ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ - ಲಿಂಗಜಂಗಮ
ಗುರುವಿನಲ್ಲಿ ಸದಾಚಾರ: ಲಿಂಗದಲ್ಲಿ ಅನುದಿನ ವೇಳೆ.
ಜಂಗಮದಲ್ಲನುಭಾವ, ಸಮಯಾಚಾರ:
ಲಿಂಗದಲ್ಲಿ ಅನುದಿನ ವೇಳೆ.
ಈ ಉಭಯಾಚಾರದಿಂದ ತಿಳಿದ ತಿಳಿವು: ಲಿಂಗದಲ್ಲಿ ಅನುದಿನ ವೇಳೆ;
ಬೇರೆ ತೋರಲಿಲ್ಲಾ:
ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ.
ಇದು ಕಾರಣ, ಕೂಡಲಸಂಗಮದೇವಾ, ಲಿಂಗದಲ್ಲಿ ಅನುದಿನ ವೇಳೆ!
Transliteration Guruvinalli sadācāra: Liṅgadalli anudina vēḷe.
Jaṅgamadallanubhāva, samayācāra:
Liṅgadalli anudina vēḷe.
Ī ubhayācāradinda tiḷida tiḷivu: Liṅgadalli anudina vēḷe;
bēre tōralilla:
Liṅgajaṅgamadalli līyavādācāra samayācāra.
Idu kāraṇa, kūḍalasaṅgamadēvā, liṅgadalli anudina vēḷe!
Manuscript
English Translation 2 Right conduct in the Guru is time
Spent daily for Liṅga ;
Experience in Jaṅgama
And service of the Faith is time
Spent daily for Liṅga ;
The knowledge growing from
The understanding of these two is time
Spent daily for Liṅga :
Nought else is seen.
To be absorbed in Liṅga and Jaṅgama
Is service of the Faith.
Therefore, O Kūḍala Saṅgama Lord,
It's time
Spent daily for Liṅga .
Translated by: L M A Menezes, S M Angadi
Hindi Translation गुरु के प्रति सदाचार, अनुदिन लिंगार्थ दर्शित भक्ति है
जंगम अनुभाव और समयाचार अनुदिन लिंगार्थ अर्पित समय है;
इन उभयाचारों से प्राप्त ज्ञान अनुदिन लिंगार्थ अर्पित समय है;
लिंग जंगम में लीन समयाचार कुछ और नहीं है,
अतः कूडलसंगमदेव, वह अनुदिन लिंगार्थ अर्पित समय है ॥
Translated by: Banakara K Gowdappa
Telugu Translation గురువున సదాచారము, లింగ మందనుదిన మొప్పు
గురుని యందున్న సదాచారము
లింగ మందనుదినమొప్పు;
జంగమమున కల అనుభావము
సమయాచారము: లింగ మందనుదిన మొప్పు;
నీ రెండిరటి నెఱుగు; ఎఱుక
లింగమందనుదినమొప్పు
వేఱె తోచదు; లింగ జంగముల
లీయమగు సమయాచారము
కాన కూడల సంగదేవ;
లింగ మందనుదినముండవలె!
Translated by: Dr. Badala Ramaiah
Tamil Translation குருவிற்குத் தொண்டாற்றுதல் நன்னெறி
இலிங்கத்திற்கு நாள்தோறும் தன்னை
அர்ப்பித்தல் வேண்டும். ஜங்கமரை உணர
வேண்டும். இதுதான் சிவாசாரமாம்
இவ்விரு நெறிகளை உணர்ந்த அறிவு
இதனை நாள்தோறும் அர்ப்பிக்க வேணும்
இலிங்க ஜங்கமத்துடன் இணைந்தது
சிவரசாரம் எனவே கூடல சங்கனே
நாள்தோறும் இலிங்கத்திற்கு
அர்ப்பிக்க வேண்டும் ஐயனே.
Translated by: Smt. Kalyani Venkataraman, Chennai
Marathi Translation
गुरुविषयी सदाचार हीच लिंगोपासना आहे.
जंगमाविषयी केलेला समयाचार ही लिंगोपासना,
या उभायाचारातून मिळालेले ज्ञान ही लिंगोपासना.
दुसरे काहीही नाही म्हणून लिंग जंगमातील समरस झालेला समयाचार
ही लिंगोपासना आहे कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ವಚನ ವಿನ್ಯಾಸ : (1) ಗುರುವಿನಲ್ಲಿ (ಸೇವೆಯೇ) ಸದಾಚಾರ. (ಅದರೊಟ್ಟಿಗೇ) ಲಿಂಗದಲ್ಲಿ ಅನುದಿನ ವೇಳೆ. (2) ಜಂಗಮದಲ್ಲಿ ಅನುಭಾವ(ಪ್ರಸಂಗವೇ) ಸಮಯಾಚಾರ. (ಅದರೊಟ್ಟಿಗೇ) ಲಿಂಗದಲ್ಲಿ ಅನುದಿನ ವೇಳೆ, (1+2=3) (ಸದಾಚಾರ ಮತ್ತು ಸಮಯಾಚಾರವೆಂಬ) ಈ ಉಭಯಾಚಾರದಿಂದ ತಿಳಿದ(ದ್ದೇ) (ಶಿವಯೋಗದ) ತಿಳಿವು. (ಆ ಯೋಗದೊಟ್ಟಿಗೇ) ಲಿಂಗದಲ್ಲಿ ಅನುದಿನ ವೇಳೆ. ಈ ಪ್ರಾಣಲಿಂಗ ಮತ್ತು ಜಂಗಮಲಿಂಗವೆರಡನ್ನೂ ಬಿಟ್ಟು ಸಮಯಾಚಾರ(ಧಾರ್ಮಿಕ ವಿಶಿಷ್ಟ ಆಚಾರ)ವೇ ಇಲ್ಲ. ಆದ್ದರಿಂದಲೇ ಇಷ್ಟಲಿಂಗಪೂಜೆ ಅನುದಿನ ನಡೆಯಬೇಕು. (ಇಷ್ಟಲಿಂಗವನ್ನೇ ಯೌಗಿಕವಾಗಿ ಪ್ರಾಣವೆಂದು ಕರೆಯಲಾಗಿದೆ ಶರಣಧರ್ಮದಲ್ಲಿ.)
ವಿವರ : ಲಿಂಗಪೂಜೆಯನ್ನು ಬಿಡದೆ ಗುರುವಿನಲ್ಲಿ ಸದಾಚಾರ ಮಾಡಬೇಕು. ಲಿಂಗಪೂಜೆಯನ್ನು ಬಿಡದೆ ಜಂಗಮದಲ್ಲಿ ಅನುಭಾವ (ಪ್ರಸಂಗವೆಂಬ) ಸಮಯಾಚಾರ ಮಾಡಬೇಕು. ಹೀಗೆ ಮಾಡಿದ ಸದಾಚಾರದಿಂದ ಮತ್ತು ಸಮಯಾಚಾರದಿಂದ ಉದಿಸಿದ ಜ್ಞಾನವು ಸಂಪನ್ನವಾಗುವುದು ಲಿಂಗದಲ್ಲಿ ಮಾಡಿದ ಅನುದಿನ ವೇಳೆಯಿಂದ. ಹೀಗಲ್ಲದೆ (ಗುರುವಿನ ಸಂಬಂಧವಾದ ಸದಾಚಾರವಾಗಲಿ) ಚರಲಿಂಗಸ್ವರೂಪಿಯಾದ ಜಂಗಮದ ಸಂಬಂಧವಾದ ಸಮಾಯಾಚಾರವಾಗಲಿ ಲಭ್ಯವಾಗುವುದಿಲ್ಲ. ಆದ್ದರಿಂದ ಲಿಂಗದಲ್ಲಿ ಅನುದಿನವೇಳೆ(ನಿತ್ಯಪೂಜೆ) ಅನುಲ್ಲಂಘನೀಯವಾಗಿದೆ.
ತಾತ್ಪರ್ಯ : ಗುರುವು ಭಕ್ತನ ಸೇವೆಯನ್ನು ಕೈಗೊಳ್ಳುವುದು –ಆ ಭಕ್ತನು ಲಿಂಗೋಪಾಸಕನಾಗಿದ್ದರೇನೇ. ಜಂಗಮವು ಭಕ್ತನೊಡನೆ ಅನುಭಾವಪ್ರಸಂಗ ಮಾಡುವುದು –ಆ ಭಕ್ತನು(ಪ್ರಾಣ)ಲಿಂಗೋಪಾಸನೆಯಲ್ಲಿ ತೊಡಗಲೆಂದು ಅಥವಾ ತೊಡಗಿದ್ದರೇನೆ. ಆದ್ದರಿಂದ ಭಕ್ತನಿಗೆ ಲಿಂಗದ ಉಪಾಸನೆಯೆಂಬುದು ಅಗತ್ಯ. ಈ ಇಷ್ಟಲಿಂಗವು ಪ್ರಾಣಲಿಂಗವಾಗಿ –ಆ ಪ್ರಾಣಲಿಂಗವು ಸಹಸ್ರಾರ ಸಿಂಹಾಸನದಲ್ಲಿ ಪ್ರತಿಷ್ಠಿಸಲ್ಪಟ್ಟರೆ-ಸಾಧಕನಿಗೆ ಅದು ಅಮೃತಪ್ರಸಾದವನ್ನು ಅಭವಪ್ರಸಾದವನ್ನು ಆನಂದಪ್ರಸಾದವನ್ನು ಆ ಮೂಲಕ ಸಮರಸಪ್ರಸಾದವನ್ನು ಕರುಣಿಸುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು