•  
  •  
  •  
  •  
Index   ವಚನ - 433    Search  
 
ದಯದಿಂದ ನೋಡಿ ಬಹು ವಿಚಾರವುಂಟು. ಷಟ್ಸ್ಥಲಬ್ರಹ್ಮಚಾರಿ ತಾನು ಸಂಕಲ್ಪವನೇತಕ್ಕೆ ಮಾಡುವದು? ಗುರುವು ಹಿಡಿದು ಲಿಂಗವಾಯಿತ್ತು. ಲಿಂಗ ಹಿಡಿದು ಜಂಗವಾಯಿತ್ತು. ಜಂಗಮವು ಹಿಡಿದು ಪಾದೋದಕ ಪ್ರಸಾದವಾಯಿತ್ತು. ಇದನರಿಯದೆ ಭಿನ್ನಭೇದವ ಮಾಡಲಾಗದು. ಜಂಗಮನ ಕೊಂದವನಾದರು, ಲಿಂಗವ ಭಿನ್ನವ ಮಾಡಿದವನಾದರು, ಅವನ ಕಂಡು ಮನಸ್ಸಿನಲ್ಲಿ ನಿಂದಿಸಿದರೆ ವಿರಕ್ತನೆಂಬ ಭಾವನೆಯಿಲ್ಲ. ಭಕ್ತನ ಮಠವೆಂದು ಹೋದಲ್ಲಿ, ಆ ಭಕ್ತನು ಎದ್ದು ನಮಸ್ಕರಿಸಿ, ತನ್ನ ದಾಸಿಯರ ಕರದು `ಪಾದಾರ್ಚನೆಯ ಮಾಡು' ಎಂದರೆ ಆ ಪಾದಾರ್ಚನೆಯ ಮಾಡಿದ ಫಲವು ಅರಿಗೆ ಮೋಕ್ಷವಾಗುವದು? ಆ ತೊತ್ತಿನ ಬಸುರಲ್ಲಿ ಬಪ್ಪುದು ತಪ್ಪದು. ತಾನು ವಿರಕ್ತನಾದ ಮೇಲೆ, ಲಿಂಗವಿದ್ದವರಲ್ಲಿ ಲಿಂಗಾರ್ಪಿತವ ಬೇಡಲೇತಕ್ಕೆ?. ತಾ ಬಿರಿದ ಕಟ್ಟಿ ಆಚರಿಸುವ ಶರಣನು ತನಗೆ ಸಮಾಚಾರ ಸಮನಾಗದಲ್ಲಿ ಹೊನ್ನ ಹಿಡಿದು ಬಡ್ಡಿ ವ್ಯವಹಾರವ ಮಾಡಿದ ಜಂಗಮದಲ್ಲಿ ತೆಗೆದುಕೊಳ್ಳಲಾಗದು. ಆ ಜಂಗಮವು ತ್ರಿವಿಧ ಪದಾರ್ಥದಲ್ಲಿದ್ದರೇನು? ವಂಚನೆಯಿಲ್ಲದೆ ಸವದರೆ ಆತ ಮುಟ್ಟಿದರೊಳಗಿಲ್ಲ. ಆತನ ಅಂತು ಇಂತು ಎನ್ನಲಾಗದು ಶರಣರಾಚರಣೆ. ಶರಣ ತಾ ಬಿರಿದ ಕಟ್ಟಿ ಆಚರಿಸಿದಲ್ಲಿ ತನ್ನಾಚರಣೆಗೆ ಕೊರತೆ ಬಂದರೆ ಬಂದಿತ್ತೆಂಬ ಹೇಹ ಬೇಡ. ಬಂದಾಗ ನರಳಿ, ಬಾರದಾಗ ಸದಾಚಾರದಲ್ಲಿರ್ಪುದೆ ಶರಣನಾಚರಣೆ. ಗುರು ಮೋಕ್ಷವಾಗಿಯಿಪ್ಪಾತನು ಪಾಪಕ್ಕೆ ಸಂಬಂಧವಾಗಲು ಆತನ ಕಂಡು ಮನದಲ್ಲಿಯಿವ ದ್ರೋಹಿಯೆಂದರೆ ನನ್ನ ಬಿರಿದಿಂಗೆ ಕೊರತೆಯದಾಗುವುದಲ್ಲದೆ ವಿರಕ್ತನೆಂಬ ಭಾವವೆನಗಿಲ್ಲ ನೋಡಾ. ಮುಂದೆ ಕ್ರಿಯಾಚರಣೆ. ವಿರಕ್ತನ ನಡೆಯೆಂತೆಂದೊಡೆ - ಭಕ್ತಿಸ್ಥಲ ಸಂಬಂಧವಾದ ಭಕ್ತಂಗೆ ಕ್ರೀಯವ ಕೊಡುವ ಆಚರಣೆಯೆಂತೆಂದೊಡೆ ಆತ ತೆಗೆದು ಕೊಂಬ ಆಚರಣೆಯೆಂತೆಂದೊಡೆ ಪಾದಾರ್ಚನೆಯ ಮಾಡಿದಲ್ಲಿ ಪಾದತೀರ್ಥ ಕೊಡುವರು. ಅನ್ನವ ನೀಡಿದ ಹಂಗಿನಲ್ಲಿ ಪ್ರಸಾದವಂ ಕೊಡುವವರು ಮುಯ್ಯಿಂಗೆ ಮುಯ್ಯನಿತ್ತುದಲ್ಲದೆ ಮುಕ್ತಿಯೆಂಬುದು ಆವುದು ಹೇಳಾ? ಭಕ್ತನಾಚಾರಣೆಯೆಂತೆಂದೊಡೆ- ಆ ಗೃಹಕ್ಕೆ ಹೋದಲ್ಲಿ ತಾ ಲಿಂಗಪೂಜೆಯ ಮಾಡುತ್ತಿರ್ದರಾದರು ತಾ ಯೆದ್ದು ಬಂದು ನಮಸ್ಕರಿಸುವದೆ ಭಕ್ತನ ಮಾರ್ಗ. ಎನ್ನೊಳಗೆ ಲಿಂಗವು ಜಂಗಮವು ಉಂಟೆಂಬ ಅವಿಚಾರದ ನುಡಿಯ ಕೇಳಲಾಗದು. ಮುಂದೆ ಭಕ್ತನು ಜಂಗಮದ ಪಾದವ ಹಿಡಿದಲ್ಲಿ ಪುಷ್ಪ ವಿಭೂತಿಯಿರಲು ಅಗ್ಛಣಿಯಿಲ್ಲದಿರಲು ಮರೆ[ದು] ವ್ರತಸ್ಥಪಾದವ ಬಿಡಲಾಗದು. ಬಿಟ್ಟನಾದರೆ ಪಾದತೀರ್ಥಕ್ಕೆ ದೂರವಾಯಿತ್ತು. ಲೋಕಾಚಾರದ ಭಕ್ತರು ಪಾದವ ಹಿಡಿಯಲು, ಪುಷ್ಪ ವಿಭೂತಿಯಿರಲು ಅಗ್ಘಣಿಯಿಲ್ಲದಿರಲು ಆ ಪಾದಕ್ಕೆ ನಮಸ್ಕಾರವ ಮಾಡಿ ಪಾದವಂ ಬಿಟ್ಟು ಮತ್ತೆ ಹೋಗಿ ಅಗ್ಘಣಿಯಂ ತಂದು ಪಾದತೀರ್ಥವಂ ಪಡೆದು ಸವಿಸುವುದು ಭಕ್ತನಾಚರಣೆ. ಜಂಗಮದೇವರ ಕರತಂದು ವ್ರತಸ್ಥನ ಪಾದತೀರ್ಥವಂ ಪಡೆದಲ್ಲಿ ಆ ಆ ದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ದೇವರು ಮಜ್ಜನವ ನೀಡಿದ ಸ್ಥಾನ ಅವರು ಮೂರ್ತಿಮಾಡಿರ್ದ ಸ್ಥಾನವ ನೋಡಿ ಆ ವ್ರತಸ್ಥನು ಪ್ರಾಣವ ಕೊಡುವುದು. ಭಕ್ತನು ಜಂಗಮವ ಕರಕೊಂಡು ಬಂದು ಪಾದತೀರ್ಥಮಂ ಪಡೆದು ಆ ಜಂಗಮದೇವನ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಅವರು ಮಜ್ಜನವ ನೀಡಿದ ಸ್ಥಾನದಲ್ಲಿ ಮೂರ್ತಿಗೊಂಡಿರ್ದ ಸ್ಥಾನದಲ್ಲಿ ಪರಾಂಬರಿಸಿ ಆ ಲಿಂಗವು ಸಿಕ್ಕಿದರೆ ಕ್ರೀಯವ ಜಂಗಮವು ಭಕ್ತರು ಸಲಿಸುವುದು, ಇಲ್ಲದಿದ್ದರೆ ಆ ಭಕ್ತರು ತೆಗೆದು ಕೊಂಬುದು. ಆ ಜಂಗಮವು ತೆಗೆದು ಕೊಳಲಾಗದು. ಇದು ಸಕಲ ಶರಣರಿಗೆ ಸನ್ಮತ. ಸಂಕಲ್ಪವ ಮಾಡಲಾಗದು. ಮುಂದೆ ಮಾರ್ಗಕ್ಕೆ ತಾನು ನಡೆದಲ್ಲಿ ತನಗೆ ಮಾರ್ಗ ತಪ್ಪದು. ತನಗೆವೊ[ಂ]ದು ವೇಳೆ ಲಿಂಗವು ಭಿನ್ನ ಭಿನ್ನವಾಗಲು ಅದನು ಸಕಲ ಸಮಸ್ತ ಮೂರ್ತಿಗಳು ತಿಳಿದು ನೋಡಲು ಅದರಲ್ಲಿ ಭಿನ್ನ ಭಿನ್ನವಾಗದೆಯಿರಲು ಪರಾಂಬರಿಸಿ ಎಲ್ಲಾ ಮಾಹೇಶ್ವರರು ಎದ್ದು ಬಂದು ಅದರೊಳಗೆ ಸಂಕಲ್ಪವಿಲ್ಲವೆಂದು ನಮಸ್ಕಾರವ ಮಾಡುವುದು. ಲಿಂಗವು ಭಿನ್ನವಾಗಲು `ನಿಮ್ಮ ಗುರುಮಠಪೂರ್ವಕ್ಕೆ ಹೋಗಿ'ಯೆಂದು ಹೇಳಲು, `ನಾನೊಲ್ಲೆ, ನಿಮ್ಮ ಪಾದದಲ್ಲಿಯೇಕಾರ್ಥವ ಮಾಡಿಕೊಳ್ಳಿ'ಯೆಂದು ಹೇಳಲು, ಆ ದೇವರ ಅಡ್ಡಬೀಳಿಸಿಕೊಂಡು ವಸ್ತು ಹೋಗುವ ಪರಿಯಂತರದಲ್ಲಿ ಕಾದಿರುವುದು. ಅಥ[ವಾ] ಒಂದು ವೇಳೆ ಮೋಸ ಬಂದರೆ ಅಲ್ಲಿರ್ಪ ಭಕ್ತ ಮಾಹೇಶ್ವರರ ಬಿಡುವುದು. ಧರ್ಮಾಧರ್ಮದಲ್ಲಿ ವಿಚಾರಿಸದೆ ಆ ಭಕ್ತನು ಜಂಗಮ ಮುಟ್ಟಿದ ಗದ್ದುಗೆಯಲ್ಲಿ ಮೂರ್ತಿಮಾಡಿ `ಪ್ರಸಾದಕ್ಕೆ ಶರಣಾರ್ಥಿ'ಯೆನಲು ನೀಡಲಾಗದೆಂಬುದು ಆಚರಣೆ. ಆದ ನೀಡಿಯಿಟ್ಟರು ಮುಗಿವಲ್ಲಿ ಭಕ್ತನ ಪ್ರಸಾದ ಹೆಚ್ಚಾದರೆ `ಅಯ್ಯೋ ನನ್ನ ಪ್ರಸಾದ ಹೆಚ್ಚಾಯಿ'ತೆಂದು ಹೇಳಿದರೆ ಆ ಪ್ರಸಾದವನು ನೀಡಿಸಿ ಕೊಂಬ ಜಂಗಮಕ್ಕೆ ಆಚರಣೆ ಸಲ್ಲದು. ವ್ಯಾಪಾರವ ಕೊಟ್ಟು ವ್ಯಾಪಾರವನೊಪ್ಪಿಸಿಕೊಂಡರೆ ನಾವು ಪ್ರಸಾದವ ತೆಗೆದುಕೊಂಬುದು ಆಚರಣೆ. ಹೊನ್ನು ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಪ್ರಸಾದವನು ತೆಗೆದುಕೊಂಬುದು ಇದು ಜಂಗಮದಾಚರಣೆ. ಗುರುದೀಕ್ಷೆಯಿಲ್ಲದವನು ಲಿಂಗಪೂಜೆಯ ಮಾಡಿದರೆ ಪಾದೋದಕ ಪ್ರಸಾದವ ಕೊಂಡರೆ ಸಹಜವಲ್ಲದೆ ಸಾಧ್ಯವಾಗದು. ಬಿಟ್ಟರಾದರೆ ಅವರಿಗೆ ಮೋಕ್ಷವಿಲ್ಲವು. ಜಂಗಮವು ಆವ ವರ್ತನೆಯಲ್ಲಿ ನಡಕೊಂಡರು [ಆಸ]ತ್ತು `ಬೇಡ ಹೋಗಿ'ಯೆಂದರೆ `ನಾನು ಅರಿಯದೆ ಮಾಡಿದೆ'ನೆಂದರೆ ಅವನನೊಪ್ಪಿಕೊಂಬುದು ಇದಕ್ಕೆ ಕಲ್ಪಿತ ಪಾಪಪುಣ್ಯಕ್ಕೆ ಒಳಗಾದವರು ಷಟ್ಸ್ಥಲಕ್ಕೆ ಮಾತ್ರ ಆಗದು. ಭಕ್ತಂಗೆ ಪ್ರಸಾದವ ಕೊಡುವ ಆಚರಣೆಯೆಂತೆಂದೊಡೆ- ದೀಕ್ಷೆಯಿಲ್ಲದೆ ಶಿವಭಕ್ತನ ಗೃಹಕ್ಕೆ ಹೋಗಿ `ಭಿಕ್ಷೆ'ಯೆಂದೆನಾದರೆ, ಜಿಹ್ವೆಯ ಮುಕ್ಕುಳಿಸಿದರೆ ಪಾತಕ ನೋಡಾ. ಗುರುವಚನ ಪ್ರಮಾಣದಲ್ಲಿ ನಾನು ಗುರುಮುಖವ ಹಿಡಿದಲ್ಲಿ ಶಿವಮಂತ್ರಸ್ಮರಣೆಯನು ಶಿವಾನುಭಾವಿಗಳ ಸ್ಥಾನದಲ್ಲಿ ಬೆಸಗೊಂಬುದೆ ಶುದ್ಧವಾಯಿತ್ತು. ಇಲ್ಲದಿದ್ದರೆ ಶುದ್ಧವಿಲ್ಲವು. ಶಿವಶರಣನ ಜ್ಞಾನವೆಂತೆಂದೊಡೆ - ನೀರಮೇಲಣ ತೆಪ್ಪದಂತಿರಬೇಕು, ಕ್ಷೀರದೊಳಗಣ ಘೃತದಂತಿರಬೇಕು, ಕೆಸರಿನೊಳಗಣ ತಾವರೆ ಪ್ರಜ್ವಲಿಸಿದಂತಿರಬೇಕು. ಲಿಂಗದೊಳಗೊಡವೆರದರೆ ಆರು ಆರಿಗೆಯು ಕಾಣದಂತೆ ನೋಡಾ. ಅಂದಳದೊಳಗೆ ಹೋಗುವನ ಹಜ್ಜೆಯ ಕಂಡವರಾರು ಹೇಳ? ಮಾತಿನಲ್ಲಿ ಮಹಾಜ್ಞಾನಿಗಳೆಂದರೊಪ್ಪುವರೆ? ಮಹಾಲಿಂಗದ ಬೆಳಗಿನಲ್ಲಿ, ತನ್ನ ನಡೆಯನೊಡವೆರದಿಪ್ಪ ಮಹಿಮಂಗೆ ದುಃಖವಿಲ್ಲ ನೋಡ ಭಕ್ತಿಸ್ಥಲವಾದುದು. ಭಕ್ತನ ಮಾರ್ಗವೆಂತೆಂದೊಡೆ- ತನ್ನ ಗೃಹಕ್ಕೆ ಜಂಗಮವು ಹೋದಲ್ಲಿ ಶುದ್ಧವಲ್ಲದೆ ಇದನರಿಯದೆ ಕಾಡದೈವಕ್ಕೆಲ್ಲ ಹರಕೆಯ ಮಾಡಿ ಆ ದೈವದ ಹೆಸರಿನಲ್ಲಿ ಜಂಗಮವ ಕರೆತಂದು ಉಣಲಿಕ್ಕಿದೆನಾದರೆ ಕಾರಿದ ಕೂಳಿಗಿಂದ ಕನಿಷ್ಠ ಕಾಣ. ಅನ್ಯ ದೈವದ ಪೂಜೆಯಿಲ್ಲದಾತನೆ ಶಿವಭಕ್ತ ನೋಡಾ. ತನ್ನ ಗುರುವು ಹಸ್ತಕ ಸಂಯೋಗವ ಮಾಡಿ, ಲಿಂಗವ ಧರಿಸಿದ ಬಳಿಕ ಲಿಂಗವಲ್ಲದೆ ಅನ್ಯಪೂಜೆಯೇತಕ್ಕೆ?. ಇದನ[ರಿ]ದರಿದು ಮಾಡಿದನಾದರೆ ಪಾತಕವಲ್ಲದೆ ಮತ್ತಿಲ್ಲ ನೋಡ. ಮೋಕ್ಷವೆಂಬುದೆಂದಿಗೂ ಇಲ್ಲ ನೋಡಾ. ಹುಟ್ಟುಗೆಟ್ಟು ಬಟ್ಟಬಯಲಾದವನಿಗೆ ದುಃಖವುಂಟೆ?. ಲಿಂಗದಲ್ಲಿ ನಿರ್ಭಯಲಾದವಂಗೆ ಸಂಕಲ್ಪವುಂಟೆ?. ಮಹಾಜ್ಞಾನಿಗೆ ಕತ್ತಲೆಯುಂಟೆ?. ಮಹಾಪ್ರಸಾದಿಗೆ ಸಂಕಲ್ಪಮುಂಟೆ?. ಜ್ಞಾನಿಗಳಿಗೆನ್ನವರು ತನ್ನವರೆಂಬ ಭೇದಮುಂಟೆ?. ಸದ್ಭಕ್ತಿಯುಳ್ಳಾತನು ತನ್ನ ಲಿಂಗವ ಪೂಜಿಸಿ ಅನ್ಯರಮನೆಯಲ್ಲಿ ಭೋಗದಲ್ಲಿದ್ದನಾದರೆ ಶ್ವಾನನ ಬಸುರಲ್ಲಿ ಬರುವು[ದು] ತಪ್ಪದು, ಅರೆಭಕ್ತರಾದವರ ಗೃಹದಲ್ಲಿ ಹೋಗಿ ಅನ್ನವ ಮುಟ್ಟಿದರಾದರೆ, ಅವನಿಗೆ ಗುರುವಿಲ್ಲ. ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
Transliteration (Vachana in Roman Script) Dayadinda nōḍi bahu vicāravuṇṭu. Ṣaṭsthalabrahmacāri tānu saṅkalpavanētakke māḍuvadu? Guruvu hiḍidu liṅgavāyittu. Liṅga hiḍidu jaṅgavāyittu. Jaṅgamavu hiḍidu pādōdaka prasādavāyittu. Idanariyade bhinnabhēdava māḍalāgadu. Jaṅgamana kondavanādaru, liṅgava bhinnava māḍidavanādaru, avana kaṇḍu manas'sinalli nindisidare viraktanemba bhāvaneyilla. Bhaktana maṭhavendu hōdalli, Ā bhaktanu eddu namaskarisi, tanna dāsiyara karadu `pādārcaneya māḍu' endare ā pādārcaneya māḍida phalavu arige mōkṣavāguvadu? Ā tottina basuralli bappudu tappadu. Tānu viraktanāda mēle, liṅgaviddavaralli liṅgārpitava bēḍalētakke?. Tā birida kaṭṭi ācarisuva śaraṇanu tanage samācāra samanāgadalli honna hiḍidu baḍḍi vyavahārava māḍida jaṅgamadalli tegedukoḷḷalāgadu. Ā jaṅgamavu trividha padārthadalliddarēnu? Van̄caneyillade savadare āta muṭṭidaroḷagilla. Ātana antu intu ennalāgadu śaraṇarācaraṇe. Śaraṇa tā birida kaṭṭi ācarisidalli tannācaraṇege korate bandare bandittemba hēha bēḍa. Bandāga naraḷi, bāradāga sadācāradallirpude śaraṇanācaraṇe. Guru mōkṣavāgiyippātanu pāpakke sambandhavāgalu ātana kaṇḍu manadalliyiva drōhiyendare Nanna biridiṅge korateyadāguvudallade viraktanemba bhāvavenagilla nōḍā. Munde kriyācaraṇe. Viraktana naḍeyentendoḍe - bhaktisthala sambandhavāda bhaktaṅge krīyava koḍuva ācaraṇeyentendoḍe āta tegedu komba ācaraṇeyentendoḍe pādārcaneya māḍidalli pādatīrtha koḍuvaru. Annava nīḍida haṅginalli prasādavaṁ koḍuvavaru muyyiṅge muyyanittudallade muktiyembudu āvudu hēḷā? Bhaktanācāraṇeyentendoḍe- ā gr̥hakke hōdalli tā liṅgapūjeya māḍuttirdarādaru tā yeddu bandu namaskarisuvade bhaktana mārga. Ennoḷage liṅgavu jaṅgamavu uṇṭemba avicārada nuḍiya kēḷalāgadu. Munde bhaktanu jaṅgamada pādava hiḍidalli puṣpa vibhūtiyiralu agchaṇiyilladiralu mare[du] vratasthapādava biḍalāgadu. Biṭṭanādare pādatīrthakke dūravāyittu. Lōkācārada bhaktaru pādava hiḍiyalu, Puṣpa vibhūtiyiralu agghaṇiyilladiralu ā pādakke namaskārava māḍi pādavaṁ biṭṭu matte hōgi agghaṇiyaṁ tandu pādatīrthavaṁ paḍedu savisuvudu bhaktanācaraṇe. Jaṅgamadēvara karatandu vratasthana pādatīrthavaṁ paḍedalli ā ā dēvara sejjeyalli liṅgavilladiralu ā dēvaru majjanava nīḍida sthāna avaru mūrtimāḍirda sthānava nōḍi Ā vratasthanu prāṇava koḍuvudu. Bhaktanu jaṅgamava karakoṇḍu bandu pādatīrthamaṁ paḍedu ā jaṅgamadēvana sejjeyalli liṅgavilladiralu avaru majjanava nīḍida sthānadalli mūrtigoṇḍirda sthānadalli parāmbarisi ā liṅgavu sikkidare krīyava jaṅgamavu bhaktaru salisuvudu, illadiddare ā bhaktaru tegedu kombudu. Ā jaṅgamavu tegedu koḷalāgadu. Idu sakala śaraṇarige sanmata. Saṅkalpava māḍalāgadu. Munde mārgakke tānu naḍedalli tanage mārga tappadu. Tanagevo[ṁ]du vēḷe liṅgavu bhinna bhinnavāgalu adanu sakala samasta mūrtigaḷu tiḷidu nōḍalu adaralli bhinna bhinnavāgadeyiralu parāmbarisi ellā māhēśvararu eddu bandu adaroḷage saṅkalpavillavendu namaskārava māḍuvudu. Liṅgavu bhinnavāgalu `nim'ma gurumaṭhapūrvakke hōgi'yendu hēḷalu, `nānolle, nim'ma pādadalliyēkārthava māḍikoḷḷi'yendu hēḷalu, ā dēvara aḍḍabīḷisikoṇḍu vastu hōguva pariyantaradalli kādiruvudu. Atha[vā] ondu vēḷe mōsa bandare allirpa bhakta māhēśvarara biḍuvudu. Dharmādharmadalli vicārisade ā bhaktanu jaṅgama muṭṭida gaddugeyalli mūrtimāḍi `prasādakke śaraṇārthi'yenalu nīḍalāgadembudu ācaraṇe. Āda nīḍiyiṭṭaru mugivalli bhaktana prasāda heccādare `Ayyō nanna prasāda heccāyi'tendu hēḷidare ā prasādavanu nīḍisi komba jaṅgamakke ācaraṇe salladu. Vyāpārava koṭṭu vyāpāravanoppisikoṇḍare nāvu prasādava tegedukombudu ācaraṇe. Honnu heṇṇu maṇṇu trividhadalli van̄caneyilladirpaḍe avana prasādavanu tegedukombudu idu jaṅgamadācaraṇe. Gurudīkṣeyilladavanu liṅgapūjeya māḍidare pādōdaka prasādava koṇḍare Sahajavallade sādhyavāgadu. Biṭṭarādare avarige mōkṣavillavu. Jaṅgamavu āva vartaneyalli naḍakoṇḍaru [āsa]ttu `bēḍa hōgi'yendare `nānu ariyade māḍide'nendare avananoppikombudu idakke kalpita pāpapuṇyakke oḷagādavaru ṣaṭsthalakke mātra āgadu. Bhaktaṅge prasādava koḍuva ācaraṇeyentendoḍe- dīkṣeyillade śivabhaktana gr̥hakke hōgi `bhikṣe'yendenādare, jihveya mukkuḷisidare pātaka nōḍā. Guruvacana pramāṇadalli nānu gurumukhava hiḍidalli śivamantrasmaraṇeyanu śivānubhāvigaḷa sthānadalli besagombude śud'dhavāyittu. Illadiddare śud'dhavillavu. Śivaśaraṇana jñānaventendoḍe - nīramēlaṇa teppadantirabēku, kṣīradoḷagaṇa ghr̥tadantirabēku, kesarinoḷagaṇa tāvare prajvalisidantirabēku. Liṅgadoḷagoḍaveradare āru ārigeyu kāṇadante nōḍā. Andaḷadoḷage hōguvana hajjeya kaṇḍavarāru hēḷa? Mātinalli mahājñānigaḷendaroppuvare? Mahāliṅgada beḷaginalli, tanna naḍeyanoḍaveradippa mahimaṅge duḥkhavilla nōḍa bhaktisthalavādudu. Bhaktana mārgaventendoḍe- tanna gr̥hakke jaṅgamavu hōdalli śud'dhavallade idanariyade kāḍadaivakkella harakeya māḍi ā daivada hesarinalli jaṅgamava karetandu uṇalikkidenādare kārida kūḷiginda kaniṣṭha kāṇa. An'ya daivada pūjeyilladātane śivabhakta nōḍā. Tanna guruvu hastaka sanyōgava māḍi, liṅgava dharisida baḷika liṅgavallade an'yapūjeyētakke?. Idana[ri]daridu māḍidanādare pātakavallade mattilla nōḍa. Mōkṣavembudendigū illa nōḍā. Huṭṭugeṭṭu baṭṭabayalādavanige duḥkhavuṇṭe?. Liṅgadalli nirbhayalādavaṅge saṅkalpavuṇṭe?. Mahājñānige kattaleyuṇṭe?. Mahāprasādige saṅkalpamuṇṭe?. Jñānigaḷigennavaru tannavaremba bhēdamuṇṭe?. Sadbhaktiyuḷḷātanu tanna liṅgava pūjisi an'yaramaneyalli bhōgadalliddanādare śvānana basuralli baruvu[du] tappadu, arebhaktarādavara gr̥hadalli hōgi annava muṭṭidarādare, avanige guruvilla. Muktiyembudu endendigū illa nōḍā, nijaguru svatantra sid'dhaliṅgēśvarā. Read More