ಮಾಹೇಶ್ವರನ ಭಕ್ತಸ್ಥಲ - ತನುಮನ
ಕಟ್ಟುವೆನುಪ್ಪರಗುಡಿಯ ಜಗವರಿಯೆ;
ಮಾಡುವೆನೆನ್ನ ಕಾಯ ಕೆಡೆವನ್ನಕ್ಕ.
ಬೇಡುವುದೆನ್ನ ತನುಮನಧನವ,
ಬೇಡಲಾರದ ಹಂದೇ, ನೀ, ಕೇಳಾ:
ಈ ಬಿರುದು ಸಂದಿತ್ತು, ಕೂಡಲಸಂಗಮದೇವಾ.
Transliteration Kaṭṭuvenupparaguḍiya jagavariye;
māḍuvenenna kāya keḍevannakka.
Bēḍuvudenna tanumanadhanava,
bēḍalārada hande, nī, kēḷa:
Ī birudu sandittu, kūḍalasaṅgamadēvā.
Manuscript
English Translation 2 So that the world may know,
I hoist the flag aloft:
I do my obligations till
The body perishes.
Do you hear me: you ought to ask
For my body, mind and wealth-
You coward who cannot ask:
This title does fit you,
O Kūḍala Saṅgama Lord!
Translated by: L M A Menezes, S M Angadi
Hindi Translation ऊर्धव ध्वज पहराऊँगा जिससे जग जाने
कि देहांत तक सेवा करूँगा ।
मेरे तन, मन, धन माँगो,
माँगने में अशक्त हे भीरु, तुम माँगो
यह विरद सार्थक है, कूडलसंगमदेव ॥
Translated by: Banakara K Gowdappa
Telugu Translation జగమరయ నుప్పర గుడికట్టెద;
కాయముడుగునందాక కష్టింతు;
నా తనుమనధనముల వేడదగు
వేడజాలనిపందా! నీ వడుగుమ;
ఈ బిరుదు కూడె కూడల సంగమదేవా!
Translated by: Dr. Badala Ramaiah
Tamil Translation மாகேசுவரனின் பக்தத்தலம்
உலகறிய கோயில் கோபுரத்தைக் கட்டுவேன்
என் உடல் அழியும் வரையில் செய்வேன்
என் உடல், மனம், செல்வத்தை வேண்டுவாய்
வேண்டவியலாத பேடியே
நீ கேளாய், இவ்விருது ஐயத்திற்கு உரியதன்றோ
கூடல சங்கமதேவனே.
Translated by: Smt. Kalyani Venkataraman, Chennai
Marathi Translation
बांधला झेंडा खूप उंच साऱ्या जगाला दिसण्यासम,
पूजा अर्चा करीन देह असेपर्यंत, मागावे माझे तन-मन-धन.
न मागण्याचा भित्रेपणा चांगला नाही
तू ऐक, हे माझे आव्हान आहे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ವಚನದ ಸರಳಾನುವಾದ : ಎತ್ತರವಾಗಿ ಧ್ವಜಪಟವನ್ನು ಕಟ್ಟಿ ಸಾರಿ ಹೇಳುತ್ತಿದ್ದೇನೆ ಎಲ್ಲರೂ ಕೇಳಿ : ನನ್ನ ಈ ದೇಹ ಬಿದ್ದು ಹೋಗುವವರೆಗೆ ದಾನದಾಸೋಹ ಮಾಡುವ ಸಂಕಲ್ಪ ನನ್ನದು. ನನ್ನ ತನು ಮನ ಧನದಲ್ಲಿ ಬೇಕಾದ್ದನ್ನು ಬೇಕಾದವರು ಕೇಳಿ ಪಡೆಯಿರಿ. ನೇರವಾಗಿ ಬಂದು ಬೇಡಲಾರದ ಹೇಡಿ ಶಿವನೇ, ನೀನೂ ಕೇಳು-ಎನ್ನುವರು ಬಸವಣ್ಣನವರು ಪ್ರತಿಜ್ಞಾಪೂರ್ವಕವಾಗಿ.
ಇಲ್ಲಿ ಬಸವಣ್ಣನವರ ಪ್ರತಿಜ್ಞೆಯ ಗಮನಾರ್ಹವಾದ ಅಂಶವೆಂದರೆ-ಅವರು ಶಿವನನ್ನು ಬೇಡುವುದಿಲ್ಲ –ಅವನಿಗೇ ಕೊಡುವಂಥ ಹುಮ್ಮಸ್ಸು ಅವರಿಗಿದೆ. ಸಾಮಾನ್ಯವಾಗಿ ಭಕ್ತರು ತಮಗೆ ಅದು ಬೇಕು ಇದು ಬೇಕು ಎಂದು ಶಿವನನ್ನು ಬೇಡುವವರೇ. ಬಸವಣ್ಣನವರದು ಕೊಟ್ಟ ಕೈಯೇ ಹೊರತು ಬೇಡಿದ ಕೈಯಲ್ಲ-ಅವರು ಭಕ್ತವೃಂದಕ್ಕಂತೂ ಕಲ್ಪವೃಕ್ಷವಾಗಿದ್ದರು.
ಮತ್ತು ಬಸವಣ್ಣನವರು ಭೀಮನ ಪ್ರಕಾರ ಮಾಡಿದ್ದರೆಂಬ ಪ್ರತಿಜ್ಞೆಗಳಲ್ಲಿ ಕೆಲವು ಈ ಮುಂದಿನಂತಿವೆ :(1) ಮೃಡನನಾದೊಡೆಯೊಂದು ಬಾರಿಗೆ ಕಡಗಿ ಬೇಡದ ಭಾಷೆ (2) ಏನನಾದೊಡೆ ಬಯಸಿದೊಡವೆಗಳನಡಿಯಿಡದೀವುದು (ಬಸವಪುರಾಣ 8-2) (3) ಭಕ್ತರ ಸಲುಗೆಯಂ ಸಲಿಸುವುದು ಭಾಷೆ (ಅದೇ 8-3) ಮತ್ತು ಸ್ವತಃ ಬಸವಣ್ಣನವರ ಪ್ರಕಾರ: (4) ಎಂಬತ್ತು ನಾಲ್ಕು ಲಕ್ಷ ಮುಖದೊಳಗೊಂದೇ ಮುಖವಾಗಿ ಕಾಡಿ ನೋಡೆನ್ನನು, ಬೇಡಿ ನೋಡೆನ್ನನು, ಬೇಡದಿರ್ದಡೆ ಅಯ್ಯ ನಿಮಗೆ ಪ್ರಮಥರಾಣೆ (ನೋಡಿ ವಚನ 432) (5) ಕಂದಿದೆನಯ್ಯ ಎನ್ನ ತನು ಮನ ಧನವ ಬೇಡುವರಿಲ್ಲದೆ ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸು (ನೋಡಿ ವಚನ 433) ನೋಡಿ ವಚನ 710).
ಈ ಕೊನೆಯ ವಚನಕ್ಕಾಗಿ ಮಡಿವಾಳ ಮಾಚಯ್ಯನು-“ಮಲಹರಾರ್ಚಕರಧಮರೇ ? ನೀ ಬಲು ಧನಿಕನೇ ? ಬೇಳ್ಪರಿಲ್ಲದೆ ಹೇಗೆ ಬಡವಾದೈ” ಎಂದು ಬಸವಣ್ಣನವರನ್ನು –ಅವರದು ಅಹಂಕಾರವೆಂದು –ಉಗ್ರವಾಗಿ ಖಂಡಿಸಿದ್ದು ಉಂಟು (ನೋಡಿ ಬಸವಪುರಾಣ 22-54).
ಬಸವಣ್ಣನವರು ಇನ್ನೂ ಹದಿನಾರರ ಹರೆಯದಲ್ಲೇ ಕಲ್ಯಾಣಕ್ಕೆ ಬಂದು ಬಿಜ್ಜಳನ ಭಂಡಾರದಲ್ಲಿ ಸಂಬಳಕ್ಕೆ ಸೇರಿದರು. ಮೇಲಾಗಿ ಅಲ್ಲಿ ಭಂಡಾರಿಯಾಗಿದ್ದ ಸಿದ್ಧದಂಡಾಧಿಪನು ಬಸವಣ್ಣನವರನ್ನು ತನ್ನ ಅಳಿಯನನ್ನಾಗಿ ಸ್ವೀಕರಿಸುತ್ತಾನೆ. ಆಗ ಅವರು ಮಹಾಶ್ರೀಮಂತರಾಗುತ್ತಾರೆ. ಆ ಶ್ರೀಮಂತಿಕೆಯ ಮಧ್ಯೆ ಬಸವಣ್ಣನವರಿಗೆ “ಅಯ್ಯಲಾ ಇಂತಪ್ಪನರ್ಘ್ಯಮಂ ಭಕ್ತರ್ಗೆ ಕಯ್ಯಾರೆ ಕುಡಲಿಲ್ಲ ಪರಮಶಿವಭಕ್ತರ್ಗೆ. ಎಂದೋ ಮಹೇಶರ್ಗೆ ಸೇರಿಸುವೆನೆಂತಿದಂ (ಬ.ರಾ.ದೇ. ರಗಳೆ 5ನೇ ಸ್ಥಳದ ಕೊನೆಗೆ) ಎಂಬುದೇ ಚಿಂತೆಯಾಗಿತ್ತು. ಸಿದ್ಧ ದಂಡಾಧಿಪನು ಅಪುತ್ರಕನಾಗಿ ಸತ್ತಮೇಲಂತೂ ಅವನ ಐಶ್ವರ್ಯವೆಲ್ಲಾ ಬಸವಣ್ಣನವರ ಸ್ವತ್ತೇ ಆಯಿತು. ಮೇಲಾಗಿ ಬಿಜ್ಜಳನು ಸಿದ್ಧರಸನ ಸ್ಥಾನದಲ್ಲಿ ಬಸವಣ್ಣನವರನ್ನೇ ಭಂಡಾರಿಯನ್ನಾಗಿಯೂ ನೇಮಿಸಿದ. ಆ ಸುವರ್ಣಸಂದರ್ಭದಲ್ಲಿ ಬಸವಣ್ಣನವರು ಶಿವಭಕ್ತರಿಗೆ ಮತ್ತು ಶಿವಕಾರ್ಯಗಳಿಗೇ ತಮ್ಮ ಐಶ್ವರ್ಯವೆಲ್ಲಾ ಮೀಸಲೆಂದು ಸಾರಿ –ಎಷ್ಟು ದಾನ ಮಾಡಿದರೂ ಅವರಿಗೆ ತಣಿವಾಗಲಿಲ್ಲ. ಇಂಥದೊಂದು ಸಂದರ್ಭದಲ್ಲಿ ಬಸವಣ್ಣನವರು ಹಾಡಿದ್ದೀ ವಚನ.
ವಿ : ಬಸವಣ್ಣನವರು ತಾವು ವಾಸವಾಗಿದ್ದ ಮನೆಯ ಮೇಲೆ ಎತ್ತರವಾದೊಂದು ಧ್ವಜಪಟವನ್ನು ಕಟ್ಟಿದ್ದರು-ಯಾರಾದರೂ ಬಂದು ಏನನ್ನಾದರೂ ಅಲ್ಲಿ ಬೇಡಿ ಪಡೆಯಬಹುದೆಂದು ಕೈಬೀಸಿ ಕರೆಯುವಂತೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು