ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಏಕದೇವೋಪಾಸನೆ
ಪೃಥಿವಿಯಪ್ಪು, ತೇಜ, ವಾಯುವಾಕಾಶ ನಿರಂಜನದೇವಾ,
ನಿಮ್ಮ ಮಹಿಮೆಯ ಪ್ರಣವಸ್ವರೂಪಂಗಲ್ಲದೆ
ಕಾಣಲಾರಿಗೆಯೂ ಬಾರದಯ್ಯಾ.
ಜ್ಞಾನಜ್ಯೋತಿ ಧ್ಯಾನದಿಂದ ನಾಳಶುದ್ಧ ದ್ವಾರನಾಗಿ
ಆರಾಧಿಸಿ ಕಂಡೆ, ನಮ್ಮ ಕೂಡಲಸಂಗಮದೇವನ.
Transliteration Pr̥thvi, appu, tēja, vāyu, ākāśa, niran̄janadēva,
nim'ma mahimeya praṇavasvarūpaṅgallade
kāṇalārigeyū bāradayyā.
Jñānajyōtidhyānadinda nāḷaśud'dhadvāranāgi
ārādhisi kaṇḍe, nam'ma kūḍalasaṅgamadēvana.
Manuscript
English Translation 2 God undefiled
By earth, fire, water, ether, air,
None can perceive Thy glory but
Those who are embodiments, of the word 'Prāṇava'.
Being the channel's unstained door,
Through meditation on
The light of Knowledge, and through worship done,
I have attained
Lord Kūḍala Saṅgama.
Translated by: L M A Menezes, S M Angadi
Hindi Translation पृथ्वी, आपः, तेज, वायु, आकाश से अलिप्त देव,
प्रणव स्वरूपी के सिवा
तव महिमा कोई देख नहीं पाते ।
ज्ञान-ज्योति के ध्यान से नालशुद्ध द्वार बनकर
आराधना करते मम कूडलसंगमदेव को देखा॥
Translated by: Banakara K Gowdappa
Telugu Translation పృథివ్య ప్తేజో వాయురాకాశములు;
నిరంజన దేవా, నీ మహిమప్రణవ స్వరూపునికి తప్ప
నిక యెవ్వరికీ తెలియ రాదయ్య;
జ్ఞాన జ్యోతి ధ్యానముచే
నాళశుద్ధ ద్వారమునబడి
అర్చించి చూచితి మా కూడల సంగమ దేవుని !
Translated by: Dr. Badala Ramaiah
Tamil Translation நிலம், நீர், தீ, வாயு, ஆகாய, தூய இறைவனே
உம் மகிமையைப் பிரணவ வடிவினனன்றி
வேறு எவராலும் அறியவியலாது ஐயனே.
ஞான ஒளி தியானத்தால் அடைப்பட்ட தூய
நாளத்தால் ஆராதித்துக் கண்டேன்நம்
கூடல சங்கம தேவனை.
Translated by: Smt. Kalyani Venkataraman, Chennai
Marathi Translation
पृथ्वी, आप, तेज, वायू, आकाश, निरंजन देवा.
तुमच्या महिम्याच्या प्रणवस्वरुपाविना जाणू शकत नाही, पाहू शकत नाही.
