥ ಶಿವಭಕ್ತರನ್ನೇ ಶಿವನು ಅಧಿಕವಾಗಿ ಪ್ರೇಮಿಸುವುದು. ಮುಖ್ಯವಾಗಿ ಶಿವನು ಭಕ್ತಿಲಂಪಟ -ಭಕ್ತಿಯೆಲ್ಲಿದೆಯೋ ಅಲ್ಲೇ ಅವನ ಸುಳಿದಾಟ ! ಕಾಮಲಂಪಟನು ಕಾಮಿನಿಯೊಬ್ಬಳನ್ನು –ಅವಳು ಯಾವ ಜಾತಿಯವಳಾಗಲಿ ಕಾಮಿಸುವಂತೆ -ಭಕ್ತಲಂಪಟನಾದ ಶಿವನು ಭಕ್ತಿಯುಳ್ಳವರನ್ನು ಯಾವ ಜಾತಿಯವರಾಗಲಿ ಅನುಗ್ರಹಿಸದೆ ಬಿಡನು. ನಿಮ್ನ ವರ್ಗದವರು ಸಮರ್ಥರಾದರೂ -ಸಾಮಾಜಿಕ ಆರ್ಥಿಕ ಏರುಪೇರಿನಿಂದ ಎದೆಗುಂದುತ್ತಿದ್ದುದನ್ನು ಕಂಡ ಬಸವಣ್ಣನವರು –ಅವರಿಗೆ ಈ ಮೂಲಕ ಧೈರ್ಯ ಹೇಳಿರುವರು. (ನೋಡಿ ವಚನ 569).
ನಿಮ್ನ ವರ್ಗದವರು ಸಮರ್ಥರಾದರೂ -ಸಾಮಾಜಿಕ ಆರ್ಥಿಕ ಏರುಪೇರಿನಿಂದ ಎದೆಗುಂದುತ್ತಿದ್ದುದನ್ನು ಕಂಡ ಬಸವಣ್ಣನವರು –ಅವರಿಗೆ ಈ ಮೂಲಕ ಧೈರ್ಯ ಹೇಳಿರುವರು. (ನೋಡಿ ವಚನ 569).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು