ಏನು ಏನೂ ಎನಲಿಲ್ಲದ ಹಾಳು ಬೆಟ್ಟದ ಮೇಲೊಂದು
ತಲೆಯಿಲ್ಲದ ಹುಲಿ ಹುಟ್ಟಿತ್ತು ನೋಡಾ,
ಆ ಹುಲಿ ಮೇಲಕೆ ಹದಿನಾಲ್ಕುಸಾವಿರದನಾನೂರಗಾವುದ
ನೆಗೆಯಿತ್ತು ನೋಡಾ.
ಆ ಹುಲಿ ಒಂದು ಹುಲ್ಲೆಯ ಕಂಡು ತಿರುಗಿ,
ಮೂರೇಳು ಸಾವಿರದಾರುನೂರುಗಾವುದ ತಿರುಗಿ
ಹುಲ್ಲೆಯ ಹಿಡಿದು ನುಂಗಿ,
ಹದಿನಾಲ್ಕುಸಾವಿರದ ನಾನೂರುಗಾವುದ ತಿರುಗಿತ್ತು.
ಇದನರಿದು ಅನುಭವಿಸಬಲ್ಲಾತನೆ ಮಹಾಶರಣ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Ēnu ēnū enalillada hāḷu beṭṭada mēlondu
taleyillada huli huṭṭittu nōḍā,
ā huli mēlake hadinālkusāviradanānūragāvuda
negeyittu nōḍā.
Ā huli ondu hulleya kaṇḍu tirugi,
mūrēḷu sāviradārunūrugāvuda tirugi
hulleya hiḍidu nuṅgi,
hadinālkusāvirada nānūrugāvuda tirugittu.
Idanaridu anubhavisaballātane mahāśaraṇa nōḍā
apramāṇakūḍalasaṅgamadēvā.