ज्ञान ज्योतिच्या ध्यानाने नाळशुध्द द्वार होऊन,
आराधना करून मिळविले पहा आमच्या कूडलसंगमदेवाला.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ನಾವು ತಿಂದ ಅನ್ನರಸ ಸಪ್ತಧಾತುಗಳಾಗಿ ಪರಿವರ್ತನೆಗೊಂಡು –ಮಿಕ್ಕಿದ್ದು ವೀರ್ಯವಾಗುವುದೆಂದೂ, ಆ ವೀರ್ಯವು ಗುದಪ್ರದೇಶದ ಆಧಾರಚಕ್ರದಡಿಯಲ್ಲಿ ಸಂಗ್ರಹವಾಗಿದ್ದು –ರತಿಸಂಭೋಗದಲ್ಲಿ ಮತ್ತಿತರ ನಿತ್ಯವ್ಯವಹಾರಗಳಲ್ಲಿ ವ್ಯಯವಾಗುವುದೆಂದೂ–ಆ ವೀರ್ಯಶಕ್ತಿಯನ್ನು ಹಾಗೆ ಅಪವ್ಯಯ ಮಾಡದೆ – ಮೂಲಾಧಾರ ಚಕ್ರದೆಡೆಯೇ ಮುಚ್ಚಿಕೊಂಡಿರುವ ಸುಷುಮ್ನಾ ಎಂಬ ನಾಡಿಯ ದ್ವಾರವನ್ನು ತೆರವು ಮಾಡಿ ಆ ಮೂಲಕ (ಆ ವೀರ್ಯಶಕ್ತಿಯನ್ನು) ಉನ್ಮುಖವಾಗಿ ಹರಿಯಬಿಟ್ಟರೆ ಅದು ಕುಂಡಲಿನೀ(ಪ್ರಾಣ)ಶಕ್ತಿಯಾಗಿ –ಗುದ ಮತ್ತು ಶಿಶ್ನಸ್ಥಾನಗಳಲ್ಲಿರುವ ಆಧಾರ ಮತ್ತು ಸ್ವಾಧಿಷ್ಠಾನವೆಂಬ, ನಾಭಿ ಮತ್ತು ಹೃದಯ ಸ್ಥಾನಗಳಲ್ಲಿರುವ ಮಣಿಪೂರಕ ಮತ್ತು ಅನಾಹತವೆಂಬ, ತಾಲು ಮತ್ತು ಭ್ರೂಮಧ್ಯಸ್ಥಾನಗಳಲ್ಲಿರುವ ವಿಶುದ್ಧ ಮತ್ತು ಆಜ್ಞೇಯವೆಂಬ ಚಕ್ರಗಳೊಳಗಿಂದ ನುಗ್ಗಿ ನೆತ್ತಿಯ ಸ್ಥಾನದಲ್ಲಿರುವ ಸಹಸ್ರಾರವೆಂಬ ಚಕ್ರವನ್ನು ತಲುಪುವುದು. ಆಗ ಜೀವನು ಸಂಸಾರ ಶೃಂಖಲೆಯಿಂದ ಬಿಡಿಸಿಕೊಂಡು ಸರ್ವಜ್ಞನೂ ಸರ್ವಶಕ್ತನೂ ಸರ್ವ ವ್ಯಾಪಿಯೂ ಆಗಿ ಕೇವಲ ಸಚ್ಚಿದಾನಂದಸ್ವರೂಪಿಯೇ ಆಗುವನೆಂಬುದು ಯೋಗಿಗಳ ಮಾತು.
ಈ ನಿರಂಜನ ಸ್ಥಿತಿಯನ್ನು ತಲುಪಲು ಪ್ರಾಥಮಿಕವಾಗಿ ಇಡಾ –ಪಿಂಡಗಳೆಂಬ ಎರಡು ನಾಡಿಗಳಲ್ಲಿ ಸೋರಿಹೋಗುತ್ತಿರುವ ಪ್ರಾಣಶಕ್ತಿಯನ್ನು ಬೆನ್ನುಹುರಿಯ ನಡುವಿರುವ ಸುಷುಮ್ನಾನಾಡಿಯ ಮೂಲಕ ಉನ್ಮುಖವಾಗಿ ಹರಿಯ ಬಿಡುವ ಸಿದ್ಧತೆಯನ್ನೇ “ನಾಳಶುದ್ಧದ್ವಾರನಾಗಿ” ಎಂಬ ಮಾತಿನಿಂದ ಬಸವಣ್ಣನವರು ಸೂಚಿಸುತ್ತಿರುವರು.
ಮತ್ತು ವಚನದಲ್ಲಿರುವ ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಪಂಚಭೂತವಾಚೀ ಪದಗಳನ್ನು ಕೆಳಗಿಂದ ಮೇಲಕ್ಕೆ –ಕ್ರಮವಾಗಿ ಆಧಾರ-ಸ್ವಾಧಿಷ್ಠಾನ –ಮಣಿಪೂರಕ –ಅನಾಹತ –ವಿಶುದ್ಧವೆಂಬ ಪಂಚಕ್ರಗಳಿಗೂ, ನಿರಂಜನವೆಂಬ ಪದವನ್ನು ಸಹಸ್ರಾರದ ನೆರೆಹೊರೆಯ ಭ್ರೂಮಧ್ಯಸ್ಥಾನದ ಆಜ್ಞಾಚಕ್ರಕ್ಕೂ ಪ್ರಾತಿನಿಧಿಕವಾಗಿ ಬಳಸಲಾಗಿದೆ.
