ಶರಣನ ಐಕ್ಯಸ್ಥಲ - ಶರಣಸತಿ-ಲಿಂಗಪತಿ
ಅಳಿಯನ ಕಂಡರೆ ನಾಚೆಂಬೆ, ಮಗಳೆ,
ಅಳಿಯನ ಕಂಡರೆ ತೊಲಗೆಂಬೆ ಮಗಳೇ,
ನಾಚುವರೆ ಮೊರೆಯಿಲ್ಲ, ತೊಲಗುವರೆ ನೆಲನಿಲ್ಲ!
ಇಬ್ಬರಿಗೊಬ್ಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೊರೆ ಮಗಳೇ?
ಕೂಡಲಸಂಗಮದೇವಯ್ಯನೆಂಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೊರೆ, ಮಗಳೇ?
Transliteration Aḷiyana kaṇḍare nācembe, magaḷu,
aḷiyana kaṇḍare tolagembe magaḷē,
nācuvare moreyilla, tolaguvare nelanilla!
Ibbarigobba gaṇḍanāda baḷika
innelliya more magaḷē?
Kūḍalasaṅgamadēvayyanemba gaṇḍanāda baḷika
innelliya mōre, magaḷē?
Manuscript
English Translation 2 Daughter, I say you ought to blush
Whenever you see my son-in-law;
Daughter, I say you ought to move aside
Whenever you see my son-in-law,
But there's no screen to blush behind
No place where you can slip away!
When both of us have but one lord,
Where, then, my daughter, is the screen?
When you have espoused Lord Kūḍala Saṅgama,
Where, then, my daughter, is the screen?
Translated by: L M A Menezes, S M Angadi
Hindi Translation बेटी, दामाद को देखने पर लजाने केलिए कहती हूँ,
बेटी, दामाद को देखने पर हट जाने के लिए कहती हूँ,
लज्जित होना हो, तो परदा नहीं,
हट जाना हो, तो स्थान नहीं,
दोनों के जब एक पति हैं, परदा कैसे बेटी?
कूडलसंगमदेव नामक पति के मिलने के बाद
कहाँ का परदा बेटी?
Translated by: Banakara K Gowdappa
Telugu Translation అల్లుని చూచిన సిగ్గంటివి గదవే
అల్లుని చూచిన తొలగుమంటివి కదవే?
సిగ్గుపడ మఱుగులేదు; తొలగ చోటులేదు;
ఇద్దరి కొకడే మగడైన వెనుక మఱి యెక్కడి మఱుగే తనయా!
సంగడే మగడైన వెనుక మఱి యెక్కడి మఱుగే తనయా!
Translated by: Dr. Badala Ramaiah
Marathi Translation
जावयाला पाहून लजित हो म्हणते मुलगी,
जावयाला पाहून आत जा म्हणते मुलीला,
लाजायची गरज नाही, दूर राहण्यास जागा नाही.
दोघींना एकच पती झाल्यावर लाज कसली मुली?
कूडलसंगमदेवरुपी पती झाल्यावर लाज कसली मुली ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಅಳಿಯನ ಸಂಬಂಧವಾಗಿ ತಾಯಿಮಗಳ (ಶಿವನ ಹೆಂಡತಿಯಾದ ಜ್ಞಾನಶಕ್ತಿ ಮತ್ತು ಅವಳ ಮಗಳಾದ ಕ್ರಿಯಾಶಕ್ತಿ) ನಡುವೆ ನಡೆದ ಮಾತಿನ ಸರಣಿಯಲ್ಲಿದೆ ಈ ವಚನ.
ಶಿವ+ಜ್ಞಾನಶಕ್ತಿ (ಶಿವಶರಣನ ಅತ್ತೆ)
ಶಿವಶರಣ+ಕ್ರಿಯಾಶಕ್ತಿ (ಜ್ಞಾನಶಕ್ತಿಯ ಮಗಳು)
ಲೌಕಿಕದಲ್ಲಿ ಅಳಿಯನನ್ನು ಕಂಡರೆ ಅತ್ತೆ ನಾಚುವುದೂ ಅವನಿರುವಲ್ಲಿಂದ ದೂರ ಸರಿಯುವುದೂ ಸದ್ವರ್ತನೆಯೇ ಸರಿ–ಆದರೆ ಅಲೌಕಿಕ ಅತ್ತೆ ಸೊಸೆ ಅಳಿಯರಾದ ಜ್ಞಾನಶಕ್ತಿ ಕ್ರಿಯಾಶಕ್ತಿ ಮತ್ತು ಶಿವಶರಣ ಇವರು ವಿಪರೀತಸಂಬಂಧದವರು. ಶರಣನು ಜ್ಞಾನಶಕ್ತಿಯ ಮಗಳಾದ ಕ್ರಿಯಾಶಕ್ತಿಗೆ ಪತಿಯಾಗಿ ಆ ಜ್ಞಾನ ಶಕ್ತಿಗೆ ಅಳಿಯನಾದರೂ–ಅವನು ಶಿವಸ್ವರೂಪಿಯೇ ಆಗಿ ಆ ಶಿವನ ಹೆಂಡತಿಯಾದ ಜ್ಞಾನಶಕ್ತಿಗೂ ಪತಿಯೇ ಆಗುವನು. ಅಂದಮೇಲೆ ಪತ್ನಿ(ಯೂ) ಆದ ಜ್ಞಾನಶಕ್ತಿ ಆ ಶರಣನನ್ನು ಕಂಡು ನಾಚುವುದೆಲ್ಲಿ–ವಿಶ್ವಂಭರನಾದ ಅವನನ್ನು ಬಿಟ್ಟು ತೊಲಗುವುದೆಲ್ಲಿಗೆ ? ಈ ಪ್ರಕಾರವಾಗಿ ಕುತೂಹಲಕಾರಿಯಾದೊಂದು ಬೆಡಗಿನ ವಚನವಿದು. ಇದರ ಬೆಡಗಿನಲ್ಲಿ ಲೋಕವೈರುಧ್ಯ ಅಡಕವಾಗಿದ್ದರೂ ಅಲ್ಲಿ ಭೀಭತ್ಸದ ಲವಲೇಶವಾದರೂ ಇಲ್ಲದಿರುವುದು ಈ ಬೆಡಗಿನ ನಿಷ್ಕಳಂಕ ಪರಿಯೇ ಆಗಿದೆ.
ವಿ : ಶಿವಶರಣನಾದವನು ದಾಸೋಹಾದಿ ಕ್ರಿಯೆಗಳಲ್ಲಿ ತೊಡಗಿರುವನಾದರೂ ಅವನು(ಶಿವಯೋಗಾದಿ)ಜ್ಞಾನಮಾರ್ಗದಿಂದ ದೂರ ಸರಿಯಲಾರ. ಅಂದರೆ ಶರಣನು ಜೀವನ್ಮುಕ್ತ ಘಟ್ಟದವನೇ ಆಗಿರುವ ಮಾತ್ರಕ್ಕೇ ಕೇವಲ ಜ್ಞಾನಮಾರ್ಗಿಯಾಗಿರದೆ ಲೋಕಕಲ್ಯಾಣಕ್ಕಾಗಿ ಏನಾದರೊಂದು ಪತಿತೋದ್ಧರಣಕಾರ್ಯದಲ್ಲಿ ತೊಡಗಿರಬೇಕು. ಶರಣಧರ್ಮದಲ್ಲಿ ಈ ಕರ್ಮಜ್ಞಾನಗಳ ಪರಸ್ಪರ ಸಮನ್ವಯ ಈಪ್ಸಿತವೇ ಹೊರತು ಅವು ಪರಸ್ಪರ ದೂರಸ್ಥಲವಲ್ಲವೆಂಬುದು ಈ ವಚನದ ಮಥಿತಾರ್ಥ.
ವೈದಿಕರಂತೆ ಕೇವಲ ಕರ್ಮಗಳಿಗೇ ಆಗಲಿ, ವೇದಾಂತಿಗಳಂತೆ ಕೇವಲ ಜ್ಞಾನಕ್ಕೇ ಆಗಲಿ ಪ್ರಾಶಸ್ತ್ಯವನ್ನು ಹೇಳಲಾಗದು ಬಸವಣ್ಣನವರ ಧರ್ಮದಲ್ಲಿ. ಎರಡರ ಸಮರಸ ಸುಗಮವೇ ಆಗಿರುವುದು ಅವರ ಶಿವಪಥ.
ಶಿವಸ್ವರೂಪಿಯಾದ ಶರಣನು ಕರ್ಮ(ಕ್ರಿಯಾ)ಮತ್ತು ಜ್ಞಾನಗಳೆರಡರ ಪಾಣಿಗ್ರಹಣಮಾಡಿಕೊಂಡವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು