ಶಿವಪ್ರಸಾದವ ಬೀಸರವೋಗಬಾರದೆಂದು
ಎಚ್ಚರಿಕೆ ಅವಧಾನದಿಂದರ್ಪಿಸಿ
ಪ್ರಕ್ಷಾಳನ ಲೇಹ್ಯ ಅಂಗಲೇಪನದಿಂದ
ಅವಧಾನವ ಮಾಡುತಿಪ್ಪ ಪರಮ ವಿರಕ್ತರೇ
ಪದಾರ್ಥವಂ ತಂದು ಕರದಲ್ಲಿ ಕೊಟ್ಟರೇನ ಮಾಡುವಿರಯ್ಯ?
ಭಕ್ತರು ಕ್ರೀವಿಡಿದು ಪದಾರ್ಥವ ಪರಿಯಾಣದಲ್ಲಿ ತಂದರೆ
ಭಯ ಭಕ್ತಿಯಿಂದ ವೈಯಾರದಲ್ಲಿ
ಪ್ರಸಾದವ ಸಲಿಸುವುದೇ ಎನ್ನ ಕ್ರೀಗೆ ಸಂದಿತು.
ಅದಲ್ಲದೆ ಎನ್ನ ಕರಪಾತ್ರೆಗೆ ತಂದು ಭಿಕ್ಷವ ನೀಡಿದರೆ
ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ.
ಅದು ಎನ್ನ ಜ್ಞಾನಕ್ಕೆ ಸಂದಿತು.
ಅದು ಹೇಗೆಂದೊಡೆ
ಹರಿಶಬ್ದವ ಕೇಳೆನೆಂದು ಭಾಷೆಯಂ ಮಾಡಿದ
ಶಿವಭಕ್ತೆ ಸತ್ಯಕ್ಕನ ಮನೆಗೆ
ಶಿವನು ಜಂಗಮವಾಗಿ ಭಿಕ್ಷಕ್ಕೆ ಬಂದು `ಹರಿ' ಎನ್ನಲೊಡನೆ
ಹರನ ಬಾಯ ಹುಟ್ಟಿನಲ್ಲಿ ತಿವಿದಳು.
ಅದು ಅವಳ ಭಾಷೆಗೆ ಸಂದಿತು.
ಅವಳು ಶಿವದ್ರೋಹಿಯೇ? ಅಲ್ಲ.
ನಾನು ಸಂಸಾರ ಸಾಗರದಲ್ಲಿ ಬಿದ್ದು ಏಳುತ್ತ ಮುಳುಗುತ್ತ
ಕುಟುಕುನೀರ ಕುಡಿಯುವ ಸಮಯದಲ್ಲಿ
ಶಿವನ ಕೃಪೆಯಿಂದ ನನ್ನಿಂದ ನಾನೇ ತಿಳಿದು ನೋಡಿ ಎಚ್ಚತ್ತು
ಮೂರು ಪಾಶಂಗಳ ಕುಣಿಕೆಯ ಕಳೆದು
ಭೋಗ ಭುಕ್ತ್ಯಾದಿಗಳನತಿಗಳೆದು
ಅಹಂಕಾರ ಮಮಕಾರಗಳನಳಿದು
ಉಪಾಧಿಕೆ ಒಡಲಾಶೆಯಂ ಕೆಡೆಮೆಟ್ಟಿ
ಪೊಡವಿಯ ಸ್ನೇಹಮಂ ಹುಡಿಗುಟ್ಟಿ
ಉಟ್ಟುದ ತೊರೆದು ಊರ ಹಂಗಿಲ್ಲದೆ ನಿರ್ವಾಣಿಯಾಗಿ
ನಿಜಮುಕ್ತಿ ಸೋಪಾನವಾಗಿಪ್ಪ ಕರಪಾತ್ರೆ ಎಂಬ ಬಿರಿದು
ಬಸವಾದಿಪ್ರಮಥರರಿಕೆಯಾಗಿ
ಶಿವನ ಮುಂದೆ ಕಡುಗಲಿಯಾಗಿ
ನಾನು ಕಟ್ಟದೆ ಆ ಬಿರುದಿಂಗೆ ಹಿಂದು ಮುಂದಾದರೆ
ಶಿವನು ಮೂಗುಕೊಯ್ದು ಕನ್ನಡಿಯ ತೋರಿ
ಅಣಕವಾಡಿ ನಗುತಿಪ್ಪನೆಂದು
ನಾನು ಕರಪಾತ್ರೆಯಲ್ಲಿ ಸಂದೇಹವಿಲ್ಲದೆ ಸಲಿಸುತ್ತಿಪ್ಪೆನು.