ಹೀಗೆ ಆಧಾರದಿಂದ ಹಿಡಿದು ಸಹಸ್ರಾರದವರೆಗಿನ ಪ್ರಾಣಶಕ್ತಿಯ ದಿವ್ಯಸಂಚಾರವನ್ನು -ಶರಣರು ಶಕ್ತಿಯಿಂದ ಭಕ್ತಿಗೂ, ಭಕ್ತಿಯಿಂದ ಮುಕ್ತಿಗೂ ಸಲ್ಲುವ ಭಕ್ತಿಯೋಗದೊಡನೆ ಸಮೀಕರಿಸಿರುವರು : “ಶಕ್ತಿಯೆಡೆ ಗುದ-ಲಿಂಗ, ಅಂತಾ | ಭಕ್ತಿಯೆಡೆಯಾ ನಾಭಿ - ಹೃದಯವು | ಮುಕ್ತಿಯೆಡೆಯಾ ಹುಬ್ಬುಗಳದು ನಿಮಿತ್ತದಲಿ | ಶಕ್ತಿಯಲಿ ಸಂಪನ್ನನಾಗಿಯೆ | ಭಕ್ತಿಯಲಿ ಭಾವಜ್ಞನಾದೊಡೆ | ಮುಕ್ತಿಯೆಂಬುದು ಮುಂದೆ ನಿಲುವುದು” ಎಂದು ಹೇಳಲಾಗಿದೆ (ಪ್ರ.ಲಿಂ.ಲೀಲೆ 17-30)
ಶರಣಧರ್ಮದ ಪರಿಭಾಷೆಯಲ್ಲಿ ಭಕ್ತನಾಗುವುದೆಂದರೂ, ಪಾತಂಜಲಯೋಗ ಪರಿಭಾಷೆಯಲ್ಲಿ ಯೋಗಿಯಾಗುವುದೆಂದರೂ ಆತ್ಯಂತಿಕವಾಗಿ ಒಂದೇ ಆಗಿದೆ : “ಬಿಂದುವಸ್ತುವ ಗುರು(ಆಧಾರಸ್ವಾಧಿಷ್ಠಾನ) ಮುಖಾಗ್ನಿಗೆ ತಂದು ಪಚನಿಸಿ, ಜಂಗಮ(ಮಣಿಪೂರಕ ಅನಾಹತ)ದ ಮುಖದಿಂದ ಲಿಂಗ(ವಿಶುದ್ಧ ಆಜ್ಞೇಯ)ಕೆ ನೀಡಿ, ತನ್ಮುಖದಿಂದಲೊಕ್ಕುಳಿದ | ಸಂದ ಸುಧೆಯೆನಿಪಾ ಪ್ರಸಾದವ | ನೊಂದು ಮನಸಿನಲುಂಡು ಪರಮಾ | ನಂದವನು ಪಡೆದವನೆ ಭಕ್ತನು” (ಅದೇ 7-27).
ಪ್ರಾಣಾಯಾಮಾದಿಗಳಿಂದ ಹೇಗೋ ಹಾಗೆ –ತೀವ್ರ ಭಕ್ತಿಭಾವನೆಯಿಂದಲೂ, (ಅಷ್ಟೇ ಏಕೆ ನಿರ್ಭರ ಪ್ರೇಮ ಭಾವನೆಯಿಂದಲೂ) ಸುಷುಮ್ನೆಯ ದ್ವಾರ ತೆರೆದುಕೊಳ್ಳುವುದೆಂದು ಅನುಭಾವಿಗಳು ಅಭಿಪ್ರಾಯಪಡುವರು.
ಹೀಗೆ ತೆರೆದುಕೊಂಡ ಸುಷುಮ್ನಾನಾಡಿಯೆಂಬ ಗುಹಾದ್ವಾರದುದ್ದಕ್ಕೂ ಪೇರಿಸಿರುವ ಷಟ್ಚಕ್ರಗಳನ್ನು ಭೇದಿಸಿಕೊಂಡು ಪಯಣಿಸಿ ಸಹಸ್ರಾರದ ಶಿಖರದಲ್ಲಿ ಜ್ಞಾನಜ್ಯೋತಿಯ ಬೆಳಗಿನಲ್ಲಿ ಕೂಡಲ ಸಂಗಮ ದೇವನನ್ನು ಕಂಡಂತೆ ಬಸವಣ್ಣನವರು ಈ ವಚನದಲ್ಲಿ ವರ್ಣಿಸಿರುವರು –ಉಚಿತ ಸಂಕೇತ ಭಾಷೆಯಲ್ಲಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು