•  
  •  
  •  
  •  
Index   ವಚನ - 517    Search  
 
ಇನ್ನು ಆ ಶಿವಯೋಗೀಶ್ವರನ ಅಂತರಂಗದ ಮಾತ್ಮಕಾ ಮಣಿಮಾಲಿಕೆ ಎಂತಿರ್ದಿತೆಂದೊಡೆ: ಒಳಗೆ ಹವಳದ ಮಣಿಯೋಪಾದಿಯಲ್ಲಿ ಪ್ರಕಾಶಿಸುವ ಕುಂಡಲಿನಿ ಸರ್ಪವೆಂಬ ದಾರದಿಂದೆ ಪವಣಿಸಿದ ಮಾತೃಕಾ ಮಾಲಾಕ್ಷರಗಳಿಂದ ದೀಪ್ಯಮಾನವಾದ ಆರೋಹಣ ಅವರೋಹಣಗಳಿಂದ ನೂರು ವರ್ಣಂಗಳುಳ್ಳ ಆರೋಹದಿಂದ ಅಯ್ವತ್ತೊಂದು ಅಕ್ಷರಂಗಳು ಅವರೋಹದಿಂದ ಅಯ್ವತ್ತೊಂದು ಅಕ್ಷರಗಳು ಹಂಸ ಎಂಬ ಮಣಿಗಳಾದವು ಎಂಬುದರ್ಥ. ಎಂಟಾದಂಥ ಕ ಖ ಗ ಘ ಙ ಎಂಬ ಕ ವರ್ಗವು ಚ ಛ ಜ ಝ ಞ ಎಂಬ ಚ ವರ್ಗವು ಟ ಠ ಡ ಢ ಣ ಎಂಬ ಟ ವರ್ಗವು ತ ಥ ದ ಧ ನ ಎಂಬ ತ ವರ್ಗವು ಪ ಪ ಬ ಭ ಮ ಎಂಬ ಪ ವರ್ಗವು ಯ ರ ಲ ವ ಎಂಬ ಯ ವರ್ಗವು ಶ ಷ ಸ ಹ ಳ ಕ್ಷ ಎಂಬ ಶ ವರ್ಗವು ಅ ಆ ಇ ಈ ಉ ಊ ಋ ಋ ಲೃ ಲೃ ಏ ಐ ಒ ಔ ಅಂ ಅಃ ಎಂಬ ಎಂಟು ಹಂಚಿ ಮೇಲಾಗುಳ್ಳ ತಲೆಕೆಳಗಾಗಿ ಉಚ್ಚರಿಸುಗ ಮೊದಲು ವರ್ಗಂಗಳ ಎಂಟುಳ್ಳ ಹಂಸ ಎಂದು ವರ್ಣದ್ವಯಾತ್ಮಕವಾದ ಪರಬ್ರಹ್ಮವೆ ತೋರನೆಯದಾದ ಮೇರು ಶಿಖರವಾಗಿ ಉಳ್ಳ ಬಹುವಿಧವಾದ ಮಂತ್ರಂಗಳಿಗೆ ತಾಯಿದಾದಂಥ ಜ್ಞಾನವೆಂಬ ಮುಖ್ಯವಾದ ದೀಪದ ಮೊಳಕೆಯಾದಂಥ ಶ್ರೀಮತ್ತಾದ ಅಕರಾದಿ ಕ್ಷ ಕಾರಾಂತಮಾದ ವರ್ಣಂಗಳೆಂಬ ಅಂತರಂಗದ ಜಪ ಮಾಲಿಕೆಯನು ಆವಾಗಳು ನಮಸ್ಕರಿಸುತ್ತಿದ್ದೇನೆ. ವರ್ಗಾಷ್ಟಕಾಷ್ಟೋತ್ತರಾ ಎಂಬಲ್ಲಿ ಪ್ರತ್ಯಕ್ಷ ವರ್ಣಂಗಳಲ್ಲಿ ಸಮುದಾತ್ತ ವರ್ಣಂಗಳು ಬೇರೆ ಎಂಬ ಪಕ್ಷದಿಂದ ಅರ್ಥಾಂತರಮುಂಟು ಅದು ಹೇಗೆಂದೊಡೆ, ವರ್ಗಂಗಳಷ್ಟಕದಿಂದ ಎಂಟು ಮೊದಲಾಗುಳ್ಳ ನೂರ ಮಣಿಗಳುಳ್ಳದೆಂಬುದರ್ಥ. ಇದರಿಂದೆ ಜಪಮಾಲಿಕೆಗೆ ನೂರೆಂಟುಮಣಿಗಳೆಂದು ಹೇಳುವರಯ್ಯ ಶಾಂತವೀರೇಶ್ವರಾ
Transliteration Innu ā śivayōgīśvarana antaraṅgada mātmakā maṇimālike entirditendoḍe: Oḷage havaḷada maṇiyōpādiyalli prakāśisuva kuṇḍalini sarpavemba dāradinde pavaṇisida mātr̥kā mālākṣaragaḷinda dīpyamānavāda ārōhaṇa avarōhaṇagaḷinda nūru varṇaṅgaḷuḷḷa ārōhadinda ayvattondu akṣaraṅgaḷu avarōhadinda ayvattondu akṣaragaḷu hansa emba maṇigaḷādavu embudartha. Eṇṭādantha ka kha ga gha ṅa emba ka vargavu ca cha ja jha ña emba ca vargavu ṭa ṭha ḍa ḍha ṇa emba ṭa vargavu ta tha da dha na emba ta vargavu pa pa ba bha ma emba pa vargavu ya ra la va emba ya vargavu śa ṣa sa ha ḷa kṣa emba śa vargavu a ā i ī u ū r̥ r̥ Lr̥ lr̥ ē ai o au aṁ aḥ emba eṇṭu han̄ci mēlāguḷḷa talekeḷagāgi uccarisuga modalu vargaṅgaḷa eṇṭuḷḷa hansa endu varṇadvayātmakavāda parabrahmave tōraneyadāda mēru śikharavāgi uḷḷa bahuvidhavāda mantraṅgaḷige tāyidādantha jñānavemba mukhyavāda dīpada moḷakeyādantha śrīmattāda akarādi kṣa kārāntamāda varṇaṅgaḷemba antaraṅgada japa mālikeyanu āvāgaḷu namaskarisuttiddēne. Vargāṣṭakāṣṭōttarā emballi pratyakṣa varṇaṅgaḷalli Samudātta varṇaṅgaḷu bēre emba pakṣadinda arthāntaramuṇṭu adu hēgendoḍe, vargaṅgaḷaṣṭakadinda eṇṭu modalāguḷḷa nūra maṇigaḷuḷḷadembudartha. Idarinde japamālikege nūreṇṭumaṇigaḷendu hēḷuvarayya śāntavīrēśvarā