ಭಕ್ತರ ಭಾವವ ನೋಡಲೆಂದು
ಸಾಕಾರವಾದ ಲಿಂಗವು ನಿರಾಕಾರವಾದುದಿಲ್ಲವೆ?
ಭಕ್ತರ ಭಾವವ ನೋಡಲೆಂದು
ಕೆಂಬಾವಿಯ ಭೋಗಣ್ಣಗಳೊಂದಿಗೆ ಹೋದುದಿಲ್ಲವೆ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಅಪ್ಪುವಿನಲ್ಲಿ ಅಡಗಿದುದಿಲ್ಲವೆ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಅಗ್ನಿಯಲ್ಲಿ ಅಳಿದುದಿಲ್ಲವೆ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕೃಷ್ಟವಾದುದಿಲ್ಲವೆ?
ಭಕ್ತರ ಭಾವವ ನೋಡಲೆಂದು
ಇಷ್ಟಲಿಂಗವು ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು?
ಎತ್ತಿ ಧರಿಸೂದೆ ಭಕ್ತ ವಿರಕ್ತರಿಗೆ, ಮುಕ್ತಿಯ ಪಥವಯ್ಯ.
ಅದೆಂತೆಂದಡೆ: ಉಂಬಲ್ಲಿ ಉಡುವಲ್ಲಿ ಕೊಂಬಲ್ಲಿ ಕೊಡುವಲ್ಲಿ,
ಅರಿದೆ ಮರದೆನೆಂಬ ನಾನಾ ಸಂದೇಹದ ಕೀಲ ಕಳೆದು,
ಇಷ್ಟಲಿಂಗದ ಪೂಜೆ, ಚರಲಿಂಗದ ದಾಸೋಹವ ಮಾಡಬಲ್ಲಡೆ,
ಕಲಿದೇವರದೇವನ ನಿಜವ
ಕಾಣಬಹುದು ಕಾಣಾ, ಚಂದಯ್ಯ.
Transliteration Bhaktara bhāvava nōḍalendu
sākāravāda liṅgavu nirākāravādudillave?
Bhaktara bhāvava nōḍalendu
kembāviya bhōgaṇṇagaḷondige hōdudillave?
Bhaktara bhāvava nōḍalendu
iṣṭaliṅgavu appuvinalli aḍagidudillave?
Bhaktara bhāvava nōḍalendu
iṣṭaliṅgavu agniyalli aḷidudillave?
Bhaktara bhāvava nōḍalendu
Iṣṭaliṅgavu śaktisampuṭadinda utkr̥ṣṭavādudillave?
Bhaktara bhāvava nōḍalendu
iṣṭaliṅgavu pr̥thviyalli sthāpyavādaḍēnu?
Etti dharisūde bhakta viraktarige, muktiya pathavayya.
Adentendaḍe: Umballi uḍuvalli komballi koḍuvalli,
aride maradenemba nānā sandēhada kīla kaḷedu,
iṣṭaliṅgada pūje, caraliṅgada dāsōhava māḍaballaḍe,
kalidēvaradēvana nijava
kāṇabahudu kāṇā, candayya.