ಜ್ಞಾನಪಾದೋದಕದಲ್ಲಿ ಮೂರು ಸಂಬಂಧವಾಗುವವು,
ಅದೆಂತೆಂದಡೆ:
ಮಹಾಂತನ ಪಾದವನ್ನು ಪಡೆದುಕೊಂಬಂತಹ ಭಕ್ತನು
ಆ ಮಹೇಶ್ವರನ ಉನ್ನತಾಸನದಲ್ಲಿ ಮೂರ್ತಗೊಳಿಸಿ
ಪಾದಪ್ರಕ್ಷಾಲನೆಯ ಮಾಡಿದ ನಂತರದಲ್ಲಿ
ದೀಕ್ಷಾಪಾದೋದಕವ ಮಾಡಿ, ಶುಭ್ರವಸ್ತ್ರದಿಂದ ದ್ರವವ ತೆಗೆದು
ಅಷ್ಟವಿಧಾರ್ಚನೆಯಿಂದ ಲಿಂಗಪೂಜೆಯ ಮಾಡಿಸಿ, ಮರಳಿ ತಾನು
“ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್|
ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇ ನಮಃ”||
ಎಂದು ಅಷ್ಟಾಂಗಯುಕ್ತನಾಗಿ ವಂದನಂಗೈದು,
ಪಾದಪೂಜೆಗೆ ಅಪ್ಪಣೆಯ ತೆಗೆದುಕೊಂಡು,
ಅವರ ಸಮ್ಮುಖದಲ್ಲಿ ಗದ್ದುಗೆಯ ಹಾಕಿಕೊಂಡು,
ಅದರ ಮೇಲೆ ಮೂರ್ತವ ಮಾಡಿಕೊಂಡು,
ತನ್ನ ಲಿಂಗವ ನಿರೀಕ್ಷಿಸಿ,
ವಾಮಹಸ್ತದಲ್ಲಿ ನಿರಂಜನ ಪ್ರಣವವ
ಲಿಖಿಸಿ ಪೂಜೆಯ ಮಾಡಿ,
ಆಮೇಲೆ ಜಂಗಮದ ಪಾದವ
ಹಿಡಿದು ಪೂಜೆಯ ಮಾಡಿ
ಆ ಪೂಜೆಯನಿಳುಹಿ,
ಅದೇ ಉದಕದ ಪಾತ್ರೆಯಲ್ಲಿ
ಶಿಕ್ಷಾಪಾದೋದಕವ ಮಾಡಿ,
ಪಾದದ್ರವವ ತೆಗೆದು ಐದಂಗುಲಿಗಳಲ್ಲಿ
ಪಂಚಾಕ್ಷರವ ಲೇಖನವ ಮಾಡಿ,
ಮಧ್ಯದಲ್ಲಿ ಮೂಲಪ್ರಣವವ ಬರೆದು,
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ
ಪೂಜೆಯ ಮಾಡಬೇಕು.
ಶಿವಧರ್ಮೋತ್ತರೇ:
“ಲಿಂಗಾರ್ಪಿತಪ್ರಸಾದಂ ಚ ನ ದದ್ಯಾಚ್ಚರಲಿಂಗಕೇ|
ಚರಾರ್ಪಿತಪ್ರಸಾದಂ ಚ ದದ್ಯಾಲ್ಲಿಂಗಾಯ ವೈ ಶುಭಮ್”||
ಶಿವರಹಸ್ಯೇ :
“ಅನಾದಿಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್|
ಅನಾದಿಜಂಗಮಾಯೈವಂ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಮ್”||
ಎಂದುದಾಗಿ
ಲಿಂಗಕ್ಕೆ ತೋರಿ ಪಾದವ ಪೂಜಿಸಲಾಗದು.
ಅದೆಂತೆಂದಡೆ:
ಗುರುವಿಗೂ ಲಿಂಗಕ್ಕೂ ಚೈತನ್ಯಸ್ವರೂಪ
ಜಂಗಮವಾದ ಕಾರಣ,
ಆ ಜಂಗಮದ ಪ್ರಸಾದವ ಲಿಂಗಕ್ಕೆ ತೋರಬೇಕಲ್ಲದೆ
ಲಿಂಗಪ್ರಸಾದವ ಪಾದಕ್ಕೆ ತೋರಲಾಗದು.
ಅದೇನು ಕಾರಣವೆಂದಡೆ:
ಗುರುಲಿಂಗಜಂಗಮಕ್ಕೆ ಅನಾದಿಜಂಗಮವೆ
ಚೈತನ್ಯಸ್ವರೂಪವಾದ ಕಾರಣ,
ಆ ಜಂಗಮವೆ ಮುಖ್ಯಸ್ವರೂಪ.
ಇಂತಪ್ಪ ಜಂಗಮಪಾದವೆ
ಪರಬ್ರಹ್ಮಕ್ಕೆ ಆಧಾರವಾಗಿಪ್ಪುದು.
ಆ ಪಾದವ ಬಿಟ್ಟು ಪರವ ಕಂಡುದಿಲ್ಲವೆಂದು
ಶ್ರುತಿಗಳು ಪೊಗಳುತಿರ್ದ ಕಾರಣ,
ಇಂತಪ್ಪ ಚರಮೂರ್ತಿಯ ಪಾದವನು
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ
ಅರ್ಚಿಸಿದಂತಹುದೆ ಲಿಂಗಪೂಜೆ.
ಆಮೇಲೆ ಆ ಮೂರ್ತಿಯ ಉಭಯಪಾದಗಳ
ಹಿಮ್ಮಡ ಸೋಂಕುವಂತೆ ಹಸ್ತವ ಮಡಗಿ
ಲಲಾಟವ ಮುಟ್ಟಿ ನಮಸ್ಕರಿಸಿ ಆ ಪೂಜೆಯನಿಳುಹಿ,
ಆ ಶಿಕ್ಷಾಪಾದೋದಕವನು
ಬಲದಂಗುಷ್ಠ ಮೇಲೆ ಷಡಕ್ಷರಮಂತ್ರವ
ಆರುವೇಳೆ ಸ್ಮರಿಸುತ್ತ ನೀಡಿ,
ಅಲ್ಲಿ ಇಷ್ಟಲಿಂಗವೆಂದು ಭಾವಿಸಿ,
ಎಡದಂಗುಷ್ಠದ ಮೇಲೆ ಪಂಚಾಕ್ಷರೀಮಂತ್ರವ
ಐದುವೇಳೆ ಸ್ಮರಿಸುತ್ತ ನೀಡಿ,
ಅಲ್ಲಿ ಪ್ರಾಣಲಿಂಗವೆಂದು ಭಾವಿಸಿ,
ಮಧ್ಯದಲ್ಲಿ `ಓಂ ಬಸವಾಯ ನಮಃʼ ಎಂದು
ಒಂದುವೇಳೆ ಒಂದು ಪುಷ್ಪವ ಧರಿಸಿ ಸ್ಮರಿಸುತ್ತ ನೀಡಿ,
ಅಲ್ಲಿ ಭಾವಲಿಂಗವೆಂದು ಭಾವಿಸಿ,
ನೀಡಿದ ಉದಕವೆ ಬಟ್ಟಲಲಿ
ನಿಂದು ಮಹತ್ಪಾದವೆಂದೆನಿಸುವುದು,
ಈ ಮಹತ್ಪಾದದಲ್ಲಿ ದ್ರವವ
ತೆಗೆದು ಮತ್ತೆ ಪೂಜಿಸಬೇಕಾದಡೆ,
ಬಹುಪುಷ್ಪವ ಧರಿಸದೆ ಒಂದೆ ಪುಷ್ಪವ ಧರಿಸಬೇಕು.
ಅದೇನು ಕಾರಣವೆಂದಡೆ;
ಪಶ್ಚಿಮಚಕ್ರದಲ್ಲಿ ಸಂಬಂಧವಾದ ನಿರಂಜನ ಜಂಗಮಕ್ಕೆ
ಏಕದಳವನುಳ್ಳ ಒಂದೆ ಪುಷ್ಪವು ಮುಖ್ಯವಾದ ಕಾರಣ,
ಏಕಕುಸುಮವನೆ ಧರಿಸಿ ಪೂಜೆಯಮಾಡಿ
ನಮಸ್ಕರಿಸುವುದೆ ಜಂಗಮಪೂಜೆ.
ಆ ಪೂಜೆಯ ತೆಗೆದ ಶಿಷ್ಯನು `ಶರಣಾರ್ಥಿ ಸ್ವಾಮಿʼ,
ಎಂದು ಬಟ್ಟಲವನೆತ್ತಿಕೊಟ್ಟಲ್ಲಿ,
ಕರ್ತೃವಾದ ಜಂಗಮವು ಆ ಬಟ್ಟಲಲ್ಲಿರ್ದ ತೀರ್ಥವನು
ತಮ್ಮ ಪಂಚಾಂಗುಲಿಗಳ ಪಂಚಪ್ರಾಣವೆಂದು ಭಾವಿಸಿ,
ಮೂಲಮಂತ್ರದಿಂದ ಮೂರುವೇಳೆ
ಪ್ರದಕ್ಷಿಣವ ಮಾಡಿ ನಮಸ್ಕರಿಸಿ,
ಲಿಂಗದ ಮಸ್ತಕದ ಮೇಲೆ ಮೂರುವೇಳೆ
ಚತುರಂಗುಲ ಪ್ರಮಾಣಿನಲ್ಲಿ ಲಿಂಗವ ಮುಟ್ಟದೆ ನೀಡಿ,
ಆ ಪಂಚಾಂಗುಲಿಗಳ ತಮ್ಮ ಜಿಹ್ವೆಯಲ್ಲಿ ಸ್ವೀಕರಿಸುವಲ್ಲಿ
ಗುರುಪಾದೋದಕವೆನಿಸುವುದು; ಅದೇ ದೀಕ್ಷಾಪಾದೋದಕ.
ತಾವು ಲಿಂಗವನೆತ್ತಿ ಸಲಿಸಿದುದೆ ಲಿಂಗಪಾದೋದಕವೆನಿಸುವುದು;
ಅದೇ ಶಿಕ್ಷಾಪಾದೋದಕ.
ಬಟ್ಟಲನೆತ್ತಿ ಸಲ್ಲಿಸಿದಲ್ಲಿ ಜಂಗಮಪಾದೋದಕವೆನಿಸುವುದು;
ಅದೇ ಜ್ಞಾನಪಾದೋದಕ.
ಈ ರೀತಿಯಲ್ಲಿ ಮಾಹೇಶ್ವರನು ಸಲಿಸಿದ ಬಳಿಕ
`ಶರಣಾರ್ಥಿʼ ಎಂದು ಶಿಷ್ಯೋತ್ತಮನು ಎದ್ದು,
“ಲಲಾಟಂ ಚ ಭುಜದ್ವಂದ್ವಂ ಪಾಣಿಯುಗ್ಮಮುರಸ್ತಥಾ|
ಅಂಗುಷ್ಠಯುಗಲಂ ಪ್ರೋಕ್ತಂ ಪ್ರಣಾಮೋsಷ್ಟಾಂಗಮುಚ್ಯತೇ”||
ಎಂದು ಭೃತ್ಯೋಪಚಾರಗಳಿಂದ ಪ್ರಣತಿಂಗೈದು
ಅಪ್ಪಣೆಯ ಪಡೆದುಕೊಂಡು ಬಂದು,
ಆ ಜಂಗಮದ ಮರ್ಯಾದೆಯಲ್ಲಿಯೆ
ತಾನು ಸ್ವೀಕರಿಸುವುದು.
ಇದೇ ರೀತಿಯಲ್ಲಿ ಗುರುಶಿಷ್ಯರಿರ್ವರು
ಸಮರಸಭಾವದಿಂದ ಸೇವನೆ ಮಾಡಿದಲ್ಲಿ,
ಆ ಶಿಷ್ಯೋತ್ತಮನೆ ನಿಜಶಿಷ್ಯನಾದ ಕಾರಣ,
ಗುರುವೆ ಶಿಷ್ಯ, ಶಿಷ್ಯನೆ ಗುರು.
ಈ ಎರಡರ ಮರ್ಮವು ಆದ ಬಗೆ ಹೇಗೆಂದಡೆ:
ಆ ಶಿಷ್ಯನು ಪಡೆದುಕೊಂಡ ಪಾದೋದಕವ
ಆ ಗುರು ಭಕ್ತಿಮುಖದಿಂದ ತೆಗೆದುಕೊಂಡಲ್ಲಿ
ಗುರುವೆ ಶಿಷ್ಯನಾಗಿಪ್ಪನು.
