ನಾನು ಭಕ್ತನಪ್ಪೆನಯ್ಯ ನಿಮ್ಮ ಶ್ರೀ ಚರಣಸೇವಕನಾಗಿ,
ನಾನು ಯುಕ್ತನಪ್ಪೆನಯ್ಯ `ಯತ್ರ ಮಾಹೇಶ್ವರಸ್ತತ್ರ ಶಿವಃ' ಎಂಬ
ವಿಶ್ವಾಸದನುಭಾವಿಯಾಗಿ.
ನಾನು ಮುಕ್ತನಪ್ಪೆನಯ್ಯ ಮನ ಪ್ರಾಣ ನಿಮ್ಮಲ್ಲಿ ನಿಂದು
ನಾನೆಂಬುದಿಲ್ಲವಾಗಿ.
ಇಂತು ತನುವಿನಲ್ಲಿ ಹೊರೆಯಿಲ್ಲದೆ, ಮನದಲ್ಲಿ ವ್ಯಾಕುಲವಿಲ್ಲದೆ,
ಪ್ರಾಣದಲ್ಲಿ ಹಮ್ಮಿಲ್ಲದೆ, ತನು ಮನ ಪ್ರಾಣ ನಿಮ್ಮಲ್ಲಿ ಸಂದಿಪ್ಪ
ನಿಚ್ಚಟ ಭಕ್ತನಾಗಿಪ್ಪೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮಲ್ಲಿ.
Transliteration Nānu bhaktanappenayya nim'ma śrī caraṇasēvakanāgi,
nānu yuktanappenayya `yatra māhēśvarastatra śivaḥ' emba
viśvāsadanubhāviyāgi.
Nānu muktanappenayya mana prāṇa nim'malli nindu
nānembudillavāgi.
Intu tanuvinalli horeyillade, manadalli vyākulavillade,
prāṇadalli ham'millade, tanu mana prāṇa nim'malli sandippa
niccaṭa bhaktanāgippenu,
nijaguru svatantrasid'dhaliṅgēśvarā nim'malli.