ನಮ್ಮ ಶರಣ, ಅಂತರಂಗದ ಅಷ್ಟವಿಧಾರ್ಚನೆಯ ಮಾಡಿ
ಸುಜ್ಞಾನದೃಷ್ಟಿಯಿಂದ ನೋಡಲು
ಆ ಜ್ಯೋತಿರ್ಲಿಂಗ ಒಂದೆರಡಾಯಿತ್ತು,
ಎರಡು ಮೂರಾಯಿತ್ತು, ಮೂರಾರಾಯಿತ್ತು,
ಆರೊಂಬತ್ತಾಯಿತ್ತು,
ಒಂಬತ್ತು ಹದಿನೆಂಟಾಯಿತ್ತು,
ಹದಿನೆಂಟು ಮೂವತ್ತಾರಾಯಿತ್ತು;
ಆ ಮೂವತ್ತಾರೆ ಇನ್ನೂರ ಹದಿನಾರಾಯಿತ್ತು.
ಇನ್ನೂರ ಹದಿನಾರೆ ಸಾವಿರದೇಳನೂರಿಪ್ಪತ್ತೆಂಟಾಯಿತ್ತು.
ಆ ಲಿಂಗಂಗಳೆ ಶರಣನ ರೋಮದ ಕುಳಿಯಲ್ಲಿ ನಿಂದು
ಸರ್ವಾಂಗ ಲಿಂಗವಾಯಿತ್ತು.
ಆ ಲಿಂಗ ಶರಣಂಗೆ ಚೈತನ್ಯವಾಯಿತ್ತು.
ಆ ಶರಣನೆ ಲಿಂಗಕ್ಕೆ ಚೈತನ್ಯವಾಗಲು,
ಶರಣಸತಿ ಲಿಂಗಪತಿಯೆಂಬೆರಡಳಿದು
ಒಬ್ಬ ಶರಣನೆ ಉಳಿಯಲು
ಆ ಶರಣನ ಪಾದೋದಕವೆ
ಲಿಂಗಕ್ಕೆ ಅಭಿಷೇಕವಾಯಿತ್ತು.
ಆ ಶರಣನ ಪಾದಕ್ಕರ್ಪಿಸಿದ ಕುಸುಮವೆ
ಪ್ರಸಾದಪುಷ್ಫವಾಯಿತ್ತು.
ಆ ಶರಣನ ಪಾದಕ್ಕರ್ಪಿಸಿದ ಗಂಧಾಕ್ಷತೆಯೆ,
ತಾಂಬೂಲವೆ ಲಿಂಗಪ್ರಸಾದಗಳಾದವು.
ಆ ಶರಣನ ಸನ್ನಿಧಿಯಲ್ಲಿ ಪ್ರಕಾಶವಾದ
ಧೂಪದೀಪಂಗಳೆ ಲಿಂಗದ್ರವ್ಯಂಗಳಾಗಿ
ಆ ಶರಣನ ಪಾದಪೂಜಾದ್ರವ್ಯವೆ
ಲಿಂಗಪೂಜಾದ್ರವ್ಯವಾಗಿ ಆಚರಿಸುತಿರ್ದಲ್ಲಿ,
ಶರಣಸತಿ ಲಿಂಗಪತಿ ಎಂಬ ನ್ಯಾಯ ಒಂದಾಯಿತ್ತು.
ಲಿಂಗ ಹಿರಿದು ಅಂಗ ಕಿರಿದು
ಎಂಬ ನ್ಯಾಯ ಇಲ್ಲದೆ ಹೋಯಿತ್ತು.
ಅದೆಂತೆಂದಡೆ:
ದೀಪದಿಂದ ದೀಪ ಹುಟ್ಟಿದಲ್ಲಿ,
ಆವ ಆವ ದೀಪ ಮೊದಲೆಂಬುದು ಕಾಣದಂತೆ;
ಸರ್ಪ ಕಚ್ಚಿದ ಮನುಷ್ಯನ ಅಂಗವಿಷ,
ಒಂದು ಠಾವಿನಲ್ಲಿದೆಯೆಂದು ಕುರುಹಿಡಬಾರದಂತೆ,
ಲಿಂಗ ಪ್ರಾಣವಾದ ಶರಣಂಗೆ,
ಶರಣ ಪ್ರಾಣವಾದ ಲಿಂಗಕ್ಕೆ ಭೇದವಿಲ್ಲ-
ಹರಗುರು ವಾಕ್ಯದಲ್ಲಿ
ಶರಣ- ಲಿಂಗಾದಾಚರಣೆ ಇಂತಿಹುದು.
ಈ ಶರಣ- ಲಿಂಗದೂಷಣೆಯ
ಮಾಡುವ ದ್ರೋಹಿಗಳಿಗೆ
ನಾಯಕನರಕ ತಪ್ಪದು,
ಕೂಡಲಚೆನ್ನಸಂಗಮದೇವಾ.
Transliteration Nam'ma śaraṇa, antaraṅgada aṣṭavidhārcaneya māḍi
sujñānadr̥ṣṭiyinda nōḍalu
ā jyōtirliṅga onderaḍāyittu,
eraḍu mūrāyittu, mūrārāyittu,
ārombattāyittu,
ombattu hadineṇṭāyittu,
hadineṇṭu mūvattārāyittu;
ā mūvattāre innūra hadinārāyittu.
Innūra hadināre sāviradēḷanūrippatteṇṭāyittu.
Ā liṅgaṅgaḷe śaraṇana rōmada kuḷiyalli nindu
sarvāṅga liṅgavāyittu.
Ā liṅga śaraṇaṅge caitan'yavāyittu.
Ā śaraṇane liṅgakke caitan'yavāgalu,
śaraṇasati liṅgapatiyemberaḍaḷidu
obba śaraṇane uḷiyalu
Ā śaraṇana pādōdakave
liṅgakke abhiṣēkavāyittu.
Ā śaraṇana pādakkarpisida kusumave
prasādapuṣphavāyittu.
Ā śaraṇana pādakkarpisida gandhākṣateye,
tāmbūlave liṅgaprasādagaḷādavu.
Ā śaraṇana sannidhiyalli prakāśavāda
dhūpadīpaṅgaḷe liṅgadravyaṅgaḷāgi
ā śaraṇana pādapūjādravyave
liṅgapūjādravyavāgi ācarisutirdalli,
śaraṇasati liṅgapati emba n'yāya ondāyittu.
Liṅga hiridu aṅga kiridu
emba n'yāya illade hōyittu.
Adentendaḍe:
Dīpadinda dīpa huṭṭidalli,
āva āva dīpa modalembudu kāṇadante
Sarpa kaccida manuṣyana aṅgaviṣa,
ondu ṭhāvinallideyendu kuruhiḍabāradante,
liṅga prāṇavāda śaraṇaṅge,
śaraṇa prāṇavāda liṅgakke bhēdavilla-
haraguru vākyadalli
śaraṇa- liṅgādācaraṇe intihudu.
Ī śaraṇa- liṅgadūṣaṇeya
māḍuva drōhigaḷige
nāyakanaraka tappadu,
kūḍalacennasaṅgamadēvā.