ಆ ಗುರು ಸೇವನೆಯ ಮಾಡಿ ಉಳಿದ ಉದಕವ
ಶಿಷ್ಯ ಭಕ್ತಿಭಾವದಿಂದ ಸೇವನೆ
ಮಾಡಿದಲ್ಲಿಗೆ ತಚ್ಛಿಷ್ಯನಾದಹನು.
ಈ ಮರ್ಮವ ತಿಳಿದು
ಗುರುಶಿಷ್ಯರೀರ್ವರು ಸಲಿಸಿದ ಬಳಿಕ
ಕೆಲವು ಭಕ್ತಮಾಹೇಶ್ವರರು ಸಲ್ಲಿಸುವುದು.
ಇನ್ನು ನಿಚ್ಚಪ್ರಸಾದಿಗಳಿಗೆ, ಸಮಯಪ್ರಸಾದಿಗಳಿಗೆ
ಆಯಾಯ ತತ್ಕಾಲದಲ್ಲಿ ತ್ರಿವಿಧೋದಕವಾಗಿಪ್ಪುದು;
ಇದೇ ಆಚರಣೆ. ಇದನರಿಯದಾಚರಿಸುವವರಿಗೆ
ನಿಮ್ಮ ನಿಲವರಿಯಬಾರದು ಕಾಣಾ,
ಕೂಡಲಚೆನ್ನಸಂಗಮದೇವಾ.
Transliteration Jñānapādōdakadalli mūru sambandhavāguvavu,
adentendaḍe:
Mahāntana pādavannu paḍedukombantaha bhaktanu
ā mahēśvarana unnatāsanadalli mūrtagoḷisi
pādaprakṣālaneya māḍida nantaradalli
dīkṣāpādōdakava māḍi, śubhravastradinda dravava tegedu
aṣṭavidhārcaneyinda liṅgapūjeya māḍisi, maraḷi tānu
“caitan'yaṁ śāśvataṁ śāntaṁ vyōmātītaṁ niran̄janam|
nādabindu kalātītaṁ tasmai śrīguravē namaḥ”||
endu aṣṭāṅgayuktanāgi vandanaṅgaidu,
pādapūjege appaṇeya tegedukoṇḍu,
avara sam'mukhadalli gaddugeya hākikoṇḍu,
Adara mēle mūrtava māḍikoṇḍu,
tanna liṅgava nirīkṣisi,
vāmahastadalli niran̄jana praṇavava
likhisi pūjeya māḍi,
āmēle jaṅgamada pādava
hiḍidu pūjeya māḍi
ā pūjeyaniḷuhi,
adē udakada pātreyalli
śikṣāpādōdakava māḍi,
pādadravava tegedu aidaṅguligaḷalli
pan̄cākṣarava lēkhanava māḍi,
madhyadalli mūlapraṇavava baredu,
aṣṭavidhārcane ṣōḍaśōpacāradinda
pūjeya māḍabēku.
Śivadharmōttarē:
“Liṅgārpitaprasādaṁ ca na dadyāccaraliṅgakē|
carārpitaprasādaṁ ca dadyālliṅgāya vai śubham”||
śivarahasyē:
“Anādijaṅgamaścaiva ādiliṅgasthalaṁ bhavēt|
anādijaṅgamāyaivaṁ iṣṭōcchiṣṭaṁ tu kilbiṣam”||
endudāgi
liṅgakke tōri pādava pūjisalāgadu.
Adentendaḍe:
Guruvigū liṅgakkū caitan'yasvarūpa
jaṅgamavāda kāraṇa,
ā jaṅgamada prasādava liṅgakke tōrabēkallade
liṅgaprasādava pādakke tōralāgadu.
Adēnu kāraṇavendaḍe:
Guruliṅgajaṅgamakke anādijaṅgamave
caitan'yasvarūpavāda kāraṇa,
ā jaṅgamave mukhyasvarūpa.
Intappa jaṅgamapādave
Parabrahmakke ādhāravāgippudu.
Ā pādava biṭṭu parava kaṇḍudillavendu
śrutigaḷu pogaḷutirda kāraṇa,
intappa caramūrtiya pādavanu
aṣṭavidhārcane ṣōḍaśōpacāradinda
arcisidantahude liṅgapūje.
Āmēle ā mūrtiya ubhayapādagaḷa
him'maḍa sōṅkuvante hastava maḍagi
lalāṭava muṭṭi namaskarisi ā pūjeyaniḷuhi,
ā śikṣāpādōdakavanu
baladaṅguṣṭha mēle ṣaḍakṣaramantrava
āruvēḷe smarisutta nīḍi,
Alli iṣṭaliṅgavendu bhāvisi,
eḍadaṅguṣṭhada mēle pan̄cākṣarīmantrava
aiduvēḷe smarisutta nīḍi,
alli prāṇaliṅgavendu bhāvisi,
madhyadalli `ōṁ basavāya namaḥʼ endu
onduvēḷe ondu puṣpava dharisi smarisutta nīḍi,
alli bhāvaliṅgavendu bhāvisi,
nīḍida udakave baṭṭalali
nindu mahatpādavendenisuvudu,
ī mahatpādadalli dravava
tegedu matte pūjisabēkādaḍe,
bahupuṣpava dharisade onde puṣpava dharisabēku.
Adēnu kāraṇavendaḍe;
Paścimacakradalli sambandhavāda niran̄jana jaṅgamakke
ēkadaḷavanuḷḷa onde puṣpavu mukhyavāda kāraṇa,
ēkakusumavane dharisi pūjeyamāḍi
namaskarisuvude jaṅgamapūje.
Ā pūjeya tegeda śiṣyanu `śaraṇārthi svāmiʼ,
endu baṭṭalavanettikoṭṭalli,
kartr̥vāda jaṅgamavu ā baṭṭalallirda tīrthavanu
tam'ma pan̄cāṅguligaḷa pan̄caprāṇavendu bhāvisi,
mūlamantradinda mūruvēḷe
pradakṣiṇava māḍi namaskarisi,
liṅgada mastakada mēle mūruvēḷe
caturaṅgula pramāṇinalli liṅgava muṭṭade nīḍi,
ā pan̄cāṅguligaḷa tam'ma jihveyalli svīkarisuvalli
Gurupādōdakavenisuvudu; adē dīkṣāpādōdaka.
Tāvu liṅgavanetti salisidude liṅgapādōdakavenisuvudu;
adē śikṣāpādōdaka.
Baṭṭalanetti sallisidalli jaṅgamapādōdakavenisuvudu;
adē jñānapādōdaka.
Ī rītiyalli māhēśvaranu salisida baḷika
`śaraṇārthiʼ endu śiṣyōttamanu eddu,
“lalāṭaṁ ca bhujadvandvaṁ pāṇiyugmamurastathā|
aṅguṣṭhayugalaṁ prōktaṁ praṇāmōsṣṭāṅgamucyatē”||
endu bhr̥tyōpacāragaḷinda praṇatiṅgaidu
appaṇeya paḍedukoṇḍu bandu,
ā jaṅgamada maryādeyalliye
tānu svīkarisuvudu.
Idē rītiyalli guruśiṣyarirvaru
samarasabhāvadinda sēvane māḍidalli,
ā śiṣyōttamane nijaśiṣyanāda kāraṇa,
guruve śiṣya, śiṣyane guru.
Ī eraḍara marmavu āda bage hēgendaḍe:
Ā śiṣyanu paḍedukoṇḍa pādōdakava
ā guru bhaktimukhadinda tegedukoṇḍalli
guruve śiṣyanāgippanu.
Ā guru sēvaneya māḍi uḷida udakava
śiṣya bhaktibhāvadinda sēvane
māḍidallige tacchiṣyanādahanu.
Ī marmava tiḷidu
guruśiṣyarīrvaru salisida baḷika
kelavu bhaktamāhēśvararu sallisuvudu.
Innu niccaprasādigaḷige, samayaprasādigaḷige
āyāya tatkāladalli trividhōdakavāgippudu;
idē ācaraṇe. Idanariyadācarisuvavarige
nim'ma nilavariyabāradu kāṇā,
kūḍalacennasaṅgamadēvā.