ಆ ಸಮಯದಲ್ಲಿ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ
ಇದು ಎನ್ನ ಸಮ್ಯಜ್ಞಾನದ ಬಿರುದಿಗೆ ಸಂದಿತು.
ನಾನು ಪ್ರಸಾದದ್ರೋಹಿಯೆ? ಅಲ್ಲ.
ಇಂತಲ್ಲದೆ.
ನಾನು ಮನಸ್ಸಿಗೆ ಬಂದಂತೆ ಉಂಡುಟ್ಟಾಡಿ
ರೂಪ ರಸ ಗಂಧವೆಂಬ ತ್ರಿವಿಧಪ್ರಸಾದದಲ್ಲಿ
ಉದಾಸೀನವ ಮಾಡಲಮ್ಮೆನು.
ಮಾಡಿದೆನಾದಡೆ
ವರಾಹ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು.
ಇದ ಕಡೆಮುಟ್ಟಿ ನಡೆಸು ನಡೆಸಯ್ಯಾ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Transliteration Śivaprasādava bīsaravōgabāradendu
eccarike avadhānadindarpisi
prakṣāḷana lēhya aṅgalēpanadinda
avadhānava māḍutippa parama viraktarē
padārthavaṁ tandu karadalli koṭṭarēna māḍuvirayya?
Bhaktaru krīviḍidu padārthava pariyāṇadalli tandare
bhaya bhaktiyinda vaiyāradalli
prasādava salisuvudē enna krīge sanditu.
Adallade enna karapātrege tandu bhikṣava nīḍidare
koṇḍudē prasāda okkudē padārtha.
Adu enna jñānakke sanditu.
Adu hēgendoḍe
hariśabdava kēḷenendu bhāṣeyaṁ māḍida
śivabhakte satyakkana manege
Śivanu jaṅgamavāgi bhikṣakke bandu `hari' ennaloḍane
harana bāya huṭṭinalli tividaḷu.
Adu avaḷa bhāṣege sanditu.
Avaḷu śivadrōhiyē? Alla.
Nānu sansāra sāgaradalli biddu ēḷutta muḷugutta
kuṭukunīra kuḍiyuva samayadalli
śivana kr̥peyinda nanninda nānē tiḷidu nōḍi eccattu
mūru pāśaṅgaḷa kuṇikeya kaḷedu
bhōga bhuktyādigaḷanatigaḷedu
ahaṅkāra mamakāragaḷanaḷidu
upādhike oḍalāśeyaṁ keḍemeṭṭi
Poḍaviya snēhamaṁ huḍiguṭṭi
uṭṭuda toredu ūra haṅgillade nirvāṇiyāgi
nijamukti sōpānavāgippa karapātre emba biridu
basavādipramathararikeyāgi
śivana munde kaḍugaliyāgi
nānu kaṭṭade ā birudiṅge hindu mundādare
śivanu mūgukoydu kannaḍiya tōri
aṇakavāḍi nagutippanendu
nānu karapātreyalli sandēhavillade salisuttippenu.
Ā samayadalli koṇḍudē prasāda okkudē padārtha
Idu enna samyajñānada birudige sanditu.
Nānu prasādadrōhiye? Alla.
Intallade.
Nānu manas'sige bandante uṇḍuṭṭāḍi
rūpa rasa gandhavemba trividhaprasādadalli
udāsīnava māḍalam'menu.
Māḍidenādaḍe
varāha kukkuṭana basuralli bappudu tappadu.
Ida kaḍemuṭṭi naḍesu naḍesayyā,
ghanaliṅgiya mōhada cennamallikārjuna.