•  
  •  
  •  
  •  
Index   ವಚನ - 1131    Search  
 
ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು, ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು, ಹಿಂಡಲಾರೆನು. ಹಿಂಗಿದೆನಯ್ಯಾ ಎಲ್ಲ ಹಾರುವ ಕುಲವನು, ಮುಳುಗುವನ ಕೈಯ ಹಿಡಿದೆತ್ತಿದ ನಮ್ಮ ಕೂಡಲಸಂಗಮದೇವ.
Transliteration Kadda kaḷḷana biṭṭamaṇḍeya hiḍidu, huḍuku nīroḷagadduvante muḷugalārenu, hiṇḍalārenu. Hiṅgidenayyā ella hāruva kulavanu, muḷuguvana kaiya hiḍidettida nam'ma kūḍalasaṅgamadēva.
Hindi Translation चुराये चोर का सिर पकड़कर, पानी में डुबोने जैसे मैं डूबता भी नहीं, उठता भी नहीं, दूर किया पूरे ब्राह्मण कुल को डूबनेवाले के हाथ पकड़ उठाया हमारे कूड‌लसंगमदेव ने । Translated by: Eswara Sharma M and Govindarao B N
Marathi Translation चोरणाऱ्या चोराला सोडून संन्यासा (मुंडन केलेल्याला) धरले. बुडता त्याला बुडायला सोडता येत नाही आणि धरता येत नाही. संन्यासी पाण्यात बुडणाऱ्याचा हात धरून ब्राह्मणाच्या कुलाला म्हणजे बुडणाऱ्याचा हात धरून वाचविले आमच्या कूडलसंगमदेवाने. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸಿಕ್ಕಿಬಿದ್ದ ಕಳ್ಳನ ಕೆದರಿದ ತಲೆಯನ್ನು ಹಿಡಿದು ಕುದಿಯುವ ನೀರಿನಲ್ಲಿ ಅದ್ದಿ ತೆಗೆಯುವ ಕ್ರೂರವಾದ ಶಿಕ್ಷಾವಿಧಾನವೊಂದು ಬಸವಣ್ಣನವರ ಕಾಲಕ್ಕೆ ಇದ್ದಿತಾಗಬಹುದು. ಅದನ್ನು ಬಸವಣ್ಣನವರು ಈ ವಚನದಲ್ಲಿ ಪ್ರಸ್ತಾಪಿಸುತ್ತ-ಹಾರುವರು ನೀರಲ್ಲಿ ಮುಳುಗಿ ಏಳುವ ಸ್ನಾನವಿಧಿಗೆ ವಿಕಟವಾಗಿ ಅದನ್ನು ಹೋಲಿಸಿರುವರು. ಹಿಂದೆ ಹಾರುವರು ಮಾಡುತ್ತಿದ್ದ ಸಮಾಜಶೋಷಣೆಯ ತಸ್ಕರಕರ್ಮಕ್ಕೆ ಅದು ತಕ್ಕ ಶಿಕ್ಷೆಯೆಂದೇ ಅವರು ಭಾವಿಸಿದ್ದರು ಕೂಡ. ಹಾರವರು ಅನುಸರಿಸುತ್ತಿದ್ದ ಧರ್ಮ ಕೇವಲ ನೀರಿನಲ್ಲಿ ಮುಳುಗುವ, ಬಟ್ಟೆ ಹಿಂಡುವ, “ಮಡಿ” ಧರ್ಮವಾಗಿ-ಅದು ಉಳಿದ ಹಿಂದೂಗಳೆಲ್ಲರಿಗೆ ಸಮಾನತೆಯನ್ನು ನಿರಾಕರಿಸಿತ್ತು. ಉದಾಹರಣೆಗೆ-ವೈದಿಕರ ಹುಡುಗಿಯನ್ನು ಶೂದ್ರಹುಡುಗನೊಬ್ಬ ಪ್ರೀತಿಸಿದಾಗ ಹುಟ್ಟಿದ ಮಗು ಚಂಡಾಲನಾಗುತ್ತಿತ್ತು. ಇದು ದಕ್ಷಿಣ ಆಫ್ರಿಕಾದಲ್ಲಿ ಇಂದಿಗೂ ಜಾರಿಯಲ್ಲಿರುವ ವರ್ಣನೀತಿಗಿಂತ ಕಡಿಮೆ ಕರಾಳವೇನಲ್ಲ. ಇಂಥ ಆವೈಚಾರಿಕ ಅಮಾನವೀಯ ಧರ್ಮವನ್ನು ಬಿಟ್ಟು, ಶರಣರ ಶೈವಧರ್ಮವನ್ನು ಅಪ್ಪಿದ ಬಗ್ಗೆ ಬಸವಣ್ಣನವರಿಗೆ ಬಿಡುಗಡೆಯ ಸಡಗರ-ನರಕದಿಂದ ತಪ್ಪಿಸಿಕೊಂಡುಬಂದವನ ನೆಮ್ಮದಿಯ ಮುಕ್ತಭಾವ. ಆದುದರಿಂದಲೇ ಅವರು “ಮುಳುಗಲಾರೆನು ಹಿಂಡಲಾರೆನು- ಹಿಂಗಿದೆನಯ್ಯ ಎನ್ನ ಹಾರುವ ಕುಲವನು” ಎಂದಿರುವರು. ಅಲ್ಲಿಂದ ತಾವು ಪಾರಾದುದು ಶಿವನ ಕೃಪೆಯಿಂದಲೇ ಎಂಬರ್ಥದಲ್ಲಿ-“ಮುಳುಗುವನ ಕೈಯ ಹಿಡಿದೆತ್ತಿದ ನಮ್ಮ ಕೂಡಲ ಸಂಗಮದೇವ” ಎಂದು ಮೈನಡುಗುವಂತೆ ಮೌನವಾಗುವರು. ಬಸವಣ್ಣನವರ ಕಾಲದ ಹಾರುವನು ತನ್ನ ಧರ್ಮಾಚರಣೆಯ ಹೆಸರಿನಲ್ಲಿ ಮಾಡುತ್ತಿದ್ದ ಪಾಪಕರ್ಮಕ್ಕೆ ತಕ್ಕ ಶಿಕ್ಷೆ ಕುದಿವ ನೀರೇ ಆದರೂ-ಅವನು ತಂಪಾದ ನೀರಿನಲ್ಲಿ ಸ್ನಾನ ಮಾಡುತ್ತ-ಅಷ್ಟರಿಂದಲೇ ತಾನು ಶ್ರೇಷ್ಠನೆಂಬಂತೆ ಹೇಗೆ ವಿಜೃಂಭಿಸುತ್ತಿದ್ದನೆಂಬುದನ್ನೂ ಈ ವಚನದಲ್ಲಿ ಧ್ವನಿಸಲಾಗಿದೆ. ಈ ವಚನದಲ್ಲಿ ಬಳಸಿರುವ ಕಳ್ಳನ ಭೀಕರ ಸಂಗತಿಯಿಂದ ಮತ್ತು ಉಸಿರುಕಟ್ಟಿಸುವ ನೀರ್ಗತ್ತಲೆಯ ಆಚೆಗಿನ ಬಿಡುಗಡೆಯ ಬೆಳ್ಳಂಬೆಳುಕಿನ ಆಹ್ಲಾದಕರ ಸೂಚನೆಯಿಂದ ಆಪೂರ್ವ ರೀತಿಯಲ್ಲಿ ಸಮರ್ಥವಾಗಿರುವ ಈ ವಚನ ಇದುವರೆಗೂ ಅನುಪಲಬ್ಧವಾಗಿದ್ದು-ಈಗ (ಷಟ್ಸ್ಥಲದ ಪರಿವಿಡಿಯಲ್ಲೇ ಇರುವ) ಉದ್ದ ಪ್ರತಿಯಿಂದ ದೊರೆತಂದು ದೊಡ್ಡ ಲಾಭ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು