ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ,
ರೋಮರೋಮವೆಲ್ಲ ಲಿಂಗ.
ಆ ಭಕ್ತಂಗೆ ಆಧಾರಸ್ಥಾನವೆ ನಿಜಸ್ಥಾನ.
ಆಧಾರಚಕ್ರದಲ್ಲಿ ನಾಲ್ಕೆಸಳಿನ ತಾವರೆ ಕಮಲದ ಮಧ್ಯದಲ್ಲಿ
ಬಾಲಾರ್ಕಕೋಟಿ ಸೂರ್ಯಪ್ರಕಾಶನುಳ್ಳುದು ಆಚಾರಲಿಂಗ.
ಆ ಭಕ್ತನ ಗುಹ್ಯದಲ್ಲಿ ಗುರುಲಿಂಗ,
ಆ ಭಕ್ತನ ಮಣಿಪೂರಕದಲ್ಲಿ ಶಿವಲಿಂಗ.
ಆ ಭಕ್ತನ ಅನಾಹತದಲ್ಲಿ ಜಂಗಮಲಿಂಗವಿಹುದು.
ಆ ಭಕ್ತನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಿಹುದು.
ಆ ಭಕ್ತನ ಭ್ರೂಮಧ್ಯದಲ್ಲಿ ಮಹಾಲಿಂಗವಿಹುದು.
ಆ ಭಕ್ತನ ಆಧಾರದಲ್ಲಿ ನಕಾರ ಪ್ರಣಮದ ಜನನವು.
ಆಣವಮಲ, ಮಾಯಾಮಲ,
ಕಾರ್ಮಿಕಮಲ ಅನಂತಕೋಟಿಗಳಿಗೆ
ನಕಾರವೇ ಮೂಲ.
ಇನ್ನೂರು ಹದಿನಾರು ಭುವನಂಗಳು
ಆ ಭಕ್ತನ ಗುದದಲ್ಲಿ ಬಿದ್ದಿದ್ದವಷ್ಟು
ಹದಿನೆಂಟುಧಾನ್ಯಕ್ಕೆ ಶಾಕಪತ್ರ
ಕಂದಮೂಲ ಫಲಾದಿಗಳಿಗೆ ಭೂಮಿ ಎಂದುದಾಗಿ.
ಉಂಬುವದು ಅಗ್ನಿ, ಉಡುವದು ಪೃಥ್ವಿ ಎಂದುದಾಗಿ.
ಈ ಜಗವೆಲ್ಲ ಮಲವನೆ ಭುಂಜಿಸಿ
ಮಲವನೆ ವಿಸರ್ಜನೆಯಂ ಮಾಡುವರು.
ಇದು ಕಾರಣ ಇದ ಕೊಂಬುವದು ಪ್ರಸಾದವಲ್ಲ.
ಕೊಟ್ಟಾತ ಗುರುವಲ್ಲ, ಕೊಂಡಾತ ಸದ್ಭಕ್ತನಲ್ಲ.
ಈ ಪ್ರಸಾದವ ಕೊಳ್ಳಬಲ್ಲರು ನಮ್ಮ ಶರಣರು.
ಪ್ರಸಾದವೆಂತೆಂದಡೆ: ಅವರ್ಣ, ಆದಿ, ಅವ್ಯಕ್ತ.
ಆ ನಾಮವು, ಭರ್ಗೋದೇವಾದಿ
ಪಂಚಮೂರ್ತಿಗಳಿಗೆ ಆಶ್ರಯವಾಯಿತು.
ಕರಣಚತುಷ್ಟಯಂಗಳಿಗೆ ನಿಲುಕದು.
ಪ್ರಾಣಾದಿ ವಾಯುಗಳಿಗೆ,
ಶ್ರೋತ್ರಾದಿ ಜ್ಞಾನೇಂದ್ರಿಯಂಗಳಿಗೆ ಅಗಮ್ಯ.
ವಾಕ್ಕಾದಿ ಕರ್ಮೇಂದ್ರಿಯಗಳಿಗೆ ತೋರದು.
ನಿಜಾನಂದ ನಿತ್ಯಪರಿಪೂರ್ಣ ಪ್ರಸಾದವು
ಚೆನ್ನಯ್ಯಪ್ರಿಯ ನಿರ್ಮಾಯ ಪ್ರಭುವೆ,
ನಿಮ್ಮ ಶರಣರಿಗಲ್ಲದೆ ಉಳಿದ ಜಡಜೀವಿಗಳಿಗೆ ಅಸಾಧ್ಯ.
Transliteration Prasāda sōṅkida tanuvella liṅgamaya,
rōmarōmavella liṅga.
Ā bhaktaṅge ādhārasthānave nijasthāna.
Ādhāracakradalli nālkesaḷina tāvare kamalada madhyadalli
bālārkakōṭi sūryaprakāśanuḷḷudu ācāraliṅga.
Ā bhaktana guhyadalli guruliṅga,
ā bhaktana maṇipūrakadalli śivaliṅga.
Ā bhaktana anāhatadalli jaṅgamaliṅgavihudu.
Ā bhaktana viśud'dhicakradalli prasādaliṅgavihudu.
Ā bhaktana bhrūmadhyadalli mahāliṅgavihudu.
Ā bhaktana ādhāradalli nakāra praṇamada jananavu.
Āṇavamala, māyāmala,
kārmikamala anantakōṭigaḷige
nakāravē mūla.
Innūru hadināru bhuvanaṅgaḷu
ā bhaktana gudadalli biddiddavaṣṭu
hadineṇṭudhān'yakke śākapatra
kandamūla phalādigaḷige bhūmi endudāgi.
Umbuvadu agni, uḍuvadu pr̥thvi endudāgi.
Ī jagavella malavane bhun̄jisi
malavane visarjaneyaṁ māḍuvaru.
Idu kāraṇa ida kombuvadu prasādavalla.
Koṭṭāta guruvalla, koṇḍāta sadbhaktanalla.
Ī prasādava koḷḷaballaru nam'ma śaraṇaru.
Prasādaventendaḍe: Avarṇa, ādi, avyakta.
Ā nāmavu, bhargōdēvādi
pan̄camūrtigaḷige āśrayavāyitu.
Karaṇacatuṣṭayaṅgaḷige nilukadu.
Prāṇādi vāyugaḷige,
śrōtrādi jñānēndriyaṅgaḷige agamya.
Vākkādi karmēndriyagaḷige tōradu.
Nijānanda nityaparipūrṇa prasādavu
cennayyapriya nirmāya prabhuve,
nim'ma śaraṇarigallade uḷida jaḍajīvigaḷige asādhya.