•  
  •  
  •  
  •  
Index   ವಚನ - 751    Search  
 
ಮಾಹೇಶ್ವರನ ಶರಣಸ್ಥಲ - ಏಕದೇವೋಪಾಸನೆ
ಚಿಕ್ಕದೊಂದು ಹೊತ್ತಗೆ ಬೆನಕನ ಕರಡಗೆಯಯ್ಯಾ, ನೀಡುಂಡುಟಿಗೆ(?) ಗೊರವನಯ್ಯಾ. ಪುಣ್ಯವೇನಾದರಾಗಲಿ, ಡಕ್ಕೆಯ ಮೇಲೆ ಅಕ್ಕಿಯ ತಳಿದೆನು: ನಮ್ಮ ಕೂಡಲಸಂಗಮದೇವರಲ್ಲದೆ ಅನ್ಯದೈವವುಂಟೆನ್ನದಿರು, ಕಂಡಾ !
Transliteration Cikkadondu hottage benakana karaḍageyayya, nīḍuṇḍuṭige(?) Goravanayyā. Puṇyavēnādarāgali, ḍakkeya mēle akkiya taḷidenu: Nam'ma kūḍalasaṅgamadēvarallade an'yadaiva uṇṭennadiru, kaṇḍā!
Manuscript
English Translation 2 You, Sir, are a mendicant Who, with a tiny book, a pebble box Will eat and wear whatever is given. Whatever the merit be, I strew Rice on your double-drum. Mark you, do not say there's a god Besies our Lord Kūḍala Saṅgama. Translated by: L M A Menezes, S M Angadi
Hindi Translation छोटी सी पोथी, बिलौर का संपुट लिया शैव भिक्षु दिया हुआ खाता है, पहनता है , पुण्य चाहे कुछ भी हो, मैंने ढ़क्के में चावल डाला कहा, देखो यह मत कहो कि मम कूडलसंगमदेव के अतिरिक्त अन्य कोई देव नहीं है॥ Translated by: Banakara K Gowdappa
Telugu Translation నీవు తప్ప వేరుదైవము కలడన్న వాని నోరు చెంపదాక చీల్పకున్న నా కసి తీరదయ్యా ? నా కోపమారదయ్యా, నా విన్నప మాలింపుమో కూడల సంగమదేవా! Translated by: Dr. Badala Ramaiah
Tamil Translation சிறியதொரு புத்தகம், வினாயகருடன் கூடை ஐயனே நீ பறையினை இசைக்கும் துறவி ஐயனே புண்ணியமாகட்டும் என அதன்மீது அரிசியை இறைத்தேன் நம் கூடல சங்கமதேவனல்லாது வேறு கடவுள் உண்டு எனக் கூறாதிருப்பாய் ஐயனே. Translated by: Smt. Kalyani Venkataraman, Chennai
Marathi Translation लहान एक पोथी आणि गणेश मूर्ती घेऊन देवा. तू मिळेल ते खाणारा पुजारी देवा. पुण्य मिळो अथवा न मिळो, डंका वाजवून सांगतो. कूडलसंगमदेवाविना अन्य देव आहे असे म्हणू नका ! Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಬರುವ ಗೊರವನು ಒಂದು ಕೈಯಲ್ಲಿ ಚಿಕ್ಕದೊಂದು ಹೊತ್ತಗೆಯನ್ನೂ ಬೆನಕನ ಕರಡಗೆ(ಪುಟ್ಟಿ)ಯನ್ನೂ ಹಿಡಿದುಕೊಂಡು –ಇನ್ನೊಂದು ಕೈಯಲ್ಲಿ ಡಮರುಗವನ್ನು ಬಾರಿಸುತ್ತಿದ್ದಾನೆ. ಆ ಡಮರುಗದ ಮೇಲೆ ಬಸವಣ್ಣನವರು ಅಕ್ಕಿಯ ಕಾಳನ್ನು (ಅಕ್ಷತೆಯಾಗಿ) ಎರಚಿ-ಶಿವನಲ್ಲದೆ ಅನ್ಯದೈವವಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ವಚನದಲ್ಲಿ ಪ್ರಸ್ತಾಪಿತವಾಗಿರುವ ಗೊರವನು -ಬೆನಕನನ್ನು ಹಿಡಿದಿದ್ದರೂ. ಆ ವ್ಯಾಜದಿಂದ-ಡಕ್ಕೆಯನ್ನು ಬಾರಿಸುತ್ತ ಹೇಳುತ್ತಿದ್ದುದು ಶಿವಧರ್ಮತತ್ತ್ವಗಳನ್ನೇ ಎಂದು ತಿಳಿಯಬೇಕು. ಢಕ್ಕೆ ಮಾರಯ್ಯನೆಂಬೊಬ್ಬ ಶಿವಶರಣನು ಕೈಯಲ್ಲಿ ಮಾರಿಯನ್ನು ಹಿಡಿದಿದ್ದರೂ ಅವನು ಢಕ್ಕೆಯನ್ನು ಬಾರಿಸಿ ಹೇಳುತ್ತಿದ್ದುದು ಶಿವಧರ್ಮತತ್ತ್ವಗಳೇ ಆಗಿದ್ದವೆಂಬುದು –ಅವನ ವಚನಗಳಿಂದ ನಮಗೀಗ ಖಚಿತವಾಗಿದೆ. “ಗುರುವ”ನೆಂದರೆ ಶ್ರೇಷ್ಠನೆಂಬ ಅರ್ಥದಲ್ಲಿ-ಅದರ ರೂಪಾಂತರವಾದ “ಗೊರವ” ಶಬ್ದವನ್ನು ಶೈವರಂತೆ ಶರಣರೂ ಶಿವನಿಗೆ ಮತ್ತು ಶಿವೋಪಾಸಕರಿಗೆ ಬಳಸುವುದುಂಟು. ಅಕ್ಕನ ಒಂದು ವಚನವನ್ನೂ ನೋಡಿ –“ಅಕ್ಕ ಕೇಳವ್ವ, ಅಕ್ಕಯ್ಯ, ನಾನೊಂದು ಕನಸ ಕಂಡೆ : ಅಕ್ಕಿಯಡಕೆ ಓಲೆ ತೆಂಗಿನ ಕಾಯ ಕಂಡೆ ! ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಬಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ. ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು–ಚೆನ್ನಮಲ್ಲಿಕಾರ್ಜುನಯ್ಯನ ಕಂಡು ಕಣ್ದೆರೆನು” (ಅಕ್ಕನ ವಚನಗಳು-87). ಈ ವಚನದ ಪ್ರಕಾರ ಶರಣಪಂಥದ ಗೊರವರ ವೇಷವೇನಿತ್ತೆಂಬುದನ್ನೂ ಗ್ರಹಿಸಬಹುದು. ವಿ : (1) ಮೈಲಾರಲಿಂಗನ ಭಕ್ತರಾದ ಗೊರವಯ್ಯಗಳಿಗೆ ಎಂತೋ ಅಂತೆಯೇ ಭೈರವನ ಆರಾಧಕರಾದ ಯೋಗಿ-ಜೋಗಿಣಿ ಪಂಥದವರಿಗೂ ಡಮರುಗ ಬಹಳ ಪವಿತ್ರವಾದ ವಾದ್ಯವೇ ಆಗಿದೆ. ಶಂಕರದಾಸಿಮಯ್ಯನು ಪೆಂಬೇರ(ಒಂದು ಪಟ್ಟಣ)ದ ಹೊರವಲಯದಲ್ಲಿದ್ದ ಕೊಡೆಯ ಮೈಲಾರ ದೇವರಿಗೆ ಅನುಗ್ರಹಿಸಿ ಹೊರಟ ಸ್ವಲ್ಪ ದೂರದಲ್ಲೇ ಭೈರವ ದೇವಾಲಯ ಕಾಣಿಸಿತು. ಅಲ್ಲಿ “ಹಿಡಿದ ಡಮರುಗದ ಕಡುವೊಯ್ಲು ಸಂಭ್ರಮಗಳಿಂ | ತಲೆಗೆದರಿ ಅಲಗಿನಿಂದಿರಿದು ಕೊಳುತಿರ್ಪರಿಂ | ಎಸೆದಿರ್ಪ ಭೈರವನ ನೆರವಿ”ಯನ್ನು ಕಾಣುತ್ತಾನೆ (ಶಂಕರ ದಾಸಿಮಯ್ಯನ ರಗಳೆ, ಸ್ಥಲ 3) ಆ ಭೈರವನು ತಲೆಯಲ್ಲಿ ಶಿವಭಾರ(ಶಿವಲಿಂಗ)ವನ್ನು ಧರಿಸಿರುತ್ತಾನೆ. ಕೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾನೆ. (ಡಮರುಗ ಮತ್ತು ಡಕ್ಕೆ –ಎರಡೂ ಪರ್ಯಾಯ ಪದಗಳು) (2) ಬೆನಕ ಮತ್ತು ವಿನಾಯಕನು ಶಿವಪಂಚಾಯತನರಲ್ಲಿ ಒಬ್ಬನೆಂಬುದನ್ನು ನಾವಿಲ್ಲಿ ನೆನೆಯಬೇಕು. ಮತ್ತು ಗಣಪತಿಯ ಆರಾಧಕರಾದ “ಗಾಣಾಪತ್ಯ”ವೆಂಬ ಶೈವಬಗೆಯೂ ಬಹಳ ಪ್ರಸಿದ್ಧವಾದುದೇ ಆಗಿದೆ. ಹೀಗೆ ಬೆನಕನನ್ನು ಹೊತ್ತ ಒಂದು ಗುರುವರ್ಗ ತಮ್ಮ ಮುಂದೆ ಬಂದು ನಿಂತಾಗ ಬಸವಣ್ಣನವರು–ಅವರನ್ನು ಒಂದು ಶೈವಪ್ರಕಾರದವರೆಂಬಷ್ಟು ಕಾರಣದಿಂದ ಗೌರವದಿಂದಲೇ ಕಂಡು–ಅವರ ಕೈಯ ಡಮರುಗದ ಮೇಲೆ ಅಕ್ಷತೆಯನ್ನು ಎರಚಿ ಭಕ್ತಿ ತೋರಿರಬೇಕು. ಇದನ್ನು ಅಬದ್ಧವೆಂದು ಕೆಲವರು ಅಲ್ಲಗೆಳೆ ಯುವುದಾದರೆ ಮತಾಚಾರ್ಯರಿಗಿಂತ ಅವರ ಅನುಯಾಯಿಗಳೇ ತೀರ ಮತೀಯವಾಗಿ ವರ್ತಿಸುತ್ತಿರುವರೆಂಬುದು ಸಿದ್ಧವಾದಂತಾಗುವುದು. (3) ಜಾನಪದ ದೇವತೋಪಾಸಕರಾದ ಶೂದ್ರಾತಿಶೂದ್ರರು ಬಸವಣ್ಣನವರ ಶಿವಧರ್ಮಕ್ಕೆ ಸೇರಿದ ಮೇಲೆ-ಆ ತಮ್ಮ ಮಾರಿ (ಬೆನಕ) ಮುಂತಾದ ದೇವತೆಗಳನ್ನೇ ಹೊಸದೊಂದು ತತ್ತ್ವಕ್ಕೆ ಪ್ರತಿಮೆಯನ್ನಾಗಿ ಮಾಡಿಕೊಂಡು ಶಿವತತ್ತ್ವ ಪ್ರಚಾರಕ್ಕೆ ಬಳಸುತ್ತಿದ್ದರು. ಬಸವಣ್ಣನವರ ಧರ್ಮದ ಸಮರ್ಪಿತ ಪ್ರಚಾರಕರೂ ಈ ನವ್ಯ ಶಿವಭಕ್ತರೇ ಆಗಿದ್ದರೆನ್ನಲಡ್ಡಿಯಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು