•  
  •  
  •  
  •  
Index   ವಚನ - 934    Search  
 
ಐಕ್ಯನ ಐಕ್ಯಸ್ಥಲ - ಶಿವನಾಮ
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ ಸಲಿಗೆವಂತರಾಗಿ ಒಳಗೆ ಐದಾರೆ. ಆನು, ದೇವಾ, ಹೊರಗಳವನು: `ಸಂಬೋಳಿ, ಸಂಬೋಳಿ' ಎನುತ್ತ ಇಂಬಿನಲ್ಲಿ ಇದ್ದೇನೆ! ಕೂಡಲಸಂಗಮದೇವಾ ನಿಮ್ಮ ನಾಮವಿಡಿದ ಅನಾಮಿಕ ನಾನು!
Transliteration Liṅgārcaneya māḍuva mahimarellarū saligevantarāgi oḷage aidāre. Ānu, dēvā, horagaḷavanu: `Sambōḷi, sambōḷi' enutta imbinalli iddēne! Kūḍalasaṅgamadēvā nim'ma nāmaviḍida anāmika nānu!
Manuscript
English Translation 2 All the great ones who worship Liṅga, Becoming as if familiar, come in: I'm an outsider, Lord! I keep away, saying, Beware, Beware! O Kūḍala Saṅgama Lord, I am A nameless one to take Thy name! Translated by: L M A Menezes, S M Angadi
Hindi Translation लिंगार्चन करनेवाले सभी महिमावान परिचय के कारण भीतर आसीन हैं । मैं बाहर का हूँ, देव संभालो कहता हुआ दूर खडा हूँ कूडलसंगमदेव का तव नाम लेनेवाला अनामिक हूँ मैं॥ Translated by: Banakara K Gowdappa
Telugu Translation లింగార్చన సేయు మహాత్ములుందరూ చనువుతో లోనుండిరి దేవా! నేను వెలివాడను! సంభోళి సంభోళియంచు దూరదూరముగనే యుంటినయ్యా నేను నీ పేరును పట్టుకొన్న అనామికుడ నయ్యా! Translated by: Dr. Badala Ramaiah
Marathi Translation लिंगार्चना करणाऱ्या समस्त महानुभावीनी सहजपणे आत प्रवेश केला. मी देवा बाहेरचा राहिलो. `संभाळा, संभाळा` म्हणत तसाच राहिलो, कूडलसंगमदेवा, तुमचे नामस्मरण करणारा अनामिक मी. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ತಮ್ಮ (ಮಹಾ) ಮನೆಗೆ ಬಂದವರು ಬಿಟ್ಟ ಎಕ್ಕಡಗಳನ್ನು ಕಾಯ್ದುಕೊಂಡು ಬಸವಣ್ಣನವರು ತಮ್ಮ ದಾಸೋಹಂ ತತ್ತ್ವಕ್ಕೆ ಅನುಸಾರವಾಗಿ ಕೈಂಕರ್ಯದಿಂದ ಅಸ್ಪೃಶ್ಯರಂತೆ ಹೊರಗೆ ನಿಂತಿದ್ದಾರೆ. ಒಳಗಡೆ ಮಾದಾರ ಚೆನ್ನಯ್ಯ ಡೋಹಾರ ಕಕ್ಕಯ್ಯ ಮುಂತಾದವರ ಸಂತತಿಯ ಶರಣರು ಲಿಂಗಾರ್ಚನೆಯಲ್ಲಿ ಮಗ್ನರಾಗಿದ್ದಾರೆ. ಅವರೆಲ್ಲ ಮಹಿಮಾನ್ವಿತರೆಂಬ ಶೈವಾಭಿಮಾನ. ತಾನೊಬ್ಬ ಯಃಕಶ್ಚಿತ್ ವ್ಯಕ್ತಿಯೆಂಬ ನಿರಹಂಭಾವ ಬಸವಣ್ಣನವರದು. ತನ್ನ ಮನೆಯಲ್ಲಿ ತಾನೊಬ್ಬ ಅನ್ಯನಾಗಿ -ಭಕ್ತಜನ ಸಾಮಾನ್ಯರೆಲ್ಲಾ ಮಹನೀಯರಾಗಿ –ಚಾಳುಕ್ಯ ಚಕ್ರಾಧಿಪತ್ಯದಲ್ಲಿ ಒಬ್ಬ ಸಕ್ರಿಯ ಮಂತ್ರಿಯಾಗಿದ್ದ ಬಸವಣ್ಣನವರಿಗೆ ಕಂಡುದು ಒಂದು “ಅಲೌಕಿಕ ದರ್ಶನ.” ಎಲ್ಲಿಯೂ ತಾನಿಲ್ಲವಾಗಿ –ಎಲ್ಲವೂ ಶಿವಮಯವಾಗಿ ಪರಿಭಾವಿಸಿದ ಬಸವಣ್ಣನವರು ತಮ್ಮನ್ನೊಬ್ಬ “ಅನಾಮಿಕ” (ಅಂದರೆ ಹೆಸರು ಹಿಡಿದು ಕೂಗಬಾರದಷ್ಟು ನಿಕೃಷ್ಟನಾದ ಅಸ್ಪೃಶ್ಯ)ನೆಂದು ಉಗ್ಘಡಿಸಿಕೊಳ್ಳುವಲ್ಲಿರುವ ಮಾನವಗೌರವ ಪ್ರತಿಪಾದನೆಯನ್ನು ಇಂದಿನ ಮತ್ತು ಮುಂದೆ ಬರಲಿರುವ ಪ್ರಜಾಪ್ರಭುತ್ವದ ಜನಾಂಗಗಳು ಗುರುತಿಸಿಕೊಳ್ಳಬೇಕು. ಪ್ರಜಾಪ್ರಭುತ್ವವೆಂದರೆ ಒಬ್ಬ ಪ್ರಜೆಯು ಇನ್ನೊಬ್ಬ ಪ್ರಜೆಯ ಮೇಲೆ ಮಾಡುವ ಪ್ರಭುತ್ವವಲ್ಲ –ಒಬ್ಬ ಪ್ರಜೆಗೆ ಇನ್ನೊಬ್ಬ ಪ್ರಜೆ ತೋರುವ ಸೇವೆಯ ಮನೋಭಾವ. ಆತ್ಮನಿರಾಕರಣದಲ್ಲೇ ಅನುಭವಿಸಿದ ಆತ್ಮಾನುಭೂತಿಯಿಂದ ಬಸವಣ್ಣನವರು ಶಿವಾನುಭಾವಕ್ಕೆ ಹೊಸ ಆಯಾಮವೊಂದನ್ನು ಸಂಪಾದಿಸಿಕೊಟ್ಟರು. ಅಹಂಕಾರದ ಹಜ್ಜೆಯೊತ್ತಲಾರದ ಅತೀತದಲ್ಲಲ್ಲವೇ ಶಿವನಿರುವುದು ?! ವಿ : ಅಸ್ಪೃಶ್ಯನೊಬ್ಬನು ಶಿಷ್ಟರ ಕೇರಿಗಳಲ್ಲಿ ನಡೆಯುವಾಗ –ತನ್ನನ್ನು ಮುಟ್ಟಿಸಿಕೊಂಡು ಮೈಲಿಗೆಯಾಗದಿರುವಂತೆ ಎಚ್ಚರಿಸಲೋಸುಗ ಉಚ್ಚರಿಸಬೇಕಿದ್ದ ಒಂದು ಆರ್ತನಾದ “ಸಂಬೋಳಿ.”

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು