ಐಕ್ಯನ ಪ್ರಸಾದಿಸ್ಥಲ - ಭವಿ-ಭಕ್ತ
ಹುಸಿಯಿಂದೆ ಜನಿಸಿದೆನಯ್ಯಾ ಮರ್ತ್ಯಲೋಕದೊಳಯಿಂಕೆ.
ಹುಸಿಯಿಂದಲಿ ಲಿಂಗವ ಹೆಸರುಗೊಂಡು ಕರೆದೆನಯ್ಯಾ,
ಅದು ಎನಗೆ ಭಾವವೂ ಅಲ್ಲ, ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯಾ;
ಅದರವಯವಂಗಳೆಲ್ಲವೂ ಜಂಗಮವಯ್ಯಾ.
ಅದಕ್ಕೆ ಎನ್ನಲ್ಲುಳ್ಳ ಸಯಿದಾನವ ಮಾಡಿ ನೀಡಿದೆನಯ್ಯಾ:
ಆ ಪ್ರಸಾದಕ್ಕೆ ಶರಣೆಂದೆನಯ್ಯಾ.
ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲಾ!
ಆ ಪ್ರಸಾದದಲ್ಲಿ ನಾನೇ ತದ್ಗತನಾದೆ, ಕಾಣಾ,
ಕೂಡಲಸಂಗಮದೇವಾ.
Transliteration Husiyinde janisidenayyā martyalōkadoḷayiṅke.
Husiyindali liṅgava hesarugoṇḍu karedenayyā,
adu enage bhāvavū alla, nirbhāvavū allade nindittayyā;
adara avayavaṅgaḷellavū jaṅgamavayyā.
Adakke ennaluḷḷa sāyidānava māḍi koṭṭanayyā:
Ā prasādakke śaraṇendenayyā.
Adu sāravū alla, nis'sāravū alla!
Ā prasādadalli nānē tadgatanāde, kāṇā,
kūḍalasaṅgamadēvā.
Manuscript
English Translation 2 Upon this mortal world, O Lord,
Through error was I born,
Through error did I call by name
Liṅga, who is for me
No presence nor yet absence of a thought
And yet exists; whose every part
Is Jaṅgama ;
For him I cooked and served the food I have;
To this Prasāda I say Hail;
It's neither sweet nor lacking taste!
In that Prasáda have I merged,
Mark that, O Kūḍala Saṅgama Lord!
Translated by: L M A Menezes, S M Angadi
Hindi Translation भूल से मर्त्यलोक में मैंने जन्म लिया,
भूल से लिंग को नाम से पुकारा,
वह मुझमें न भाव-युक्त रहा, न भाव-मुक्त,
उसके सभी अंग जंगम हैं ।
अपने पास की सामग्री पकाकर उसे परोसा;
उस प्रसाद को प्रणाम किया;
वह न सार है, न निस्सार
उस प्रसाद में मैं ही तद्गत हुआ ।
कूडलसंगमदेव ॥
Translated by: Banakara K Gowdappa
Telugu Translation పుసిచే పుట్టితి మర్త్యమున, పుసిచే లింగము పేరు పిల్చితి
అది నాకు భావమూ గాక నిర్భావమూ గాక నిల్చెనయ్యా!
వారి అంగము లెల్ల జంగమము, వానికి నా సామగ్రినెల్ల నిత్తు .
వారి ప్రసాదమునకు శరణందు, సారమూ కాదది నిస్సారము కాదు
ఆ ప్రసాదముననే అంతర్గతుడై పోతినయ్యా! సంగయ్యా!
Translated by: Dr. Badala Ramaiah
Marathi Translation
चुकून जन्मलो देवा मर्त्यलोकामध्ये,
चुकू्न मी लिगांचे नामस्मरण केले.
तो माझा भाव नाही, निर्भावही नाही देवा.
त्याचे सगळे अवयव जंगम देवा.
त्याला माझे सर्वस्व अर्पण केले देवा.
त्या प्रसादाला वंदन केले देवा.
तो प्रसाद रुची नव्हता, रुचीहीन ही नव्हता.
त्या महाप्रसादात मी तन्मय झालो कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಮಾಯೋಪಾಧಿಯಿಂದ ಶಿವಾಂಶವೇ ಜೀವಾಭಿದಾನದಿಂದ ಅವತರಿಸಿತೆಂಬುದೇ–“ಹುಸಿಯಿಂದ ಜನಿಸಿದೆನಯ್ಯ ಮರ್ತ್ಯಲೋಕದೊಳಯಿಂಕೆ” ಎಂಬ ಮಾತಿನ ಅರ್ಥ. ಈ ಮಯೋಪಾಧಿಯಿಂದಲೇ -ಶಿವನು ಬೇರೆ ತಾನು ಬೇರೆಂಬ -ಭಿನ್ನಭಾವವೇರ್ಪಟ್ಟು ಆ ಶಿವನ ಕುರುಹಾದ ಲಿಂಗವನ್ನು ದೇಹದ ಮೇಲೆ ಧರಿಸಿದ್ದಾಯಿತೆಂಬದೇ –“ಹುಸಿಯಿಂದ ಲಿಂಗವ ಹೆಸರುಗೊಂಡು ಕರೆದೆನಯ್ಯ”ಎಂಬ ಮಾತಿನ ಅರ್ಥ.
ಆದರೂ ಧರಿಸಿದ ಲಿಂಗ ಅರ್ಥವತ್ತಾಗಬೇಕಾದರೆ -ಲಿಂಗಕ್ಕೂ ಜಂಗಮ(ಲಿಂಗ)ಕ್ಕೂ ಇರುವ ಸಂಬಂಧವನ್ನು ಅವಯವಿ-ಅವಯವ ಸಂಬಂಧವೆಂಬಂತೆ ಗುರುತಿಸಬೇಕೆನ್ನುವರು ಬಸವಣ್ಣನವರು. ಜಂಗಮವಿಲ್ಲದೆ ಲಿಂಗವನ್ನೂ, ಲಿಂಗವಿಲ್ಲದೆ ಜಂಗಮವನ್ನೂ ಕಲ್ಪಸಿಕೊಳ್ಳಲೂ ಸಾಧ್ಯವಿಲ್ಲ. ಅವೆರಡರ ಮಧ್ಯೆ ಅಂಥದೊಂದು ಸಂಶ್ಲಿಷ್ಟವು ಪ್ರಗಾಢವೂ ಆದ ಸಂಬಂಧವಿರುವುದರಿಂದಲೇ ಲಿಂಗವನ್ನು ಪೂಜಿಸುವನೆಂಬುವನು ಜಂಗಮೋಪಚರ್ಯೆ ಮಾಡದಿದ್ದರೆ ಅವನ ಆ ಲಿಂಗಪೂಜೆ ಸಾಂಗವಾಗುವುದಿಲ್ಲ. ಅವೆರಡರ ಈ ಸಮುದಾಯ ಸಂಬಂಧದಿಂದಲೇ ಶರಣಧರ್ಮದಲ್ಲಿ ಜಂಗಮಲಿಂಗೋಪಚರ್ಯೆ ಪ್ರಶಸ್ತವೆನಿಸಿದೆ.
ಇದು ಹೀಗಿರುವುದರಿಂದಲೇ ಬಸವಣ್ಣನವರು ಹೇಳುತ್ತಾರೆ –ಧರಿಸಿದ ಲಿಂಗ ಪರಾತ್ಪರದೃಷ್ಟಿಯಿಂದ ಇರುವುದೂ ಅಲ್ಲ, ಜಂಗಮ ದೃಷ್ಟಿಯಿಂದ ಇಲ್ಲದ್ದೂ ಅಲ್ಲ –“[ಲಿಂಗವು] ಎನಗೆ ಭಾವವೂ ಅಲ್ಲ, ನಿರ್ಭಾವೂ ಅಲ್ಲ”ವೆಂದು.
ಇದರನ್ವಯ ಬಸವಣ್ಣನವರು ಜಂಗಮಕ್ಕೆ ತಮ್ಮಲ್ಲಿರುವ ಸಾಧನಸಂಪತ್ತಿಯಿಂದ ಸಂಪ್ರೀತಿಯನ್ನುಂಟು ಮಾಡಿದಾಗ ತಮಗಾಗುವ ತೃಪ್ತಿಯೇ ತಮಗೆ ದೊರೆತ ಪ್ರಸಾದವೆನ್ನುವರು. ಅಂಥ ಪ್ರಸಾದಕ್ಕಾಗಿಯೇ ಬಸವಣ್ಣನವರು ತಮ್ಮನ್ನೂ ತಮ್ಮದೆಲ್ಲವನ್ನೂ ತೆತ್ತುಕೊಂಡಿದ್ದರು.
ಈ ಪ್ರಸಾದಭಾವದಲ್ಲಿ ಅವರು ಎಷ್ಟು ತದ್ಗತರಾಗಿದ್ದರೆಂದರೆ –ಅದು ಸಾರವೋ ನಿಸ್ಸಾರವೋ ಎಂದು ಬಗೆದು ನೋಡಲು ಅವರಿಗೆ ತೆರಪಿರಲಿಲ್ಲ.
ಈ ಜಂಗಮಲಿಂಗ(ಜೀವಲೋಕ)ದ ಆರಾಧನೆಯೇ ಇಷ್ಟಲಿಂಗೋಪಾಸನೆಯ ಕೊನೆಯೆಂದು ಸಿದ್ಧಾಂತವಾಗಿರುವುದರಿಂದ ಅದಕ್ಕನುಗುಣವಾಗಿ ನಡೆಯುವುದಷ್ಟೇ ತಮ್ಮ ಕರ್ತವ್ಯವೆಂದೂ, ಅದನ್ನು ಬಿಟ್ಟು ವಿಚಿಕಿತ್ಸೆಯಿಂದ ಶುಷ್ಕಚರ್ಚೆಯಲ್ಲಿ ಸಡಗರಿಸುವುದು ಆಚಾರವಲ್ಲವೆಂದೂ ಬಸವಣ್ಣನವರು ಅರಿಕೆ ಮಾಡಿಕೊಳ್ಳುತ್ತಿರುವರು.
ಜಂಗಮ ಸೇವಾತೃಪ್ತಿಯೇ ಲಿಂಗೈಕ್ಯ(ಭಾವ)ವೆಂಬುದು ಈ ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು