ನಮ್ಮ ಪುರಾತನರ ವಚನಂಗಳನೆಲ್ಲ
ಓದದೆ ಇದ್ದಾರು,
ಓದಿಯೂ ನಂಬಿಗೆ ಇಲ್ಲದೆ ಇದ್ದಾರು,
ನೂರಕ್ಕೊಬ್ಬರಲ್ಲದೆ ನಂಬರು.
ನಮ್ಮ ಆದ್ಯರ ವಚನಂಗಳ ಜರೆದಾರು,
ತಮ್ಮ ಕವಿತ್ವವ ಮೆರೆದಾರು,
ನಮ್ಮ ಆದ್ಯರ ವಚನಂಗಳಿಂದೊದವಿದ
ಜ್ಞಾನವೆಂಬುದನರಿಯರು.
ತಾಯಿಯಿಂದ ಮಕ್ಕಳಾದರೆಂಬುದನರಿಯರು.
ಊರೆಲ್ಲಕ್ಕೆ ಹುಟ್ಟಿದ ಹಾಗೆ ನುಡಿದಾರು.
ನಮ್ಮ ಪುರಾತನರ ವಚನವೆ
ತಾಯಿ ತಂದೆ ಎಂದರಿಯರು.
ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು.
ನಮ್ಮ ಆದ್ಯರ ವಚನ ಮದ ಮಾತ್ಸರ್ಯಾದಿ ಅರಿಷಡ್ವರ್ಗ
ಸಪ್ತವ್ಯಸನ ಪಂಚೇಂದ್ರಿಯ ದಶವಾಯುಗಳಿಚ್ಛೆಗೆ
ಹರಿವ ಮನವ ಸ್ವಸ್ಥವಾಗಿ ನಿಲಿಸಿತ್ತು.
ನಮ್ಮ ಆದ್ಯರ ವಚನ ಅಂಗೇಂದ್ರಿಯಂಗಳ
ಲಿಂಗೇಂದ್ರಿಯಂಗಳೆನಿಸಿತ್ತು.
ನಮ್ಮ ಆದ್ಯರ ವಚನ ನೂರೊಂದುಸ್ಥಲವ
ಮೀರಿದ ಮಹದಲ್ಲಿ ನೆಲಸಿತ್ತು.
ನಮ್ಮ ಆದ್ಯರ ವಚನ ಇನ್ನೂರಹದಿನಾರು ಲಿಂಗಕ್ಕೆ
ಸರ್ವೇಂದ್ರಿಯವ ಸನ್ಮತವ ಮಾಡಿ,
ಸಾಕಾರವ ಸವೆದು ನಿರಾಕಾರವನರಿದು
ನಿರವಯಲ ನಿತ್ಯಸುಖದಲ್ಲಿರಿಸಿತ್ತು.
ಇಂತಪ್ಪ ಆದ್ಯರ ವಚನಭಂಡಾರವ,
ನಮ್ಮ ಪ್ರಭುದೇವರು ಮುಖ್ಯವಾದ
ಏಳುನೂರೆಪ್ಪತ್ತು ಅಮರಗಣಂಗಳು
ಅಸಂಖ್ಯಾತ ಪುರಾತನರು,
ಪ್ರಮಥಗಣಂಗಳು
ಕೇಳಿ ಹೇಳಿ ಕೊಂಡಾಡಿದ ಕಾರಣ,
ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಸರ್ವಸುಖವ ಸೂರೆಗೊಂಡು ಸ್ವಯಲಿಂಗವಾದರು.
Transliteration Nam'ma purātanara vacanaṅgaḷanella
ōdade iddāru,
ōdiyū nambige illade iddāru,
nūrakkobbarallade nambaru.
Nam'ma ādyara vacanaṅgaḷa jaredāru,
tam'ma kavitvava meredāru,
nam'ma ādyara vacanaṅgaḷindodavida
jñānavembudanariyaru.
Tāyiyinda makkaḷādarembudanariyaru.
Ūrellakke huṭṭida hāge nuḍidāru.
Nam'ma purātanara vacanave
tāyi tande endariyaru.
Nam'ma ādyara vacana jñānada neleya tegedirisittu.
Nam'ma ādyara vacana mada mātsaryādi ariṣaḍvarga
saptavyasana pan̄cēndriya daśavāyugaḷicchege
hariva manava svasthavāgi nilisittu.
Nam'ma ādyara vacana aṅgēndriyaṅgaḷa
liṅgēndriyaṅgaḷenisittu.
Nam'ma ādyara vacana nūrondusthalava
mīrida mahadalli nelasittu.
Nam'ma ādyara vacana innūrahadināru liṅgakke
sarvēndriyava sanmatava māḍi,
sākārava savedu nirākāravanaridu
niravayala nityasukhadallirisittu.
Intappa ādyara vacanabhaṇḍārava,
nam'ma prabhudēvaru mukhyavāda
Ēḷunūreppattu amaragaṇaṅgaḷu
asaṅkhyāta purātanaru,
pramathagaṇaṅgaḷu
kēḷi hēḷi koṇḍāḍida kāraṇa,
nam'ma kūḍalacennasaṅgayyanalli
sarvasukhava sūregoṇḍu svayaliṅgavādaru.